ಮೋದಿ ಹೆಸರು ಹೇಳೇ ಮತ ಕೇಳ್ತಿವೆ; ಗಾಯತ್ರಿ ಸಿದ್ದೇಶ್ವರ ತಿರುಗೇಟು

| Published : Apr 28 2024, 01:18 AM IST

ಮೋದಿ ಹೆಸರು ಹೇಳೇ ಮತ ಕೇಳ್ತಿವೆ; ಗಾಯತ್ರಿ ಸಿದ್ದೇಶ್ವರ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಮಹಾ ನಗರದ ವಿವಿಧೆಡೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಡೀ ವಿಶ್ವವೇ ಮೆಚ್ಚಿಕೊಂಡ ನಾಯಕ ಪ್ರಧಾನಿ ಮೋದಿ ಹೆಸರು ಹೇಳಿ ಮತ ಕೇಳುವುದಕ್ಕೆ ನಮಗ್ಯಾವುದೇ ಸಂಕೋಚವೂ ಇಲ್ಲ. ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ರಾಹುಲ್ ಗಾಂಧಿ ಹೆಸರು ಹೇಳಿ, ಮತ ಕೇಳಲಿ ನೋಡೋಣ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಎದುರಾಳಿ ಅಭ್ಯರ್ಥಿ, ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿನ ಎಸ್ಸೆಸ್ಸೆಂ ನಗರದಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೆಸರೇಳಲು ನಮಗೆ ಯಾವುದೇ ಅಂಜಿಕೆ, ಅಳುಕು, ಸಂಕೋಚ ಇಲ್ಲ. ಮೋದಿಯವರ ಹೆಸರನ್ನು ಹೆಮ್ಮೆಯಿಂದಲೇ ಹೇಳಿ ಮತ ಕೇಳುತ್ತೇವೆ. ನಿಮಗೆ ತಾಕತ್ತಿದ್ದರೆ ನಿಮ್ಮದೇ ಪಕ್ಷದ ನಾಯಕ ರಾಹುಲ್ ಗಾಂಧಿ ಹೆಸರು ಹೇಳಿ, ಮತ ಕೇಳಿ ಎಂದರು.

ದೇಶಾದ್ಯಂತ ಬಿಜೆಪಿ ಅಭ್ಯರ್ಥಿಗಳು ನಮ್ಮ ನಾಯಕ ಮೋದಿ, ಪ್ರಶ್ನಾತೀತ ನಾಯಕನೆಂದು ಗರ್ವದಿಂದ, ಅಭಿಮಾನದಿಂದ ಹೇಳುತ್ತೇವೆ. ಮತ್ತೆ ನಮ್ಮ ಮುಂದಿನ ಪ್ರಧಾನಿ ಮೋದಿ ಅಂತಾ ಘೋಷಣೆ ಸಹ ಮಾಡಿದ್ದೇವೆ. ಆದರೆ, ಕಾಂಗ್ರೆಸ್ಸಿಗರಿಗೆ ತಮ್ಮ ನಾಯಕರು, ನಾಯಕತ್ವ, ದೂರದೃಷ್ಟಿತ್ವ ಹೇಳಿಕೊಳ್ಳುವ ಯಾವುದೇ ವ್ಯಕ್ತಿ ಇಲ್ಲ. ರಾಹುಲ್ ಗಾಂಧಿ ಹೆಸರನ್ನೇ ಪದೇ ಪದೇ ಹೇಳಿ, ಮತ ಕೇಳ ಬೇಡಿ ಅಂತಾ ನಿಮಗೆ ಯಾರು ಕಟ್ಟಿ ಹಾಕಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಮೋದಿ ನಾಯಕತ್ವವನ್ನು ಇಡೀ ವಿಶ್ವ ಮೆಚ್ಚಿದೆ. ಜಾಗತಿಕ ನಾಯಕರು ಸಹ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲೆಂದು ಹಾರೈಸುತ್ತಿದ್ದಾರೆ. ಆದರೆ, ಯಾವುದೇ ರಾಷ್ಟ್ರವೂ ರಾಹುಲ್ ಗಾಂಧಿ ಪ್ರಧಾನಿ ಆಗಬೇಕೆಂದು ಬಯಸುತ್ತಿಲ್ಲ. ಒಂದು ವೇಳೆ ಬಯಸಿದರೆ ಅದು ಪಾಕಿಸ್ಥಾನದವರಾಗಿರುತ್ತಾರೆ. ಪಾಕಿಗಳದ್ದು ಜಿಹಾದಿ ಮನಸ್ಥಿತಿ ಎಂದು ಕಿಡಿಕಾರಿದರು.

ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕ, ಯುವತಿಯರು, ಮಹಿಳೆಯರು, ಹಿರಿಯರು ಮೋದಿ ಪರ ಇದ್ದಾರೆ. ಮೋದಿ ಕೈಗೊಂಡ ದಿಟ್ಟ ತ್ರಿವಳಿ ತಲಾಕ್ ರದ್ಧತಿ ಕಾಯ್ದೆ ಅದರಲ್ಲಿ ಮಹತ್ವದ್ದು. ನೊಂದ ಹೆಣ್ಣು ಮಕ್ಕಳ ಒಬ್ಬ ಸಹೋದರನಾಗಿ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಕರ್ನಾಟಕ ಹೊರತು ಪಡಿಸಿದರೆ ಬೇರೆ ರಾಜ್ಯದ ಮುಸ್ಲಿಮರು ಬಿಜೆಪಿ, ಮೋದಿ ಪರ ಇದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮುಸ್ಲಿಮರ ಒಲೈಕೆ ಮಾಡುತ್ತಾ, ಹಿಂದುಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಇದನ್ನು ಪ್ರಜ್ಞಾವಂತರು ಸೂಕ್ಷ್ಮವಾಗಿ ಗಮನಿಸಿ ರಾಷ್ಟ್ರ ವಿರೋಧಿ, ಧರ್ಮ ವಿರೋಧಿ ಕಾಂಗ್ರೆಸ್ ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಯುವ ಮುಖಂಡ ಬಿ.ಜಿ.ಅಜಯಕುಮಾರ ಮಾತನಾಡಿ, ದೇಶಾದ್ಯಂತ ಮೋದಿಯವರ ಅಲೆ ಇದೆ. ಜಾತ್ಯತೀತ, ಧರ್ಮಾತೀತವಾಗಿ ಮೋದಿ ಅಭಿವೃದ್ಧಿ ಕಾರ್ಯ ಜನ ಮೆಚ್ಚಿದ್ದಾರೆ. ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶಣ್ಣ, ಜಿ.ಮಲ್ಲಿಕಾರ್ಜುನಪ್ಪಾಜಿ ಕೊಡುಗೆ ಅಪಾರ. ಈ ಸಲ ಜನಸೇವೆಗೆ ಗಾಯತ್ರಿ ಅಮ್ಮ ಕಣಕ್ಕಿಳಿದಿದ್ದಾರೆ. ಈಗಾಗಲೇ ಗಾಯತ್ರಮ್ಮ ಗೆದ್ದಿದ್ದಾರೆ. ಇನ್ನೇನಿದ್ದರೂ ಗೆಲುವಿನ ಅಂತರ ಎಷ್ಟು ಎಂಬುದಕ್ಕೆ ಹೋರಾಡಬೇಕಷ್ಟೇ ಎಂದರು.

ಮಾಜಿ ಸಚಿವ ಭೈರತಿ ಬಸವರಾಜ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಓಬಿಸಿ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ವಿಜಯ್, ರಾಜು, ಶಾರದಮ್ಮ, ಗೀತಾ, ಭಾಗ್ಯ ಪಿಸಾಳೆ, ಗ್ಯಾರಳ್ಳಿ ಶಿವಕುಮಾರ, ಬಿ.ಎಸ್.ಜಗದೀಶ, ಹನುಮಂತು, ಮಂಡಲ ಸದಸ್ಯರು, ಬೂತ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಇದ್ದರು. ಕಂಬಳಿ ಹೊದಿಸಿ, ಗಾಯತ್ರಿ ಸಿದ್ದೇಶ್ವರರಿಗೆ ಶುಭಾರೈಸಲಾಯಿತು.ಕೋಟ್‌...ಚುನಾವಣೆಗೆ ಕೆಲದಿನಗಳು ಬಾಕಿ ಇದೆ. ಪ್ರಧಾನಿ ನರೇಂದ್ರ ಮೋದಿ ಏ.28ಕ್ಕೆ ದಾವಣಗೆರೆ ಆಗಮಿಸಿ ನನ್ನ ಪರ ಮತಯಾಚಿಸಲಿದ್ದಾರೆ. ಇದು ನನ್ನ ಪಾಲಿನ ಸೌಭಾಗ್ಯ. 29 ವರ್ಷಗಳಿಂದ ನಮ್ಮ ಕುಟುಂಬದ ಸೇವಾ ಮನೋಭಾವ, ಜನರ ಜೊತೆಗೆ ಬೆರೆಯುವ ಸ್ವಾಭಾವ ಗಮನಿಸಿ ಇಲ್ಲಿನ ಜನತೆ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಈ ಸಲವೂ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಲು ತೀರ್ಮಾನಿಸಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಜನ ಸಂಕಲ್ಪವಾಗಿದೆ. ನೀವೆಲ್ಲರೂ ನನಗೆ ಹೆಚ್ಚಿನ ಮತ ನೀಡಿ, ಮೋದಿಯವರ ಕೈ ಬಲಪಡಿಸಬೇಕು.

ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಬಿಜೆಪಿ ಅಭ್ಯರ್ಥಿ.