ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ನ್ಯಾಯಾಂಗ ತನಿಖೆ ಆಗಲಿ

| Published : May 02 2024, 12:25 AM IST / Updated: May 02 2024, 08:22 AM IST

ಸಾರಾಂಶ

 ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಮತ್ತು ಉಸ್ತುವಾರಿ ಎಂ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

 ಚಾಮರಾಜನಗರ :  ರಾಜ್ಯ ಮತ್ತು ದೇಶದ ಜನತೆಯನ್ನು ಬೆಚ್ಚಿಬೀಳಿಸಿರುವ ಹಾಸನದ ಜಾತ್ಯಾತೀತ ಜನತಾದಳದ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಮತ್ತು ಉಸ್ತುವಾರಿ ಎಂ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. 

ಇದು ಸುಮಾರು 2976 ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಮಾನಹಾನಿಗೆ ಸಂಬಂಧಿಸಿದ ಪ್ರಕರಣವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು. ಕೇವಲ ಎಸ್ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರುವ ಸಾಧ್ಯತೆ ಇಲ್ಲ. ಪ್ರಕರಣದ ಆರೋಪಿ ಸಂಸದ ಮಾತ್ರವಲ್ಲ, ಆತ ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಣ್ಣನ ಮಗ, ಮಾಜಿ ಮಂತ್ರಿ ಹಾಲಿ ಶಾಸಕ ಎಚ್. ಡಿ. ರೇವಣ್ಣ ಅವರ ಪುತ್ರ ಎಂಬ ಸಂಗತಿ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುತ್ತದೆ. 

ಸ್ವತಃ ಪ್ರಜ್ವಲ್ ರೇವಣ್ಣ ತಂದೆ ಎಚ್. ಡಿ. ರೇವಣ್ಣ ಮೇಲೂ ಸಹ ಅತ್ಯಾಚಾರದ ದೂರು ದಾಖಲಾಗಿದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಮತ್ತು ಎಚ್. ಡಿ. ರೇವಣ್ಣ ಅವರನ್ನು ತಕ್ಷಣ ಬಂಧಿಸಲು ಬಿಎಸ್ಪಿ ಆಗ್ರಹಿಸಿದೆ.ಇದೊಂದು ಪ್ರಭಲ ರಾಜಕೀಯ ಕುಟುಂಬವಾಗಿರುವುದರಿಂದ ಎಸ್ಐಟಿ ತನಿಖೆ ಮೇಲೆ ಪ್ರಭಾವ ಬೀರುವ ಸಂಭವವಿದೆ. ಈಗಾಗಲೇ ಇದು ಹಳೆಯ ವಿಡಿಯೋ ಎಂದು ಒಪ್ಪಿಕೊಂಡಿರುವ ಎಚ್.ಡಿ. ರೇವಣ್ಣ ಅವರಿಗೆ ಈ ಬಗ್ಗೆ ಮೊದಲೇ ತಿಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ ಬಿಜೆಪಿ ಮುಖಂಡ ದೇವರಾಜೇಗೌಡಗೆ ಒಂದು ವರ್ಷದ ಹಿಂದೆ ಅಂದರೆ ವಿಧಾನಸಭಾ ಚುನಾವಣೆ ವೇಳೆ ಈ ವಿಡಿಯೋ ತಲುಪಿತ್ತು. ಅವರು ಈ ಸಂಬಂಧ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.

ಇಷ್ಟೆಲ್ಲ ಮಾಹಿತಿ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಹಾಗೂ ಸ್ವತ: ಆರೋಪಿಯ ಜೊತೆ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಮಾಹಿತಿ ಇದ್ದರೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ನನ್ನ ಮಗ, ಈತನನ್ನು ಮತ್ತೊಮ್ಮೆ ಗೆಲ್ಲಿಸಿ ಕೊಡಿ ಎಂದು ಹಾಸನದ ಜನತೆ ಮುಂದೆ ಅಂಗಲಾಚಿ ಬೇಡಿಕೊಂಡಿರುವುದು ನೈತಿಕ ದಿವಾಳಿತನದ ಪರಮಾವಧಿಯಾಗಿದೆ. ಇಂಥ ನೀಚ ವ್ಯಕ್ತಿಗೆ ತಮ್ಮ ಕ್ಷೇತ್ರವನ್ನು ಧಾರೆ ಎರೆದ ಎಚ್.ಡಿ. ದೇವೇಗೌಡ ಅವರ ಸುದೀರ್ಘ ರಾಜಕೀಯ ಜೀವನ ಹಾಗೂ ಕುಟುಂಬಕ್ಕೆ ಕಳಂಕ ಮೆತ್ತಿಕೊಂಡಿದೆ. ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರ ಮತ್ತು ಮಾನಹಾನಿಗೆ ಒಳಗಾದ ಮಹಿಳೆಯರ ಹಿತದೃಷ್ಟಿಯಿಂದ, ಪ್ರಕರಣದ ವಿಚಾರಣೆ ನ್ಯಾಯಾಂಗದ ಮೇಲ್ವಿಚಾರಣೆಯಿಂದ ಗೌಪ್ಯವಾಗಿ ನಡೆಯುವುದು ಒಳ್ಳೆಯದು. ಸಂತ್ರಸ್ತ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಮಹಿಳಾ ಆಯೋಗಗಳು ಕಾನೂನು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಬೇಕೆಂದು ಬಿಎಸ್ಪಿ ಒತ್ತಾಯಿಸಿದೆ.