ತಿಪಟೂರು ಶಾಸಕರ ನಡೆಗೆ ಆಕ್ರೋಶ; ಕಾಂಗ್ರೆಸ್‌ ಮುಖಂಡರ ರಾಜೀನಾಮೆ

| Published : Apr 12 2024, 01:09 AM IST / Updated: Apr 12 2024, 01:28 PM IST

ತಿಪಟೂರು ಶಾಸಕರ ನಡೆಗೆ ಆಕ್ರೋಶ; ಕಾಂಗ್ರೆಸ್‌ ಮುಖಂಡರ ರಾಜೀನಾಮೆ
Share this Article
  • FB
  • TW
  • Linkdin
  • Email

ಸಾರಾಂಶ

 ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ಮತ್ತು ನನ್ನ ಸಾವಿರಾರು ಕಾರ್ಯಕರ್ತರು ಸ್ವ-ಇಚ್ಚೆಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದ್ದಾರೆ.

 ತಿಪಟೂರು : ಶಾಸಕರ ಅಹಂಕಾರದ ವರ್ತನೆ, ಮುಖಂಡರು ಹಾಗೂ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆ, ಕುಟುಂಬ ರಾಜಕಾರಣ, ಆಡಳಿತದಲ್ಲಿನ ಭ್ರಷ್ಟಾಚಾರ ಇವೆಲ್ಲವನ್ನು ನೋಡಿ, ನೊಂದು ಸಹಿಸಲಾಗದೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ಮತ್ತು ನನ್ನ ಸಾವಿರಾರು ಕಾರ್ಯಕರ್ತರು ಸ್ವ-ಇಚ್ಚೆಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದರು.

 ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಕೆ.ಷಡಕ್ಷರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹಾಗೂ ನಮ್ಮ ಕಾರ್ಯಕರ್ತರ ಬೆಂಬಲದೊಂದಿಗೆ ಗೆದ್ದು ನಂತರ ನಮಗೆ ಯಾವುದೇ ಗೌರವ ನೀಡದೆ ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಾ ನಮ್ಮ ಕಾರ್ಯಕರ್ತರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಅಲ್ಲದೆ ನಾವು ಪಕ್ಷದ ಜಿಲ್ಲಾ, ರಾಜ್ಯ ಮುಖಂಡರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. 

ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸುತ್ತಿರಲಿಲ್ಲ. ಅವರಿಗೆ ಬೇಕಾದವರಿಗೆ ಸರ್ಕಾರದ ನಾಮನಿರ್ದೇಶನ ಮಾಡಿಕೊಂಡು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೀವಾಳವಾಗಿಸಿಕೊಂಡಿರುವ ಇಲ್ಲಿನ ಮುಸ್ಲಿಂ ಮುಖಂಡರೂ ಸಹ ಶಾಸಕರ ನಡೆಯಿಂದ ಬೇಸತ್ತು ಹೋಗಿದ್ದಾರೆ. ಪಕ್ಷಕ್ಕಾಗಿ ದುಡಿದ ನಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವಗಳು ಸಿಗದಿದ್ದರೆ ನಾವೇಕೆ ಪಕ್ಷಕ್ಕೆ ದುಡಿಯಬೇಕು. ನಮ್ಮ ಕಾರ್ಯಕರ್ತರ ತೀರ್ಮಾನದಂತೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಜಿಪಂ, ತಾ.ಪಂ ಸದಸ್ಯರು, ನಗರಸಭೆ ಸದಸ್ಯರು, ಎಪಿಎಂಸಿ ನಿರ್ದೇಶಕರು, ವಿವಿಧ ಸಮಾಜ ಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಯಾರ ಬಳಿಯೂ ಹಣಕ್ಕಾಗಿ ಕೈ ಚಾಚಿಲ್ಲ. ಸ್ವಂತ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಸ್ವಾಭಿಮಾನದಿಂದ ಹಗಲಿರು ಳು ಓಡಾಡಿ ದುಡಿದಿದ್ದಾರೆ. ಇಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸವಾಗಲು ನಾನು ಬಿಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಯಾರಿಗೂ ಗುಲಾಮರಾಗಿ ಬದುಕುವ ಅವಶ್ಯಕತೆ ಇಲ್ಲ ಎಂದರು. 

