ಅಂಚೆ ಮತದಾನ ಪ್ರತಿಕ್ರಿಯೆ ಆರಂಭ: ಕಾವ್ಯರಾಣಿ ಕೆ.ವಿ.

| Published : Apr 26 2024, 12:51 AM IST

ಸಾರಾಂಶ

ಹಿರಿಯ ನಾಗರಿಕರು, ಅಂಗವಿಕಲರಿಂದ ಇಂದು ಮತದಾನ । ಶೇ.100ರಷ್ಟು ಮತದಾನಕ್ಕೆ ಪ್ರತಿಯೊಬ್ಬರೂ ಶ್ರಮಿಸಿ

ಕನ್ನಡಪ್ರಭ ವಾರ್ತೆ ಸುರಪುರ

ಮತಕ್ಷೇತ್ರದಲ್ಲಿ ನಡೆಯುತ್ತಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಅಂಚೆ ಮತದಾನಕ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಚುನಾವಣಾಧಿಕಾರಿ ಕಾವ್ಯರಾಣಿ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಚುನಾವಣಾ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಬೇಕಾದ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 2384, ಅಂಗವಿಕಲರು 3780 ಒಟ್ಟು 6164 ಮತದಾರರಿದ್ದಾರೆ ಎಂದರು.

ಲೋಕಸಭೆ ಮತ್ತು ಸುರಪುರ 36 ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ನಮೂನೆ 12 ಡಿ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಹಿರಿಯರು ನಾಗರಿಕರು-147 ಹಾಗೂ ಅಂಗವಿಕಲರು-44 ಒಟ್ಟು 187 ಅಂಚೆ ಮತಕ್ಕೆ ಅರ್ಹ ಮತದಾರರಾಗಿದ್ದಾರೆ. ಅವರಿಂದ ಗುರುವಾರ ಮತ್ತು ಶುಕ್ರವಾರ ಎರಡು ದಿನ ಅಂಚೆ ಮತದಾನದ ಪ್ರಕ್ರಿಯೆ ನಡೆಯಲಿದೆ.

ಮತಕ್ಷೇತ್ರ ವ್ಯಾಪ್ತಿಯಲ್ಲಿ 9 ರೂಟ್‌ಗಳನ್ನು ರಚಿಸಲಾಗಿದ್ದು, ಸುರಪುರ ನಗರ, ಖಾನಾಪುರ ಎಸ್.ಎಚ್.ದಿಂದ ಚಂದ್ಲಾಪುರ, ಬಾದ್ಯಾಪುರ ದಿಂದ ರಾಯಗೇರಾ, ಅರಳಹಳ್ಳಿಯಿಂದ ಪೈದೊಡ್ಡಿ ಕಕ್ಕೇರಾ, ಮುದ್ನೂರುದಿಂದ ಬನಹಟ್ಟಿ, ಬೈಚಬಾಳು ದಿಂದ ಕಚಕನೂರು, ನಾಗರಾಳನಿಂದ ಹುಣಸಗಿ, ಸಿದ್ದಾಪುರದಿಂದ ಜೋಗಂಡ ಬಾವಿ, ಬೂದಿಹಾಳದಿಂದ ನಾರಾಯಣಪುರದ ಮೇಲಿನಗಡ್ಡಿವರೆಗೆ 88 ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.

ಒಂದು ತಂಡದಲ್ಲಿ ಪಿಆರ್, ಎಪಿಆರ್, ಪೊಲೀಸ್, ಸೂಕ್ಷ್ಮ ವೀಕ್ಷಕರು, ವಿಡಿಯೋ ಗ್ರಾಫರ್, ಗ್ರೂಪ್ ಡಿ., ಆಯಾ ರೂಟ್‌ಗೆ ತಕ್ಕಂತೆ ಇಬ್ಬರಿಂದ ಮೂವರು ಸೆಕ್ಟರ್ ಆಫೀಸರ್‌ಗಳನ್ನು ನೇಮಿಸಲಾಗಿದೆ. ಬೆ.8 ರಿಂದ ಸಂಜೆ 5 ಗಂಟೆವರೆಗೂ ಅಂಚೆ ಮತದಾನ ನಡೆಯಲಿದೆ. ಇದರಿಂದ ವಂಚಿತರಾದವರಿಗೆ ಎರಡನೇ ಅವಕಾಶ ಕೊಡಲಾಗುತ್ತದೆ ಎಂದು ತಿಳಿಸಿದರು.

ಮತದಾನ ಸಮಯದಲ್ಲಿ ಯಾವುದಾದರೂ ಸಮಸ್ಯೆಗಳು ಎದುರಾದಲ್ಲಿ ತಕ್ಷಣವೇ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತದಾನ ಸಂದರ್ಭದಲ್ಲಿ ಮತದಾರರು ಹೊರತುಪಡಿಸಿ ಯಾರು ಇರಬಾರದು. ಮನೆಯವರು ದೂರವಿದ್ದು, ಸಹಕಾರ ನೀಡಬೇಕು. ಶೇ.100ರಷ್ಟು ಮತದಾನಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಹುಣಸಗಿ ತಹಸೀಲ್ದಾರ್ ಬಸವಲಿಂಗಪ್ಪ ನೈಯ್ಕೊಡಿ ಮಾತನಾಡಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಸೇರಿದಂತೆ ಪಿಆರ್. ಎಪಿಆರ್, ಪೊಲೀಸ್ ಸಿಬ್ಬಂದಿ ಇದ್ದರು.