ಆಲಿಕಲ್ಲು ಮಳೆಯ ಅಬ್ಬರಕ್ಕೆ ಕಬ್ಬು, ಭತ್ತ ಹಾನಿ

| Published : May 09 2024, 01:07 AM IST

ಸಾರಾಂಶ

ನಿರೀಕ್ಷೆಯಂತೆ ಭತ್ತದ ಬೆಳೆ ಕೊಯ್ಲಿನ ಹಂತ ತಲುಪಿತ್ತು. ಕೊಯ್ಲಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು. ಬರಗಾಲದ ನಡುವೆಯೂ ಬೆಳೆಯನ್ನು ಮನೆಗೆ ಕೊಂಡೊಯ್ಯುವುದಕ್ಕೆ ರೈತರು ಉತ್ಸುಕರಾಗಿದ್ದರು. ಈ ಮಧ್ಯೆ ದಿಢೀರನೇ ಆಗಮಿಸಿದ ಆಲಿಕಲ್ಲು ಮಳೆ ರೈತರ ನಿರೀಕ್ಷೆಯನ್ನೆಲ್ಲಾ ಹುಸಿಗೊಳಿಸಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಸೋಮವಾರ ರಾತ್ರಿ ಬಿದ್ದ ಆಲಿಕಲ್ಲು ಮಳೆಗೆ ತಾಲೂಕಿನ ಗೋಪಾಲಪುರ ಮತ್ತು ಸಾತನೂರಿನಲ್ಲಿ ಕಬ್ಬು ಮತ್ತು ಭತ್ತದ ಬೆಳೆಗೆ ತೀವ್ರ ಹಾನಿ ಸಂಭವಿಸಿದೆ. ಮಳೆಯ ಹೊಡೆತಕ್ಕೆ ಭತ್ತದ ತೆನೆ ಉದುರಿ ಹೋಗಿದ್ದರೆ, ಕಬ್ಬಿನ ಸುಳಿ ಮುರಿದುಕೊಂಡಿದೆ. ಇದರಿಂದ ರೈತರು ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ.

ಬರಗಾಲದ ನಡುವೆಯೂ ಗೋಪಾಲಪುರ ಗ್ರಾಮದ ರೈತರು ಸುಮಾರು ೩೦ ರಿಂದ ೪೦ ಎಕರೆ ಪ್ರದೇಶದಲ್ಲಿ ಕೆರೆಯಲ್ಲಿದ್ದ ಅಲ್ಪ- ಸ್ವಲ್ಪ ನೀರನ್ನು ಬಳಸಿಕೊಂಡು ಭತ್ತದ ಬೆಳೆ ಬೆಳೆದಿದ್ದರು. ಇನ್ನೂ ಹಲವು ರೈತರು ಕಬ್ಬಿನ ಬೆಳೆ ಬೆಳೆದಿದ್ದರು. ಕೆರೆಯಿಂದ ಪೈಪ್‌ಲೈನ್ ಸಂಪರ್ಕ ಆಳವಡಿಸಿಕೊಂಡು ಕಬ್ಬು ಮತ್ತು ಭತ್ತದ ಗದ್ದೆಗೆ ನೀರು ಹಾಯಿಸಿಕೊಂಡು ಬೆಳೆ ರಕ್ಷಣೆ ಮಾಡಿದ್ದರು.

ನಿರೀಕ್ಷೆಯಂತೆ ಭತ್ತದ ಬೆಳೆ ಕೊಯ್ಲಿನ ಹಂತ ತಲುಪಿತ್ತು. ಕೊಯ್ಲಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು. ಬರಗಾಲದ ನಡುವೆಯೂ ಬೆಳೆಯನ್ನು ಮನೆಗೆ ಕೊಂಡೊಯ್ಯುವುದಕ್ಕೆ ರೈತರು ಉತ್ಸುಕರಾಗಿದ್ದರು.

