ಸಿಂಧನೂರು: ಶೇ.66.01ರಷ್ಟು ಶಾಂತಿಯುತ ಮತದಾನ

| Published : May 08 2024, 01:04 AM IST

ಸಾರಾಂಶ

4 ಗಂಟೆ ನಂತರ ಮಹಿಳೆಯರು, ವೃದ್ಧೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಹಲವಾರು ಯುವಕರು, ಯುವತಿಯರು ಮೊದಲ ಬಾರಿ ಮತ ಹಾಕಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಅಂಗವಾಗಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಪ್ಯಾರಾ ಮಿಲಿಟರಿ, ಪೊಲೀಸ್ ಬಿಗಿ ಭದ್ರತೆಯಲ್ಲಿ ಶೇ.66.01 ರಷ್ಟು ಶಾಂತಿಯುತ ಮತದಾನವಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ದೇಸಾಯಿ ತಿಳಿಸಿದ್ದಾರೆ.

ಬೆಳಗ್ಗೆಯಿಂದಲೇ ವಿವಿಧ ವಾರ್ಡ್‌ಗಳ ಮತದಾರರು ಕುಟುಂಬ ಸಮೇತ ಹಾಗೂ ತಂಡೋಪ ತಂಡವಾಗಿ ಮತಗಟ್ಟೆಗಳಿಗೆ ಬಂದು ಸ್ವಯಂಪ್ರೇರಿತರಾಗಿ ಮತ ಚಲಾಯಿಸಿದರು. ಮಹಿಳೆಯರು, ವೃದ್ಧ-ವೃದ್ಧೆಯರನ್ನು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರು ಆಟೋಗಳಲ್ಲಿ ಕರೆದುಕೊಂಡು ಬಂದು ಬೂತ್ ಸಂಖ್ಯೆಯ ಚೀಟಿ ಬರೆದುಕೊಟ್ಟು ತಮ್ಮ ಪಕ್ಷಕ್ಕೆ ಮತದಾನ ಮಾಡಲು ಮನವಿ ಮಾಡಿದರು. ಮತದಾರರು ಬಿಸಿಲಿನ ಸೆಕೆಯಿಂದ ಬೆವರು ಸುರಿಸುತ್ತಾ ಮತಗಟ್ಟೆ ಮುಂದೆ ನಿಂತು ಮತ ಹಾಕಿದರು. 4 ಗಂಟೆ ನಂತರ ಮಹಿಳೆಯರು, ವೃದ್ಧೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಹಲವಾರು ಯುವಕರು, ಯುವತಿಯರು ಮೊದಲ ಬಾರಿ ಮತ ಹಾಕಿ ಸಂಭ್ರಮಿಸಿದರು.

ಕ್ಷೇತ್ರದಾದ್ಯಂತ ಸ್ಥಾಪಿಸಲ್ಪಟ್ಟ 269 ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ, ಎಪಿಆರ್‌ಒ ಸೇರಿ ಐದು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆಯಿಂದ ನೂರು ಮೀಟರ್ ಅಂತರದಲ್ಲಿ ಜನಸಂಚಾರ ನಿಷೇಧ ಮಾಡಲಾಗಿತ್ತು. ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಶಾಂತಿಯುತ ಮತದಾನಕ್ಕೆ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.