ಕಾಯಕ, ದಾಸೋಹ ಈ ನೆಲದ ಮೂಲದ್ರವ್ಯ

| Published : May 09 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಕಾಯಕ ಮತ್ತು ದಾಸೋಹ ಈ ನೆಲದ ಮೂಲದ್ರವ್ಯಗಳಾಗಿದ್ದು, ದುಡಿಮೆಯಿಂದ ಅರ್ಜಿತ ಧನವನ್ನು ಪ್ರಸಾದ ಭಾವದಿಂದ ಹಂಚಿಕೊಂಡು ತಿನ್ನಬೇಕು. ಈ ಪರಂಪರೆ ನಮ್ಮ ಪೂರ್ವಜ ಋಷಿ ಮುನಿಗಳು ಸೇರಿದಂತೆ ಶರಣರ ಮೂಲಕ ಭಾರತೀಯರಲ್ಲಿ ರಕ್ತಗತವಾಗಿದೆ ಎಂದು ಶರಣ ಸಂಗಮ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ದಾಶ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಾಯಕ ಮತ್ತು ದಾಸೋಹ ಈ ನೆಲದ ಮೂಲದ್ರವ್ಯಗಳಾಗಿದ್ದು, ದುಡಿಮೆಯಿಂದ ಅರ್ಜಿತ ಧನವನ್ನು ಪ್ರಸಾದ ಭಾವದಿಂದ ಹಂಚಿಕೊಂಡು ತಿನ್ನಬೇಕು. ಈ ಪರಂಪರೆ ನಮ್ಮ ಪೂರ್ವಜ ಋಷಿ ಮುನಿಗಳು ಸೇರಿದಂತೆ ಶರಣರ ಮೂಲಕ ಭಾರತೀಯರಲ್ಲಿ ರಕ್ತಗತವಾಗಿದೆ ಎಂದು ಶರಣ ಸಂಗಮ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ದಾಶ್ಯಾಳ ಹೇಳಿದರು.

ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಮತ್ತು ರಬಕವಿ-ಬನಹಟ್ಟಿಯ ಭಾರತ್ ಗ್ಯಾಸ್ ಜಂಟಿಯಾಗಿ ಆಯೋಜಿಸಿದ್ದ ಅಕ್ಷಯತದಿಗೆ ಅಮಾವಾಸ್ಯೆ ದಿನ ಹಮ್ಮಿಕೊಂಡಿದ್ದ ಅನ್ನದಾಸೋಹ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಬಹು ದೇಶಗಳಲ್ಲಿ ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಸ್ಥಿತಿಯಲ್ಲಿದೆ. ಸಾಂಸ್ಕೃತಿಕ ಹಿರಿಮೆಯ ಭಾರತದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಅದರ ಬದಲಾಗಿ ಕಾಯಕದಿಂದ ಅರ್ಜಿತ ಧನದಲ್ಲಿ ಸರ್ವರಲ್ಲಿ ಸಮಾನತೆ ಮೂಡಿಸುವ ಅನ್ನದಾಸೋಹ ಪದ್ಧತಿ ಮೂಲದಲ್ಲೇ ಆಚರಣೆಯಲ್ಲಿತ್ತು. ಅನ್ನದ ಮೇಲಿನ ಎಲ್ಲರ ಹಕ್ಕನ್ನು ಪ್ರತಿಪಾದಿಸಿದ್ದ ಬಸವಾದಿ ಶರಣರು ರೂಪಿಸಿದ್ದ ಕಾಯಕ ಮತ್ತು ದಾಸೋಹ ಪದ್ಧತಿಯನ್ನು ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ಮುಂದುವರಿಸಿರುವುದು ಶ್ಲಾಘನೀಯ ಎಂದರು.

ವರ್ತಕ ಪ್ರಭಾಕರ ಢಪಳಾಪುರ ಮಾತನಾಡಿ, ಪವಿತ್ರ ದೇಗುಲಗಳಲ್ಲಿ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವ ಅನ್ನ ಅಮೃತಕ್ಕೆ ಸಮಾನವಾಗಿದೆ. ದಾಸೋಹ ಭಕ್ತರ ಅಭೀಷ್ಠ ಪೂರೈಸುವ ಮತ್ತು ತೃಪ್ತಿ ತರುವ ಪ್ರಮುಖ ಕಾರ್ಯವಿಧಾನವಾಗಿದೆ ಎಂದು ವಿವರಿಸಿದರು.

ದಾಸೋಹ ಕಾರ್ಯಕ್ರಮದಲ್ಲಿ ಗಜಾನನ ತೆಗ್ಗಿ, ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ಮಲ್ಲಿಕಾರ್ಜುನ ಗಡೆಣ್ಣವರ, ಅರ್ಚಕರಾದ ಮಹಾದೇವಯ್ಯ ನಂದ್ಯಾಗೋಳ, ಬಸವರಾಜ ತೊರಲಿ ಮತ್ತು ಭಾರತ್ ಗ್ಯಾಸ್ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.