ಮನೆಯಲ್ಲೇ ಮತ ಹಾಕಿದ ಹಿರಿಯರು

| Published : Apr 26 2024, 12:45 AM IST

ಸಾರಾಂಶ

ಮೊದಲ ದಿನ 85 ವರ್ಷ ಮೇಲ್ಪಟ್ಟ ಹಿರಿಯರು, ಅಂಗವಿಕಲರು ಸೇರಿ ಒಟ್ಟು 1953 ಮತದಾರರು ಹಕ್ಕು ಚಲಾಯಿಸಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ನೀಡಿರುವ ವಿಶೇಷ ಸೌಲಭ್ಯ ಬಳಸಿಕೊಂಡು ಜಿಲ್ಲೆಯ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿ ಹೆಮ್ಮೆಯಿಂದ ಬೀಗಿದರು.

ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಪತ್ರ ನೀಡಿರುವ 85 ವರ್ಷ ಮೇಲ್ಪಟ್ಟ 3046 ಹಾಗೂ 1977 ಅಂಗವಿಕಲ ಮತದಾರರ ಮನೆಗಳಿಗೆ ವೇಳಾಪಟ್ಟಿ ಮತ್ತು ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡಿರುವ ಮತಗಟ್ಟೆ ಸಿಬ್ಬಂದಿ ತೆರಳಿ ಮತದಾನ ಪ್ರಕ್ರಿಯೆಗಳನ್ನು ನಡೆಸಿದರು.

ಕಾರವಾರ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ 11ರ ವ್ಯಾಪ್ತಿಯಲ್ಲಿ, ಕಾರವಾರ ನಗರದ ಆಯುಷ್ ಆಸ್ಪತ್ರೆ ಬಳಿಯ ನಾಗಿ ಸುಕ್ರಿ ಶಿರಾಲಿಕರ್ ಎಂಬ 87 ವರ್ಷದ ವೃದ್ಧೆ ಯಾರ ನೆರವು ಪಡೆಯದೇ, ಅಧಿಕಾರಿಗಳು ತಿಳಿಸಿದ ಮಾದರಿಯಲ್ಲಿಯೇ ಮತಪತ್ರವನ್ನು ಬಿಡಿಸಿ, ಮತ ಹಾಕಿ, ಸಂಬಂಧಪಟ್ಟ ಲಕೋಟೆಯಲ್ಲಿಯೇ ಮತಪತ್ರವನ್ನು ಹಾಕಿ, ಮತಪೆಟ್ಟಿಗೆಗೆ ಕವರನ್ನು ಹಾಕಿದರು. ನಂತರ ಮಾತನಾಡಿದ ಅವರು ಅನಾರೋಗ್ಯದ ಕಾರಣ ನಡೆಯಲು ಸಾಧ್ಯವಿಲ್ಲವಾಗಿದ್ದು, ಮನೆ ಬಳಿಗೆ ನನ್ನ ಬಂದು ನನ್ನ ಮತ ಪಡೆದದ್ದು ‘ಬಾಳಾ ಛಲೋ ಆತ್ರಿ’ ಎಂದು, ಹೆಮ್ಮೆಯಿಂದ ಮತದಾನ ಮಾಡಿದ ತಮ್ಮ ಬೆರಳ ಗುರುತನ್ನು ತೋರಿಸಿ ಸಂಭ್ರಮಿಸಿದರು.

