28ಕ್ಕೆ ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆಗೆ

| Published : Apr 26 2024, 12:55 AM IST

ಸಾರಾಂಶ

ಬಾಗಲಕೋಟೆ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದರು.

ನವನಗರದಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮದ ಸಿದ್ಧತೆಗೆ ವೇದಿಕೆ ನಿರ್ಮಾಣ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಅಂದು ಮಧ್ಯಾಹ್ನ 3ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಗಳ ಎಲ್ಲ ಮುಖಂಡರು, ಕಾರ್ಯಕರ್ತರು ಸೇರಿ ಅಂದಾಜು 2 ಲಕ್ಷ ಜನರು ಸೇರುವ ನಿರೀಕ್ಷೆ ಎಂದು ತಿಳಿಸಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನವನಗರದ 2ನೇ ಯೂನಿಟ್‌ನಲ್ಲಿ ಒಟ್ಟು 4 ಸೆಕ್ಟರ್ ನೂರು ಎಕರೆ ಜಮೀನಿನಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿದ್ದು, ಈ ಸ್ಥಳದಲ್ಲೇ ಮೂರು ಹೆಲಿಪ್ಯಾಡ್‌ ನಿರ್ಮಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಹೆಚ್ಚಿನ ಭದ್ರತೆ ಇರುವುದರಿಂದ ಜನರು 2.30ರ ಒಳಗಾಗಿ ಆಗಮಿಸಿ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಕಾರ್ಯಕ್ರಮ ಯಶಸ್ಸು ಮಾಡಲು ಕಾರ್ಯಕರ್ತರು ಕೈ ಜೋಡಿಸಬೇಕು. ದೊಡ್ಡ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಬಿಜೆಪಿ ಬಸ್ ಇದ್ದಂತೆ ಹತ್ತುವವರು ಹತ್ತುತ್ತಾರೆ ಇಳಿಯುವವರು ಇಳಿಯುತ್ತಾರೆ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ. ಈ ಭಾರಿ ಗದ್ದಿಗೌಡರ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಯಂಕಂಚಿ, ಯಲ್ಲಪ್ಪ ಬೆಂಡಿಗೇರಿ, ರಾಜು ನಾಯ್ಕರ, ಅಶೋಕ ಲಿಂಬಾವಳಿ, ಸಂಗಮೇಶ ಹಿತ್ತಲಮನಿ ಹಲವರು ಇದ್ದರು.

ಮಹಿಳಾ ಫಲಾನುಭವಿಗಳಿಂದ ನಮೋ ಸತ್ಕಾರ: ಏ.27 ರಂದು ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಮಾಡಲಿದ್ದಾರೆ. ಕಾರ್ಯಕ್ರಮ ಸಿದ್ಧತೆಗಾಗಿ 28 ವಿಭಾಗ ಮಾಡಲಾಗಿದೆ. ಸಮಾವೇಶಕ್ಕೆ ಬರುವ ಜನರಿಗೆ ನೀರು ಪೂರೈಕೆ ಸೇರಿದಂತೆ ಎಲ್ಲ ವ್ಯವಸ್ಥೆ ಪ್ರಬಂಧಕರಿಂದ ನಡೆಯಲಿದೆ. ಕೇಂದ್ರದ ವಿವಿಧ ಯೋಜನೆಗಳ 5 ಮಹಿಳಾ ಫಲಾನುಭವಿಗಳಿಂದ ಪ್ರಧಾನಿ ಮೋದಿ ಅವರಿಗೆ ಸತ್ಕಾರ ನಡೆಯಲಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆದವರು ಮೋದಿ ಅವರ ಸ್ವಾಗತ ಸಂದರ್ಭದಲ್ಲಿ ಇರಲಿದ್ದಾರೆ ಎಂದು ಮುಖಂಡ ಜಗದೀಶ ಹಿರೇಮನಿ ತಿಳಿಸಿದರು.