ಈ ಮಧ್ಯೆ ದಿಢೀರನೇ ಆಗಮಿಸಿದ ಆಲಿಕಲ್ಲು ಮಳೆ ರೈತರ ನಿರೀಕ್ಷೆಯನ್ನೆಲ್ಲಾ ಹುಸಿಗೊಳಿಸಿತು. ಆರು ತಿಂಗಳ ಕಾಲ ಶ್ರಮಪಟ್ಟು ಬೆಳೆದ ಬೆಳೆಯನ್ನು ಅರ್ಧ ಗಂಟೆ ಕಾಲ ಸುರಿದ ಆಲಿಕಲ್ಲು ಮಳೆ ತೀವ್ರವಾಗಿ ಹಾನಿ ಮಾಡಿತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಭತ್ತದ ತೆನೆ ಗದ್ದೆಯಲ್ಲೇ ಉದುರಿಹೋಗಿವೆ. ಮತ್ತೆ ಕೆಲವು ಭತ್ತದ ತೆನೆಗಳು ನೆಲಕಚ್ಚಿವೆ. ಕೆಲವರು ಭತ್ತವನ್ನು ಕೊಯ್ಲು ಮಾಡಿ ಗದ್ದೆಯಲ್ಲೇ ಒಣಗಿಹಾಕಿದ್ದರು. ಅದೂ ಕೂಡ ಮಳೆಯ ಹೊಡೆತಕ್ಕೆ ಜರ್ಜರಿತವಾಗಿದೆ. ಇದರಿಂದ ಮಳೆಯಿಲ್ಲದೇ ಹಲವು ರೈತರು ಜಮೀನಿನಲ್ಲಿ ಬೆಳೆ ಬೆಳೆಯದೇ ಖಾಲಿ ಬಿಟ್ಟಿದ್ದರೆ, ಇನ್ನೂ ಹಲವು ರೈತರು ಕೆರೆಯ ನೀರನ್ನೇ ಬಳಸಿಕೊಂಡು ಭತ್ತ ಬೆಳೆದರೂ ಕೈಗೆ ಸೇರಿಸಿಕೊಳ್ಳಲಾಗದೇ ನಷ್ಟ ಅನುಭವಿಸಿದ್ದಾರೆ.

ಇನ್ನು ಕಬ್ಬು ಬೆಳೆದವರ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆಲಿಕಲ್ಲು ಮಳೆಯ ಹೊಡೆತ ತಿಂದ ಕಬ್ಬಿನ ಸುಳಿಗಳು ಮುರಿದುಹೋಗಿವೆ. ಗರಿಗಳು ಸೀಳುಬಿಟ್ಟಿವೆ. ಕಬ್ಬಿನ ಸುಳಿ ಹಾಳಾಗಿರುವುದರಿಂದ ತೀವ್ರ ಬೆಳೆ ನಷ್ಟ ಉಂಟಾಗಿದೆ. ರೈತರು ಹಗಲು-ರಾತ್ರಿ ಎನ್ನದೇ ನೀರು ಹರಿಸಿ ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದರು. ಆ ಬೆಳೆಯನ್ನು ಉಳಿಸಿಕೊಳ್ಳಲಾಗಲಿಲ್ಲವೆಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ.

ಸಾತನೂರಿನಲ್ಲೂ ನೂರಾರು ಎಕರೆ ಕಬ್ಬು ಹಾನಿ:

ಸೋಮವಾರ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆಗಳು ಹಾನಿಗೊಳಗಾಗಿವೆ. ತಾಲೂಕಿನ ಸಾತನೂರು ಗ್ರಾಮದ ಹಾನಿಯಾದ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ಕೊರತೆ ಹಿನ್ನೆಲೆಯಲ್ಲಿ ಕೊಳವೆ ಬಾವಿ ಆಶ್ರಯಿಸಿಕೊಂಡು ರೈತರು ಕಬ್ಬಿನ ಬೆಳೆ ಬೆಳೆದಿದ್ದರು. ಬೆಳೆಯೂ ಉತ್ತಮವಾಗಿ ಬಂದಿದ್ದರಿಂದ ಖುಷಿಯಾಗಿದ್ದರು. ವಿದ್ಯುತ್ ಕೊರತೆ ನಡುವೆಯೂ ವಿದ್ಯುತ್ ಬಂದಾಗ ಗದ್ದೆಗೆ ನೀರು ಹಾಯಿಸಿಕೊಂಡು ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದರು. ಕೆಲವರು ಲಕ್ಷಾಂತರ ರು. ಖರ್ಚು ಮಾಡಿ ಕೊಳವೆ ಬಾವಿ ಕೊರೆಸಿ ಕಬ್ಬು ಬೆಳೆಗೆ ನೀರಿನ ಆಸರೆ ಒದಗಿಸಿದ್ದರು. ಆಲಿಕಲ್ಲು ಮಳೆಯಿಂದಾಗಿ ಕಬ್ಬಿನ ಸುಳಿಗೆ ಹೊಡೆತ ಬಿದ್ದು, ಸುಳಿ ಸಹಿತ ಗರಿಗಳಿಗೂ ಹಾನಿಯಾಗಿದೆ. ಇದರಿಂದ ಬೆಳೆನಷ್ಟಕ್ಕೊಳಗಾದ ರೈತರು ದಿಕ್ಕೆಟ್ಟು ಕುಳಿತಿದ್ದಾರೆ.

