ಮಠಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ವಿದ್ಯಾಕೇಂದ್ರಗಳು: ಸಿದ್ದಲಿಂಗ ಶ್ರೀ

| Published : Apr 24 2024, 02:26 AM IST

ಮಠಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ವಿದ್ಯಾಕೇಂದ್ರಗಳು: ಸಿದ್ದಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಠ ಸಾಮಾಜಿಕ, ಆಧುನಿಕತೆ, ಆಧ್ಯಾತ್ಮಿಕತೆ, ಪ್ರಾಥಮಿಕ ಶಿಕ್ಷಣ ಪದ್ಧತಿ, ಗೋ ಉತ್ಪನ್ನದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿವೆ, ಮಠ ನೀಡುವ ಪ್ರಶಸ್ತಿಗಳನ್ನು ನಾವು ಹುಡುಕಿಕೊಂಡು ಹೋಗಬಾರದು, ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬರಬೇಕು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ನಾಡಿನ ಮಠಗಳು ಸಮಾಜದ ವಿವಿಧ ಕ್ಷೇತ್ರಗಳ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಅಂತಹ ಮಠಗಳಲ್ಲಿ ಹೊನ್ನಮ್ಮ ಗವಿ ಮಠವೂ ಒಂದಾಗಿದೆ. ಮಠಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ವಿದ್ಯಾಕೇಂದ್ರಗಳಾಗಿವೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಭೃಂಗಿ ಮಠದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ಭೃಂಗಿ ಮಠವನ್ನು ಕಳೆದ 23 ವರ್ಷಗಳಿಂದ ನಿರಂತರ ಹೋರಾಟದ ಫಲದಿಂದ ನ್ಯಾಯಾಲಯದ ಮುಖಾಂತರ ಪಡೆದಿದ್ದಾರೆ, ಶ್ರೀ ಮಠ ಸಾಮಾಜಿಕ, ಆಧುನಿಕತೆ, ಆಧ್ಯಾತ್ಮಿಕತೆ, ಪ್ರಾಥಮಿಕ ಶಿಕ್ಷಣ ಪದ್ಧತಿ, ಗೋ ಉತ್ಪನ್ನದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿವೆ, ಮಠ ನೀಡುವ ಪ್ರಶಸ್ತಿಗಳನ್ನು ನಾವು ಹುಡುಕಿಕೊಂಡು ಹೋಗಬಾರದು, ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬರಬೇಕು, ವಿದ್ಯಾರ್ಥಿಗಳು ಜೀವನ ಮೌಲ್ಯ ಇಟ್ಟುಕೊಳ್ಳುವುದರ ಜೊತೆಗೆ ಸಂಸ್ಕಾರವನ್ನೂ ಕಲಿಯಬೇಕು ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು.

ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಗಂಗಾ ಕ್ಷೇತ್ರ ೧೩ನೇ ಶತಮಾನದಲ್ಲಿ ಶಿವಯೋಗಿಗಳ ತಪೋಭೂಮಿ, 12ನೇ ಶತಮಾನದ ನಂತರ, ಶರಣರ ಪುಸ್ತಕಗಳಲ್ಲಿ ಸಿದ್ದಗಂಗೆ-ಶಿವಗಂಗೆ ನಡುವಿನ ಸಂಬಂಧದ ಉಲ್ಲೇಖವಿದೆ, ಕಾನೂನಿನ ಸಂಘರ್ಷದ ಜೊತೆಗೆ 23 ವರ್ಷಗಳ ಹೋರಾಟದ ನಂತರ ಭೃಂಗಿ ಮಠ ನಮ್ಮದಾಗಿದೆ, ಇಂದು ಉದ್ಘಾಟನೆಯಾಗಿರುವುದು ಅತೀವ ಸಂತಸವಾಗಿದೆ ಎಂದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಬರುವ ಎಲ್ಲಾ ಮಠಗಳೂ ತ್ರಿವಿಧ ದಾಸೋಹ ಪದ್ಧತಿ ಹೊಂದಿದೆ, ವೀರಶೈವ ಮಠಗಳು ಸಮಾಜಕ್ಕೆ ತನ್ನದೇ ಆದ ಅಪಾರ ಕೊಡುಗೆಗಳನ್ನು ನೀಡಿವೆ ಎಂದರು.

ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ದೇಗುಲ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ರಾಮಕೃಷ್ಣಾಶ್ರಮದ ಡಾ.ಶ್ರೀ.ವಿರೇಶಾನಂದ ಸ್ವಾಮೀಜಿ, ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ.ಜೆ.ಪಟೇಲ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಜಗದೀಶ್ ಚೌಧರಿ ನಗರಸಭೆ ಸದಸ್ಯ ಪ್ರದೀಪ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಕಂಬಾಳು ಉಮೇಶ್, ಮೋಹನ್‌ಕುಮಾರ್, ಮಹಿಳಾ ಪದಾಧಿಕಾರಿಗಳು ಇನ್ನಿತರರಿದ್ದರು.