ಇದೇ ಪ್ರದೇಶದ ವ್ಯಾಪ್ತಿಯ 92 ವರ್ಷದ ವಯೋವೃದ್ದೆ ಸೋಮಾಯಿ ಲೋಕಪ್ಪ ಚಂಡೆಕರ್ ಕೂಡಾ ಯಾರ ಸಹಾಯವೂ ಪಡೆಯದೇ, ತಮಗೆ ಮತದಾನ ಮಾಡಿಸಲು ಬಂದ ಸಿಬ್ಬಂದಿಗೆ ಪ್ರೀತಿಯಿಂದ ಕೈಮುಗಿದರು, ಇದಕ್ಕೆ ಗೌರವ ಪ್ರತಿಕ್ರಿಯೆಯಾಗಿ ಸಿಬ್ಬಂದಿಯೊಬ್ಬರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಸಾಯಿ ಮಂದಿರದ ಬಳಿಯ 30 ವರ್ಷದ ಸಂತೇಷ್ ಎಂಬ ಅಂಗವಿಕಲ ಯುವಕ ಹಾಸಿಗೆ ಮೇಲೆ ಮಲಗಿಯೇ ತನ್ನ ತಾಯಿಯಿ ನೆರವನಿಂದ ಮತ ಚಲಾಯಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.

ಮನೆಯಿಂದ ಮತದಾನ ಮಾಡುವ ಅರ್ಹ ಮತದಾರರಿಗೆ, ಮುಂಚಿತವಾಗಿಯೇ ಮತಗಟ್ಟೆ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಬಿಎಲ್‌ಒಗಳ ಮುಖಾಂತರ ತಿಳಿಸಿದ್ದು, ತಾವು ಬರುವ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದ್ದರಿಂದ ಯಾವುದೇ ಗೊಂದಲಗಳಿಗೆ ಆಸ್ಪದವಾಗದೇ ಮತದಾನ ಪ್ರಕ್ರಿಯೆ ನಡೆಯಿತು.

ಮನೆಯಿಂದ ಮತದಾನ ಮಾಡುವ ಕಾರ್ಯವಿಧಾನದ ಬಗ್ಗೆ ಮತದಾರ ಕುಟುಂಬದವರಿಗೆ ವಿವರಿಸಿ, ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ, ಮತದಾನ ಮಾಡುವ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಮತದಾನ ಮಾಡುವ ಕೊಠಡಿಯಿಂದ ಹೊರೆಗೆ ನಿಲ್ಲಿಸಿ, ಗೋಪ್ಯತೆ ಕಾಪಾಡುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು.

ಮುಂಡಗೋಡದಲ್ಲಿ 14 ಜನರಿಂದ ಹಕ್ಕು ಚಲಾವಣೆ

ಮುಂಡಗೋಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮತದಾನ ಪ್ರಕ್ರಿಯೆಯನ್ನು ಗುರುವಾರ ಚುನಾವಣಾಧಿಕಾರಿ ನೇತೃತ್ವದಲ್ಲಿ ನಡೆಸಲಾಯಿತು.ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆ ಮನೆಗೆ ತೆರಳಿದ ಚುನಾವಣಾಧಿಕಾರಿ ಮತ್ತು ಸಿಬ್ಬಂದಿ ನಿಯಮಾನುಸಾರವಾಗಿ ಬ್ಯಾಲೆಟ್ ಪೇಪರ್‌ಗೆ ಗುರುತು ಹಾಕುವ ಮೂಲಕ ಮತದಾನ ಮಾಡಿದರು. ಈ ಸಂದರ್ಭದಲ್ಲಿ ವಿಡಿಯೋ ಚಿತ್ರಿಕರಣ ಮಾಡಲಾಯಿತು. ಪಟ್ಟಣದಲ್ಲಿ ೬ ಜನ ಅಂಗವಿಕಲರು ಮತ್ತು ೮ ಜನ ೮೫ ವರ್ಷ ಮೇಲ್ಪಟ್ಟ ವಯೋಮಾನದವರು ಸೇರಿದಂತೆ ಒಟ್ಟು ೧೪ ಜನರಿಂದ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಮುಂಡಗೋಡ ಚುನಾವಣಾ ಸೆಕ್ಟರ್ ಅಧಿಕಾರಿ ಚಂದ್ರಶೇಖರ ಪೋಲಿಂಗ್ ಅಧಿಕಾರಿ, ಮೈಕ್ರೋ ವೀಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಚುನಾವಣಾ ಮತದಾನ ಪ್ರಕ್ರಿಯೆಯನ್ನು ನಡೆಸಿದರು.