ಫೇಲಾಗುವ ಭೀತಿಯಿಂದ ವಿದ್ಯಾರ್ಥಿ ಆತ್ಮಹತ್ಯೆ

| Published : May 10 2024, 01:37 AM IST

ಫೇಲಾಗುವ ಭೀತಿಯಿಂದ ವಿದ್ಯಾರ್ಥಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುತ್ತೇನೆಂಬ ಭಯದಲ್ಲಿ ಫಲಿತಾಂಶ ಬರುವ ದಿನವಾದ ಗುರುವಾರ ಬೆಳಗ್ಗೆಯೇ ಮನೆಯಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಗುರುವಾರ ನಡೆದಿದೆ.

- ರಾತ್ರಿ ಊಟ ಮಾಡಿ ಮಲಗಿದ್ದ ಕುಶಾಲ್ ಬೆಳಗ್ಗೆ ಶ‍ವವಾಗಿದ್ದ!

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುತ್ತೇನೆಂಬ ಭಯದಲ್ಲಿ ಫಲಿತಾಂಶ ಬರುವ ದಿನವಾದ ಗುರುವಾರ ಬೆಳಗ್ಗೆಯೇ ಮನೆಯಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನಲ್ಲಿ ಗುರುವಾರ ನಡೆದಿದೆ.

ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಆರ್.ಕುಶಾಲ್ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಓದಿನಲ್ಲಿ ಚೂಟಿಯಾಗಿದ್ದ ಕುಶಾಲ್ ಕಳೆದ ರಾತ್ರಿ ಎಲ್ಲರ ಜೊತೆ ಮನೆಯಲ್ಲಿ ನಗುತ್ತಲೇ ಊಟ ಮಾಡಿ, ಮಲಗಿದ್ದ. ಆದರೆ, ಅನುತ್ತೀರ್ಣನಾಗುವ ಭಯದಲ್ಲೇ ರಾತ್ರಿ ಕಳೆದಿದ್ದಾನೆ.

ರಾತ್ರಿ ಮಲಗಿದ್ದ ಕುಶಾಲ್ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಎದ್ದ ಮನೆಯವರು ನೋಡಿದಾಗ ಕುಶಾಲ ನೇಣಿಗೆ ಶರಣಾಗಿದ್ದು ಕಂಡು ಬೆಚ್ಚಿಬಿದ್ದು, ಕೂಗಿಕೊಂಡಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಾಗ ಕುಶಾಲ್‌ ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ ಅನುತ್ತೀರ್ಣನಾಗಿದ್ದನು. ಕನ್ನಡದಲ್ಲಿ 80 ಅಂಕ, ಇಂಗ್ಲಿಷ್ 29, ಹಿಂದಿ 46, ಗಣಿತ 47, ಸಮಾಜ ವಿಜ್ಞಾನ 47 ಸೇರಿದಂತೆ ಒಟ್ಟು 273 ಅಂಕ ಪಡೆದಿದ್ದಾನೆ.

ಅತ್ತ ಮಗನನ್ನೇ ಕಳೆದುಕೊಂಡ ಹೆತ್ತವರು, ಕುಟುಂಬ ವರ್ಗದ ರೋದನ ಮುಗಿಲುಮುಟ್ಟಿತ್ತು. ಅನುತ್ತೀರ್ಣ ಆಗಿದ್ದರೂ ಮನೆಯಲ್ಲಿ ಯಾರೂ, ಏನೂ ಅನ್ನುತ್ತಿರಲಿಲ್ಲ. ಏಕೆ ಹೀಗೆ ಮಾಡಿಕೊಂಡೆ ಮಗನೇ ಅಂತಾ ಇಡೀ ಕುಟುಂಬ ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು.

- - - -9ಕೆಡಿವಿಜಿ18:

ಆರ್.ಕುಶಾಲ್.