ಲೋಕಸಭಾ ಚುನಾವಣೆಯಲ್ಲಿ ತಟಸ್ಥ : ನಾನು ಮತ್ತು ನಮ್ಮ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗುತ್ತಿದ್ದೇವೆ. ನಮ್ಮ ಅವಶ್ಯಕತೆ ಯಾವ ಪಕ್ಷಕ್ಕೆ ಇದೆಯೋ ಅವರು ಗೌರವದೊಂದಿಗೆ ಬರಮಾಡಿಕೊಂಡರೆ ಯೋಚನೆ ಮಾಡುತ್ತೇವೆ. ಜಿಲ್ಲೆಯ ಪ್ರಮುಖ ವೀರಶೈವ ಲಿಂಗಾಯತ ಸಮಾಜದ ಒಳಿತನ್ನು ಬಯಸುವ ವರ್ತನೆ ಇವರಲಿಲ್ಲ. ಪಕ್ಷದ ಒಬ್ಬ ವ್ಯಕ್ತಿಯನ್ನು ಗೌರವಿಸದ ಇವರು ಜನರನ್ನು ಹೇಗೆ ರಕ್ಷಿಸುತ್ತಾರೆ ಎಂದಿದ್ದಾರೆ.ಅಭಿವೃದ್ಧಿ ಶೂನ್ಯ:

ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಕೇಳುವವರಿಲ್ಲ. ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಕೇಳುವವರಿಲ್ಲದಂತಾಗಿದೆ. ಟೂಡಾಗೆ ಅಧ್ಯಕ್ಷರನ್ನು ನೇಮಿಸಿಲ್ಲ, ನಗರದ ಹೆದ್ದಾರಿಯಲ್ಲಿ ಸಿಗ್ನಲ್ ಲೈಟ್‌ಗಳು ಹಾಳಾಗಿ ವರ್ಷವೇ ಆಗುತ್ತಿದೆ. ತಾಲೂಕಿನ ವಿವಿಧೆಡೆ ಹಾಗೂ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕ್ರಮ ಕೈಗೊಳ್ಳುವವರಿಲ್ಲದಂತಾಗಿ ಜನರು ನೊಂದು ಹೋಗಿದ್ದಾರೆ. ಅಯ್ಯಪ್ಪಸ್ವಾಮಿ ದೇವಸ್ಥಾನ ತೆರುವುಗೊಳಿಸಲು ಮುಂದಾಗಿರುವ ಶಾಸಕರು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಾ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. 

ಕಳೆದ ವರ್ಷ ರಾಷ್ಟ್ರಮಟ್ಟದ ಖೋಖೋ ಕ್ರೀಡಾಕೂಟವನ್ನು ಏರ್ಪಡಿಸಿ ಅತಿಥಿಗಳಾಗಿ ಮಂತ್ರಿಗಳನ್ನು ಆಹ್ವಾನಿಸಿದರೂ ಇಲ್ಲಿನ ಶಾಸಕರು ಬರದಂತೆ ನೋಡಿಕೊಂಡರು. ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಯಾರನ್ನು ನಂಬಿ ಪಕ್ಷದಲ್ಲಿರಲಿ. ಈ ಪರಿಸ್ಥಿತಿಗಳನ್ನು ಅವಲೋಕಿಸಿ ನಮ್ಮ ಅವಶ್ಯಕತೆ ಇಲ್ಲದವರ ಬಳಿ ಇರುವುದು ಬೇಡ ಎಂದು ಪಕ್ಷವನ್ನು ಬಿಡುವ ನಿರ್ಧಾರ ಕೈಗೊಂಡಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರುಗಳಾದ ಸೊಪ್ಪುಗಣೇಶ್, ಭಾರತಿ, ಹಿಂಡಿಸ್ಕೆರೆ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಮಲ್ಲೇಶ್, ನಂದಿನಿ ಬ್ಯಾಂಕ್ ನಿರ್ದೇಶಕ ಸಿದ್ದರಾಮಯ್ಯ, ಎಪಿಎಂಸಿ ನಿರ್ದೇಶಕ ಬಸವರಾಜು, ಮುಖಂಡರುಗಳಾದ ರೇಣು, ಮಡೆನೂರು ವಿನಯ್, ಡಾಬಾ ಶಿವಶಂಕರ್, ರಾಜಣ್ಣ, ವನಿತಾ, ನಂದೀಶ್ ಸೇರಿ ಅಪಾರ ಕಾರ್ಯಕರ್ತರು ಇದ್ದರು.