ಶ್ರೀನಿವಾಸ್‌ ಪ್ರಸಾದ್‌ ಎಂದರೆ ಶಕ್ತಿ: ಶಾಸಕ ಗಣೇಶ್‌

| Published : May 10 2024, 01:36 AM IST

ಸಾರಾಂಶ

ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಈ ಭಾಗದ ಶಕ್ತಿಯಾಗಿ ಹೊರ ಹೊಮ್ಮಿದ್ದರು, ಯಾವ ಪಕ್ಷದಲ್ಲಿದ್ರೂ ಆ ಪಕ್ಷಕ್ಕೆ ಶಕ್ತಿಯಾಗಿ ಇರುತ್ತಿದ್ದರು ಎಂದು ಕಾಂಗ್ರೆಸ್‌ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಈ ಭಾಗದ ಶಕ್ತಿಯಾಗಿ ಹೊರ ಹೊಮ್ಮಿದ್ದರು, ಯಾವ ಪಕ್ಷದಲ್ಲಿದ್ರೂ ಆ ಪಕ್ಷಕ್ಕೆ ಶಕ್ತಿಯಾಗಿ ಇರುತ್ತಿದ್ದರು ಎಂದು ಕಾಂಗ್ರೆಸ್‌ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಕಾಂಗ್ರೆಸ್‌ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಆಯೋಜಿಸಿದ್ದ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿ. ಶ್ರೀನಿವಾಸ್‌ ಪ್ರಸಾದ್‌ 2 ಬಾರಿ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದರು. ಆದರೆ ಕಾಂಗ್ರೆಸ್‌, ಸಂಯುಕ್ತ ಜನತಾ ದಳ, ಬಿಜೆಪಿ ಸಂಸದರಾಗಿ ಕೆಲಸ ಮಾಡಿದ್ದರು. ಲೋಕಸಭೆ ಕ್ಷೇತ್ರದಲ್ಲಿ ತುಂಬ ಒಡನಾಟ ಕೂಡ ಇತ್ತು ಎಂದರು.

ಇತ್ತೀಚೆಗೆ ತಾನೇ ಸಿಎಂ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೊಂದಿಗೆ ಎರಡು ಬಾರಿ ಭೇಟಿ ಮಾಡಿ ಮಾತನಾಡಿದ್ದೇ ಎಂದು ಮೆಲುಕು ಹಾಕಿದರು.

ಅಚಲ ನಿರ್ಧಾರ: ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಕೊನೆಯ ದಿನಗಳಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಕೊನೆಯ ದಿನಗಳಲ್ಲಿಯೂ ಯಾವ ಪಕ್ಷ ಬೆಂಬಲಿಸದೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ನುಡಿದಂತೆ ನಡೆದುಕೊಂಡರು ಎಂದರು.

ಕೊಡುಗೆ ಇದೆ:

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ವಿ. ಶ್ರೀನಿವಾಸ್‌ ಪ್ರಸಾದ್‌ ಸಂಸದರಾಗಿ ಕೊಡುಗೆ ನೀಡಿದ್ದಾರೆ. ಆರೋಗ್ಯದ ಸಮಸ್ಯೆಯಿದ್ದರೂ ತಮ್ಮ ಸೇವೆ ಮುಂದುವರಿಸಿದ್ದರು ಎಂದರು.

ಎಲ್ಲಾ ವರ್ಗದ ಧ್ವನಿ:

ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಕೇವಲ ದಲಿತ ವರ್ಗಕ್ಕೆ ಸೀಮಿತರಾಗಿ ಇರಲಿಲ್ಲ. ಎಲ್ಲಾ ವರ್ಗದ ನಾಯಕರಾಗಿದ್ದರು. ಅಲ್ಲದೆ ಎಲ್ಲಾ ವರ್ಗದ ಧ್ವನಿ ಕೂಡ ಆಗಿದ್ದರು ಎಂದರು.

ಸಿದ್ಧಾಂತ ಬಿಡಲಿಲ್ಲ: ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಯಾವುದೇ ಪಕ್ಷಕ್ಕೆ ಹೋದರೂ ಅವರು ನಂಬಿದ ಸಿದ್ಧಾಂತ ಬಿಟ್ಟು ಕೊಡಲಿಲ್ಲ. ತಾವು ನಂಬಿದ ಸಿದ್ಧಾಂತದಂತೆ ನಡೆದುಕೊಂಡು ಮಾದರಿ ಎನಿಸಿದರು ಎಂದರು.

ಮಾಜಿ ಸಂಸದ ಎ. ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ತಾಪಂ ಮಾಜಿ ಸದಸ್ಯ ಮುಕ್ಕಡಹಳ್ಳಿ ರವಿಕುಮಾರ್‌, ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ ಹಾಗೂ ಮುಖಂಡ ಮೂಡ್ನಾಕೂಡು ಪರಶಿವಮೂರ್ತಿ ಮಾತನಾಡಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಅವರ ಬಗ್ಗೆ ಗುಣಗಾನ ಮಾಡಿದರು.

ಅಕ್ಷರ ಸಾಹಿತಿ ಗುಂಡ್ಲುಪೇಟೆ ಮಾಧು ನಾಯಕ(ಮಾಧು) ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಒಂದೊಂದು ಅಕ್ಷರಕ್ಕೆ ವಾಕ್ಯ ಬಳಸಿ ವಾಚಿಸಿ, ಸಭಿಕರು ಗಮನ ಸೆಳೆದರು.

ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ, ಜಿಪಂ ಮಾಜಿ ಸದಸ್ಯ ಬಿ.ಕೆ. ಬೊಮ್ಮಯ್ಯ, ಪಿ. ಚನ್ನಪ್ಪ, ಹಂಗಳನಾಗರಾಜು, ತಾಪಂ ಮಾಜಿ ಅಧ್ಯಕ್ಷ ಎಂ.ಬಿ. ರೇವಣ್ಣ ಮಲೆಯೂರು, ಎಚ್.ಎನ್. ಬಸವರಾಜು ಹಾಗೂ ನೂರಾರು ಮಂದಿ ಕಾಂಗ್ರೆಸ್‌, ವಿ. ಶ್ರೀನಿವಾಸ್‌ ಪ್ರಸಾದ್‌ ಅಭಿಮಾನಿಗಳಿದ್ದರು.

ಗುಂಡ್ಲುಪೇಟೆ

ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ನಿಧನದ ಹಿನ್ನೆಲೆ ಕಾಂಗ್ರೆಸ್‌ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಶ್ರದ್ಧಾಂಜಲಿ ಸಭೆ ನಡೆಸಿ, ಬಿಜೆಪಿಗರೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಕ್ಷೇತ್ರದ ಬಿಜೆಪಿ ಸಂಸದರೂ ಆದ ಬಿಜೆಪಿ ಹಿರಿಯ ನಾಯಕ ವಿ. ಶ್ರೀನಿವಾಸ್‌ ಪ್ರಸಾದ್‌ ನಿಧನದ ಬಳಿಕ ಬಿಜೆಪಿಗರು ಶ್ರದ್ಧಾಂಜಲಿ ಸಭೆ ನಡೆಸುವುದಕ್ಕೂ ಮುನ್ನವೇ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಆಸಕ್ತಿ ವಹಿಸಿ ಶ್ರದ್ಧಾಂಜಲಿ ಸಭೆ ನಡೆಸಿದ್ದಾರೆ.