ಸಾತನೂರು ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಕಂದಾಯಾಧಿಕಾರಿ ಮನೋಹರ್, ಗ್ರಾಮ ಲೆಕ್ಕಿಗೆ ಲಿಖಿತಾ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಗಾಳಿ ಮತ್ತು ಮಳೆಗೆ ಕಬ್ಬು ಬೆಳೆ ನೆಲಕಚ್ಚಿದೆ. ಅದೇ ರೀತಿ ಕಬ್ಬಿನ ಗರಿ ಮತ್ತು ಸುಳಿ ನಾಶವಾಗಿದೆ. ಆದ್ದರಿಂದ ರೈತರು ಸೂಕ್ತ ದಾಖಲೆಗಳನ್ನೂ ನೀಡಬೇಕು , ಕೃಷಿ ಇಲಾಖೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ತನಿಖೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಗ್ರಾಮಸ್ಥರಾದ ಸಿ.ಅಶೋಕ್, ಜಯರಾಮ್, ರವಿ , ಮಹೇಂದ್ರ , ಮರಿಸಿದ್ದಪ್ಪ, ಕೃಷ್ಣ, ಸುರೇಶ, ಸುನಿ, ಚಂದ್ರಶೇಖರ್, ಚಂದ್ರು ಹಾಜರಿದ್ದರು.

‘ಸೋಮವಾರ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಸಾತನೂರು ಗ್ರಾಮದಲ್ಲಿ ವಿವಿಧ ಬೆಳೆಗಳು ನಾಶವಾಗಿದೆ. ಈ ವಿಷಯವನ್ನು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದೆವು. ಮಂಗಳವಾರ ತಹಸೀಲಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಕೃಷಿ ತ್ರಾಂತಿಕ ಇಲಾಖೆಯವರು ಭೇಟಿ ನೀಡಿ ಶೇ.೨೫ರಷ್ಟು ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಕೂಡಲೇ ನಷ್ಟದ ಪರಿಹಾರ ಒದಗಿಸಬೇಕು.’

- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ

‘ಕೆರೆ ನೀರನ್ನು ಆಶ್ರಯಿಸಿಕೊಂಡು ಬೆಳೆ ಬೆಳೆದಿದ್ದೆವು. ಭತ್ತದ ಬೆಳೆಯೂ ಉತ್ತಮವಾಗಿ ಕೊಯ್ಲಿನ ಹಂತ ತಲುಪಿತ್ತು. ಮಳೆ ನಾಲ್ಕೈದು ದಿನ ತಡೆದಿದ್ದರೆ ಬೆಳೆಯನ್ನು ಮನೆ ಸೇರಿಸಿಕೊಳ್ಳುತ್ತಿದ್ದೆವು. ಅಕಾಲಿಕವಾಗಿ ಎದುರಾದ ಮಳೆಯಿಂದ ಭತ್ತದ ತೆನೆಗಳು ಗದ್ದೆಯಲ್ಲೇ ಉದುರಿಹೋಗಿವೆ. ಇಳುವರಿ ಕುಸಿತಗೊಂಡಿದೆ. ತೆನೆಯೆಲ್ಲಾ ಉದುರಿಹೋದ ಮೇಲೆ ಭತ್ತ ಕೊಯ್ಲು ಮಾಡಿದರೂ ಹೆಚ್ಚೇನೂ ಸಿಗುವುದೇ ಇಲ್ಲ. ಆಲಿಕಲ್ಲು ಮಳೆಯು ರೈತರಿಗೆ ಸಾಕಷ್ಟು ನಷ್ಟ ಉಂಟುಮಾಡಿದೆ.’

-ಶ್ರೀನಿವಾಸ್, ರೈತ, ಗೋಪಾಲಪುರ