ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಿದ್ಧತೆ

| Published : May 09 2024, 12:45 AM IST

ಸಾರಾಂಶ

ಮತ ಚಲಾವಣೆಗೊಂಡ ವಿದ್ಯುನ್ಮಾನ ಮತಯಂತ್ರಗಳನ್ನು (ಇ.ವಿ.ಎಂ) ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂನ್ 4 ರಂದು ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮತ ಎಣಿಕೆ ಸಂಬಂಧ ವಿಷಯಗಳ ಕುರಿತು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೂನ್‌ 4ರಂದು ಮತ ಎಣಿಕೆ

ಮತ ಚಲಾವಣೆಗೊಂಡ ವಿದ್ಯುನ್ಮಾನ ಮತಯಂತ್ರಗಳನ್ನು (ಇ.ವಿ.ಎಂ) ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಇಲ್ಲಿ ಬಿಗಿ ಭದ್ರತೆ ಇದೆ. ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿಯೇ ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಗೌರಿಬಿದನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 26 ಸುತ್ತಿನಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 27 ಸುತ್ತಿನಲ್ಲಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 26 ಸುತ್ತಿನಲ್ಲಿ ನಡೆಯಲಿದೆ.

ಯಲಹಂಕ ಕ್ಷೇತ್ರ ಮತ ಎಣಿಕೆ

ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 14 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 30 ಸುತ್ತಿನಲ್ಲಿ, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ನಡೆಯಲಿದ್ದು, ಒಟ್ಟು 30 ಸುತ್ತಿನಲ್ಲಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ 30 ಸುತ್ತಿನಲ್ಲಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಟೇಬಲ್ ಗಳಲ್ಲಿ ಒಟ್ಟು 28 ಸುತ್ತಿನಲ್ಲಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ನಡೆಯಲಿದ್ದು, ಒಟ್ಟು 28 ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದರು. ಅಂಚೆಮತಗಳ ಎಣಿಕೆ

ಅಂಚೆ ಮತದಾನದ ಮತ ಎಣಿಕೆಯು 10 ಟೇಬಲ್ ಗಳಲ್ಲಿ ಒಂದು ಸುತ್ತಿನಲ್ಲಿ ನಡೆಯಲಿದೆ. ಯಲಹಂಕ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಅಂಚೆ ಮತದಾನ ಹಾಗೂ ಕ್ಷೇತ್ರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ತಲಾ ಒಂದು ಕೊಠಡಿಯಲ್ಲಿ ನಡೆಯಲಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಎರಡು ಕೊಠಡಿಗಳಲ್ಲಿ ನಡೆಯಲಿದೆ. ಎಲ್ಲ ಟೇಬಲ್‌ಗಳಿಗೆ ಅಭ್ಯರ್ಥಿವಾರು ಒಂದು ಟೇಬಲ್ ಗೆ ಒಂದು ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದಾಗಿದೆ. ಮತ ಎಣಿಕೆ ಏಜೆಂಟರ ನೇಮಕಕ್ಕೆ ಭಾವಚಿತ್ರ ಹಾಗೂ ಅಭ್ಯರ್ಥಿಯನ್ನು ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಮತ ಎಣಿಕಾ ಕೇಂದ್ರದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರಿಗೆ ಕಲರಿಂಗ್ ಕೋಡ್ ನಿಗದಿ ಮಾಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪತ್ರ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರು, ಚುನಾವಣಾ ಸಂಬಂಧ ಅಧಿಕಾರಿಗಳು ಇದ್ದರು.

ಸಿಕೆಬಿ-3 ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರುಗಳೊಂದಿಗೆ ನಡೆಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿದರು