ದಲಿತರ ಬಗ್ಗೆ ಕಾಳಜಿ ಇರುವುದು ಕಾಂಗ್ರೆಸ್ ಗೆ ಮಾತ್ರ: ಧರ್ಮಸೇನಾ ಸುದ್ದಿಗೋಷ್ಠಿ

| Published : Apr 23 2024, 12:55 AM IST

ದಲಿತರ ಬಗ್ಗೆ ಕಾಳಜಿ ಇರುವುದು ಕಾಂಗ್ರೆಸ್ ಗೆ ಮಾತ್ರ: ಧರ್ಮಸೇನಾ ಸುದ್ದಿಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವತಂತ್ರ ಬಂದ ದಿನದಿಂದ ಕೂಡ ಮಹಾತ್ಮ ಗಾಂಧೀಜಿ ಆಶಯದಂತೆ ದಲಿತರ ಬಗ್ಗೆ ಕಾಳಜಿ ವಹಿಸಿ ಅವರ ಉನ್ನತೀಕರಣಕ್ಕೆ ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯವರು ಈಗಾಗಲೇ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಗಳನ್ನು ನೀಡಿ ಸಂವಿಧಾನಕ್ಕೆ ವಿರುದ್ಧ ಆಡಳಿತ ನಡೆಸುವ ಮೂಲಕ ದಲಿತರ ಹಾಗೂ ಹಿಂದುಳಿದ ವರ್ಗಗಳ ಜನರ ಪಾಲಿಗೆ ಮಾರಕ ನೀತಿಗಳನ್ನು ಅನುಸರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಏಪ್ರಿಲ್ ೨೬ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಧರ್ಮಸೇನಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸ್ವತಂತ್ರ ಬಂದ ದಿನದಿಂದ ಕೂಡ ಮಹಾತ್ಮ ಗಾಂಧೀಜಿ ಆಶಯದಂತೆ ದಲಿತರ ಬಗ್ಗೆ ಕಾಳಜಿ ವಹಿಸಿ ಅವರ ಉನ್ನತೀಕರಣಕ್ಕೆ ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯವರು ಈಗಾಗಲೇ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಗಳನ್ನು ನೀಡಿ ಸಂವಿಧಾನಕ್ಕೆ ವಿರುದ್ಧ ಆಡಳಿತ ನಡೆಸುವ ಮೂಲಕ ದಲಿತರ ಹಾಗೂ ಹಿಂದುಳಿದ ವರ್ಗಗಳ ಜನರ ಪಾಲಿಗೆ ಮಾರಕ ನೀತಿಗಳನ್ನು ಅನುಸರಿಸುತ್ತಿದ್ದಾರೆ, ಈ ನಿಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಬಹಳ ಮಹತ್ವದ್ದಾಗಿದ್ದು ದಲಿತ ಸಮುದಾಯ ಯೋಚಿಸಿ ಮತದಾನ ಮಾಡಬೇಕು ಎಂದರು.

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಂಗನವಾಡಿ ನಿರ್ಮಾಣದಿಂದ ಹಿಡಿದು ಹೋಬಳಿ ಮಟ್ಟದಲ್ಲಿ ಕಾಲೇಜು, ಹಾಸ್ಟೆಲ್ ಗಳನ್ನು ನಿರ್ಮಿಸಿ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು, ಉಳುವವನೇ ಭೂಮಿಯ ಒಡೆಯ ನೀತಿಯನ್ನು ಜಾರಿ ಮಾಡುವ ಮೂಲಕ ಭೂ ರಹಿತರಿಗೆ ಭೂಮಿಯನ್ನು ಒದಗಿಸುವ ಕೆಲಸ ಮಾಡಿದೆ ಎಂದರು.ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಸೇರಿ ೫ ಗ್ಯಾರಂಟಿಗಳನ್ನು ಜನರಿಗೆ ನೀಡಿ ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ, ಕೆಪಿಸಿಸಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡುವ ಮೂಲಕ ದಲಿತರಿಗೂ ದೊಡ್ಡ ರಾಜಕೀಯ ಸ್ಥಾನಮಾನ ನೀಡಿದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂಬುದನ್ನು ಜನರು ಯೋಚಿಸುವ ಅಗತ್ಯವಿದೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರಿಗೆ ಈ ಬಾರಿ ಲೋಕಸಭೆಗೆ ಹೋಗಲು ಅವಕಾಶ ನೀಡಿದರೆ ಹಾಸನದಲ್ಲಿ ಸಮಗ್ರ ಅಭಿವೃದ್ಧಿಯಾಗಲಿದೆ. ಜೊತೆಗೆ ಶ್ರೇಯಸ್ ಪಟೇಲ್ ಸದಾ ತಮ್ಮ ಕೈಗೆ ಸಿಗುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಎಸ್.ಟಿ. ಘಟಕದ ಅಧ್ಯಕ್ಷ ವಿಜಯ ನಾಯಕ್ ಮಾತನಾಡಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಹಾಸನಕ್ಕೆ ಬಂದಿದ್ದು, ರಾಜ್ಯದಲ್ಲಿ ೧೫ ಮೀಸಲು ಕ್ಷೇತ್ರಗಳಲ್ಲಿ ನಾಡಿನ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕಾಂಗ್ರೆಸ್ ಪರ ಒಲವಿದೆ, ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಇದೆ. ಹಾಸನದಲ್ಲಿ ಕೂಡ ದಿವಂಗತ ಪುಟ್ಟಸ್ವಾಮಿ ಅವರ ಪುತ್ರ ಶ್ರೇಯಸ್ ಪಟೇಲ್ ಪರವಾಗಿ ಒಳ್ಳೆಯ ಅಭಿಪ್ರಾಯವಿದ್ದು, ಈ ಬಾರಿ ಹಾಸನದಿಂದ ಯುವ ನಾಯಕನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ, ಎಸ್ಸಿ,ಎಸ್ಟಿ, ಮುಖಂಡರಾದ ರಾಮಚಂದ್ರ, ಎಚ್.ಪಿ. ಶಂಕರ್ ರಾಜ್, ನಾಯಕರಹಳ್ಳಿ ಅಶೋಕ್, ಗಣೇಶ್ ನಾಯಕ್, ಸೇರಿ ಇತರರು ಉಪಸ್ಥಿತರಿದ್ದರು.