ಉತ್ತರ ಕನ್ನಡ ಸಮಗ್ರ ಅಭಿವೃದ್ಧಿಗೆ ಸಂಕಲ್ಪ: ರವಿ ಹೆಗಡೆ

| Published : Apr 27 2024, 01:19 AM IST

ಸಾರಾಂಶ

ದೇಶದಲ್ಲೇ ಹೊಸ ಯೋಚನೆ ರೂಪಿಸಲು ಮುಂದಾಗಿದ್ದು, ಸಂಸತ್ ಸದಸ್ಯರ ಸಂಚಾರಿ ಕಚೇರಿ (ಮೊಬೈಲ್ ಆಫೀಸ್) ಸ್ಥಾಪನೆ ಬಗ್ಗೆ ಸಂಕಲ್ಪ ಪತ್ರದಲ್ಲಿ ತಿಳಿಸಲಾಗಿದೆ.

ಕಾರವಾರ: ಉತ್ತರ ಕನ್ನಡದ ಸಮಗ್ರ ಅಭಿವೃದ್ಧಿ, ಭವಿಷ್ಯವನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ಸಂಕಲ್ಪ ಪತ್ರ (ಪ್ರಣಾಳಿಕೆ) ತಯಾರಿಸಲಾಗಿದೆ ಎಂದು ಬಿಜೆಪಿ ಮುಖಂಡ ರವಿ ಹೆಗಡೆ ಹೂವಿನಮನೆ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೦ ವರ್ಷದಲ್ಲಿ ಕೇಂದ್ರದ ನೆರವಿನಿಂದ ಸಾಕಷ್ಟು ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಿರುವುದು ಸಾಕಷ್ಟಿದ್ದು, ಕೃಷಿ, ಅರಣ್ಯ, ಪ್ರವಾಸೋದ್ಯಮ, ಸಹಕಾರ, ಆರೋಗ್ಯ, ನಗರಾಭಿವೃದ್ಧಿ ಇತ್ಯಾದಿ ಕ್ಷೇತ್ರಗಳಾಗಿ ವಿಂಗಡಣೆ ಮಾಡಿ ಅಭಿವೃದ್ಧಿ ದಿಕ್ಸೂಚಿಯನ್ನು ಸಂಕಲ್ಪ ಪತ್ರದಲ್ಲಿ ದಾಖಲಿಸಲಾಗಿದೆ ಎಂದರು.

ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಿ ರೈತರಿಗೆ, ಹೈನುಗಾರರಿಗೆ ಅನುಕೂಲ ಮಾಡಿಕೊಡುವುದು. ಧಾರವಾಡ- ಕಿತ್ತೂರು- ಬೆಳಗಾವಿ ರೈಲ್ವೆ ಮಾರ್ಗಕ್ಕೆ ಆದ್ಯತೆ, ಅರಣ್ಯ ಅತಿಕ್ರಮಣ ಸಮಸ್ಯೆ ತ್ವರಿತಗತಿಯಲ್ಲಿ ಪರಿಹಾರಕ್ಕೆ ಕ್ರಮ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಎಂದರು.

ದೇಶದಲ್ಲೇ ಹೊಸ ಯೋಚನೆ ರೂಪಿಸಲು ಮುಂದಾಗಿದ್ದು, ಸಂಸತ್ ಸದಸ್ಯರ ಸಂಚಾರಿ ಕಚೇರಿ (ಮೊಬೈಲ್ ಆಫೀಸ್) ಸ್ಥಾಪನೆ ಬಗ್ಗೆ ಸಂಕಲ್ಪ ಪತ್ರದಲ್ಲಿ ತಿಳಿಸಲಾಗಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಇರುವ ಸಮಸ್ಯೆಯನ್ನು ಅರಿತು, ಅವುಗಳ ಪರಿಹಾರಕ್ಕಾಗಿ ನಡೆಸುವ ವಿಶೇಷ ಪ್ರಯತ್ನ ಇದಾಗಿದೆ ಎಂದರು.

ಕಳೆದ ೧೦ ವರ್ಷಗಳಲ್ಲಿ ಆದ ಅಭಿವೃದ್ಧಿ ಬಗ್ಗೆ ಕೇಳಿದಾಗ, ಯಾವ ಯಾವ ಯೋಜನೆ ಅನುಷ್ಠಾನವಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಸಮಿತಿಯಿದೆ ಎಂದ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಅಣೆಕಟ್ಟಿನ ವಿರುದ್ಧ ಪ್ರತಿಭಟನೆ ಮಾಡಿ ಈಗ ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಕುರಿತು ಪ್ರಶ್ನಿಸಿದಾಗ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅಂತರ್ಜಲ ಕುಸಿತವಾಗುತ್ತಿದೆ. ಅಂತರ್ಜಲ ಹೆಚ್ಚಿಸಲು ಅಗತ್ಯವಾಗಿರುವ ಕ್ರಮವಾಗಬೇಕು. ಈ ಕಿರು ಅಣೆಕಟ್ಟು ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬದಲಾಗಿ ಮಳೆನೀರು ಫೋಲಾಗುವುದನ್ನು ತಪ್ಪಿಸಿ ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಳವಾಗುವ ನಿಟ್ಟಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಸ್ ಗುನಗಿ, ಮಾಧ್ಯಮ ಸಹ ಸಂಚಾಲಕ ಕಿಶನ ಕಾಂಬ್ಳೆ, ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ, ಮನೋಜ ಭಟ್ ಇದ್ದರು.

ಪ್ರಣಾಳಿಕೆಯಲ್ಲಿ ಏನಿದೆ?

ತೋಟಗಾರಿಕ ಕ್ಷೇತ್ರವನ್ನಾಗಿ ಪರಿವರ್ತಿಸಿ ಕೇಂದ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ವಿಸ್ತರಿಸಲು ಕಾರ್ಯಯೋಜನೆ ಹಮ್ಮಿಕೊಳ್ಳುವುದು, ಆಧುನಿಕ ತಂತ್ರಜ್ಞಾನ ಬಳಸಿ ಪಶುಗಳ ಮೇವು ಅಭಿವೃದ್ಧಿ ಯೋಜನೆ, ಕೃಷಿ ಉತ್ಪನ್ನಗಳ ಮೌಲ್ಯರ್ಧನೆ ಮತ್ತು ಮಾರುಕಟ್ಟೆಗೆ ಪ್ರೋತ್ಸಾಹ, ಸೊಪ್ಪಿನ ಬೆಟ್ಟ ಅಭಿವೃದ್ಧಿ, ಅರಣ್ಯ ಪ್ರವಾಸೋದ್ಯಮ, ಕ್ಷೇತ್ರದ ಸಾಮಾಜಿಕ, ಸಾಂಸ್ಕೃತಿಕ, ಜಾನಪದ, ಪಾರಂಪರಿಕ ವೈವಿದ್ಯತೆಗಳನ್ನು ಪರಿಚಯಿಸುವ ಪ್ರವಾಸೋದ್ಯಮಕ್ಕೆ ಒತ್ತು, ಮಳೆನೀರು ಕೊಯ್ಲು, ಇಂಗುಗುಂಡಿಗಳ ರಚನೆಗೆ ಪ್ರೋತ್ಸಾಹ, ಅನುಷ್ಠಾನಕ್ಕೆ ತ್ವರಿತ ಕ್ರಮ ಮಣ್ಣು ಆರೋಗ್ಯ ಪತ್ರ ಪರಿಣಾಮಕಾರಿ ಅನುಷ್ಠಾನ ಮಾಡಲಾಗುವುದು.