ನೀರಿಗಾಗಿ ನಗರಸಭೆ ವಿರುದ್ಧ ಪ್ರತಿಭಟನೆ

| Published : May 10 2024, 01:38 AM IST

ಸಾರಾಂಶ

ಸಾರ್ವಜನಿಕರು ಹಾಗೂ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಕುಡಿಯಲು ನೀರು ಕೊಡಿ... ಕುಡಿಯಲು ನೀರು ಕೊಡಿ ಎಂದು ಘೋಷಣೆಯನ್ನು ಕೂಗಿದರು.

ಶಿರಸಿ: ಇಲ್ಲಿನ ಗಣೇಶನಗರದ ಮಾರುತಿ ದೇವಸ್ಥಾನದ ಹತ್ತಿರ ಸುಮಾರು ೧೫೦ ಮನೆಗಳಿಗೆ ಕಳೆದ ೮ ದಿನಗಳಿಂದ ಕುಡಿಯುವ ನೀರಿಲ್ಲದೇ, ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ. ನಗರಸಭೆಗೆ ದೂರವಾಣಿ ಮೂಲಕ ತಿಳಿಸಿದರೂ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಸ್ಥಳಕ್ಕೆ ಆಗಮಿಸದೆ ನೀರಿನ ವ್ಯವಸ್ಥೆ ಮಾಡದಿರುವುದುಈ ಭಾಗದ ಸಾರ್ವನಿಕರ ಆಕ್ರೋಶಕ್ಕೆ ಗುರಿಯಾಗಿದೆ.ಗುರುವಾರ ಮಧ್ಯಾಹ್ನ ಬಂದ ನಗರಸಭೆ ಅಧಿಕಾರಿಗಳು ಹೇಳದೆ ಕೇಳದೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಆಕ್ರೋಶಗೊಂಡ ಸಾರ್ವಜನಿಕರು ದಿಢೀರ್ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದರು.

ನಂತರ ಪೊಲೀಸರ ಸಮಕ್ಷಮದಲ್ಲಿ ಅಧಿಕಾರಿಗಳು ಬಂದಾಗ ಈ ಭಾಗದ ಸಾರ್ವಜನಿಕರು ಹಾಗೂ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಕುಡಿಯಲು ನೀರು ಕೊಡಿ... ಕುಡಿಯಲು ನೀರು ಕೊಡಿ ಎಂದು ಘೋಷಣೆಯನ್ನು ಕೂಗಿದರು.ನಂತರ ಸಾರ್ವಜನಿಕರೊಂದಿಗೆ ಮಾತನಾಡಿದ ನಗರಸಭೆಯ ಅಧಿಕಾರಿ, ಎರಡು ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗುವುದು. ಅಲ್ಲಿಯವರೆಗೆ ಒಂದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಯ ಭರವಸೆಯ ನಂತರ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ರಾಜಾನಂದ ದೇಶಳ್ಳಿ, ಶಿವಾನಂದ ದೇಶಳ್ಳಿ ಹಾಗೂ ಸುಮಾರು ೭೦ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು.