ಲೋಕಸಭಾ ಚುನಾವಣೆ ಹಿನ್ನೆಲೆ ಬಸ್‌ಗಳ ಕೊರತೆ: ಸಂಚಾರಕ್ಕೆ ಪರದಾಟ

| Published : Apr 27 2024, 01:22 AM IST

ಲೋಕಸಭಾ ಚುನಾವಣೆ ಹಿನ್ನೆಲೆ ಬಸ್‌ಗಳ ಕೊರತೆ: ಸಂಚಾರಕ್ಕೆ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು-ಮೈಸೂರು ಕಡೆಯಿಂದ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು, ತಮ್ಮೂರುಗಳತ್ತ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಕೆಲವರು ಮತದಾನ ಮಾಡಲೆಂದೇ ತಮ್ಮೂರಿನತ್ತ ಬಂದು ಬಸ್ಸುಗಳಿಲ್ಲ ಪೇಚಿಗೆ ಸಿಲುಕಿದ್ದರೆ, ಮತ್ತೆ ಕೆಲವರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ದ್ವಿಚಕ್ರ ವಾಹನಗಳು, ಇತರೆ ವಾಹನಗಳನ್ನು ತರಿಸಿಕೊಂಡು ತೆರಳುತ್ತಿದ್ದುದು ಕಂಡುಬಂತು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಹಾಗೂ ಖಾಸಗಿ ವಾಹನಗಳನ್ನು ಎರವಲು ಸೇವೆಗೆ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಬರಲು ತೊಂದರೆಯಾಗಿತ್ತು.

ಮುಂಜಾನೆಯಿಂದಲೇ ಬಸ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಕಾರಣ ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಗಳಿಂದ ಬಂದಂತಹ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುವಂತಾಗಿತ್ತು.

ಬೆಂಗಳೂರು-ಮೈಸೂರು ಕಡೆಯಿಂದ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು, ತಮ್ಮೂರುಗಳತ್ತ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಕೆಲವರು ಮತದಾನ ಮಾಡಲೆಂದೇ ತಮ್ಮೂರಿನತ್ತ ಬಂದು ಬಸ್ಸುಗಳಿಲ್ಲ ಪೇಚಿಗೆ ಸಿಲುಕಿದ್ದರೆ, ಮತ್ತೆ ಕೆಲವರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ದ್ವಿಚಕ್ರ ವಾಹನಗಳು, ಇತರೆ ವಾಹನಗಳನ್ನು ತರಿಸಿಕೊಂಡು ತೆರಳುತ್ತಿದ್ದುದು ಕಂಡುಬಂತು.

ಇನ್ನು ಕೆಲವರು ದುಪ್ಪಟ್ಟು ಹಣ ತೆತ್ತು ಆಟೋ, ಗೂಡ್ಸ್ ಇತರೆ ವಾಹನಗಳನ್ನು ಬಳಸಿಕೊಂಡು ತಮ್ಮೂರಿಗೆ ತೆರಳಲು ಪ್ರಯಾಸಪಟ್ಟರು. ಸರ್ಕಾರಿ ರಜಾ ಇದ್ದ ಕಾರಣ ಕೆಲವು ಕಡೆಗಳಲ್ಲಿ ಹೊಟೇಲ್ ಮತ್ತು ಬೇಕರಿಗಳು ಬಂದ್ ಆಗಿದ್ದವು. ಬಸ್ಸುಗಳಿಲ್ಲದ ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಪೇಟೆ, ಅಂಗಡಿಗಳತ್ತ ಬರುವುದು ಕಡಿಮೆಯಾದ ಕಾರಣ ಹೊಟೇಲ್‌ಗಳು ಬಂದ್ ಆಗಿದ್ದು ಕಂಡುಬಂತು.

ಬಿಕೋ ಎನ್ನುತ್ತಿದ್ದ ರಸ್ತೆಗಳು:

ಲೋಕಸಭಾ ಚುನಾವಣಾ ಮತದಾನಕ್ಕಾಗಿ ರಜಾದಿನ ಘೋಷಣೆಯಾದ ಕಾರಣ ಮಂಡ್ಯದ ಪೇಟೆ ಬೀದಿ, ವಿ.ವಿ. ರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಜನರಿಲ್ಲದೆ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು. ಅಂಗಡಿಗಳ ವ್ಯಾಪಾರಸ್ಥರು ಗ್ರಾಹಕರಿಗಾಗಿ ಕಾದು ಕುಳಿತಿದ್ದು ಕಂಡುಬಂತು.ಕಾರು ಡಿಕ್ಕಿ ಯುವಕ ಸ್ಥಳದಲ್ಲೇ ಸಾವು

ಮದ್ದೂರು:ಮತದಾನ ಮಾಡಲು ಬೆಂಗಳೂರಿನಿಂದ ಸ್ವ-ಗ್ರಾಮಕ್ಕೆ ಹೊರಟಿದ್ದ ಯುವಕನಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆಯ ಮನ್ಮುಲ್ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಜರುಗಿದೆ.

ಮಳವಳ್ಳಿ ತಾಲೂಕು ಅಮೃತೇಶ್ವರಹಳ್ಳಿಯ ನಾಗರಾಜು ಪುತ್ರ ನಂದೀಶ (28) ಮೃತ ವ್ಯಕ್ತಿ. ನಂದೀಶ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಯಾದ ನಂದೀಶ ಮತದಾನ ಮಾಡಲು ಬೆಂಗಳೂರಿನಿಂದ ಖಾಸಗಿ ವಾಹನದಲ್ಲಿ ಮದ್ದೂರಿಗೆ ಬರುತ್ತಿದ್ದನು.ನಿದ್ರೆಯ ಮಂಪರಿಗೆ ಜಾರಿದ್ದ ಕಾರಣ ಮದ್ದೂರಿನಲ್ಲಿ ಇಳಿಯದೆ ವಾಹನ ಗೆಜ್ಜಲಗೆರೆ ಬಂದಾಗ ಎಚ್ಚರಗೊಂಡಿದ್ದಾನೆ. ನಂತರ ವಾಹನದಿಂದ ಮನ್ಮುಲ ಬಳಿ ಇಳಿದು ಹೆದ್ದಾರಿ ದಾತಿ ತಂತಿ ಬೇಲಿ ಮೂಲಕ ಸರ್ವಿಸ್ ರಸ್ತೆಗೆ ತೆರಳಲು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.