ಕರ್ಣಂಗೇರಿ: ರಾಜರಾಜೇಶ್ವರಿ ದೇವಾಲಯ ವಾರ್ಷಿಕೋತ್ಸವ, ರಥೋತ್ಸವ

| Published : May 08 2024, 01:00 AM IST

ಕರ್ಣಂಗೇರಿ: ರಾಜರಾಜೇಶ್ವರಿ ದೇವಾಲಯ ವಾರ್ಷಿಕೋತ್ಸವ, ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ಸಮೀಪದ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮಂಗಳವಾರ ಜರುಗಿತು. ಮುಂಜಾನೆ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಜರುಗಿತು.

ಮುಂಜಾನೆ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗಣಪತಿ ಹೋಮ, ದೇವಿಗೆ ಅಭಿಷೇಕ, ಹೂವಿನ ಅಲಂಕಾರ ಹಾಗೂ ತೀರ್ಥ ಸ್ನಾನ ನಡೆಯಿತು.

ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿ ಬಳಿಕ ದೇವಾಲಯದ ಆವರಣದ ಸುತ್ತಲೂ ದೇವಿಯ ರಥೋತ್ಸವವು ಜರುಗಿತು.

ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ, ಮಂಗಳಾರತಿ ಹಾಗೂ ತಾಯಿಯ ದರ್ಶನ ನಡೆಯಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು.

ಸಂಜೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ, ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ಬೊಳ್ಳೂರು ಚೌಡೇಶ್ವರಿ ಅಮ್ಮನವರ ಪೂಜೆ: ಗುಡ್ಡೆಹೊಸೂರು ಬೊಳ್ಳೂರು ಗ್ರಾಮದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಪೂಜೆ ಶ್ರದ್ದಾಭಕ್ತಿಯಿಂದ ಜರುಗಿತು.ಈ ದೇವಿಯ ಪೂಜೆಗೆ ವಿವಿಧ ಗ್ರಾಮಗಳಿಂದಲ್ಲದೆ ಹೊರ ಜಿಲ್ಲೆಗಳಿಂದ ಇಲ್ಲಿಗೆ ಬಂದು ಹರಕೆ ಪೂಜೆಗಳನ್ನು ಮಾಡುತ್ತಾರೆ. ಅಲ್ಲದೆ ವಾರದಲ್ಲಿ ಶುಕ್ರವಾರ ಮತ್ತು ಮಂಗಳವಾರದಂದು ಗ್ರಾಮಸ್ಥರು ಇಲ್ಲಿ ದೇವಿಗೆ ವಿಶೇಷ ಪೂಜೆ ನಡೆಸುತ್ತಾರೆ. ಇಲ್ಲಿನ ದೇವಸ್ಥಾನದಲ್ಲಿ ಪ್ರತಿ ವರ್ಷ ವಾರ್ಷಿಕ ಪೂಜೆ ನಡೆದ ದಿನ ಮಳೆ ಬರುವುದು ವಾಡಿಕೆ. ಅದರಂತೆ ಮಂಗಳವಾರವೂ ನಡೆದ ಪೂಜೆಯ ಸಮಯದಲ್ಲಿ ಗುಡ್ಡೆಹೊಸೂರು ಸುತ್ತಮುತ್ತ ಮಳೆ ಸುರಿದು ಭೂಮಿ ತಂಪಾಯಿತು.ಈ ಸಂದರ್ಭ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.ಈ ದೇವಿಯ ಪ್ರತಿಷ್ಠಾಪನೆ ಮಾಡಿದ ದಿನದಿಂದ ಇಲ್ಲಿನ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನಡೆಸಿ ಉತ್ಸವ ಮೂರ್ತಿಯ ಮೇರವಣಿಗೆ ನಡೆಸುವ ಪದ್ಧತಿ. ಆದರೆ ಕಾವೇರಿ ನದಿ ಬರಿದಾಗಿದ್ದು ಈಭಾಗದಲ್ಲಿ ಒಂದು ಹನಿ ನೀರೂ ನದಿಯಲ್ಲಿ ಲಭ್ಯವಿಲ್ಲ. ಈ ಕಾರಣದಿಂದ ಕಾವೇರಿ ನದಿ ತಟದಲ್ಲಿ ಡ್ರಮ್ ಗಳಲ್ಲಿ ನೀರು ತುಂಬಿಸಿ ಗಂಗೆ ಪೂಜೆ ಮಾಡಿದ ಪ್ರಸಂಗ ಇಲ್ಲಿ ನಡೆಯಿತು.ಪೂಜಾಕಾರ್ಯವನ್ನು ದೇವಸ್ಥಾನದ ಅರ್ಚಕ ನಡುಮನೆ ಸತ್ಯ ನಡೆಸಿದರು.ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಸಿ.ಮಲ್ಲಿಕಾರ್ಜುನ ಮತ್ತು ಕಳಂಜನ ದಾದಪ್ಪ ಮತ್ತು ಸಮಿತಿ ಸದಸ್ಯರು ಹಾಜರಿದ್ದರು. ರಾತ್ರಿ ಅನ್ನಸಂತರ್ಪಣೆ ನಡೆಯಿತು.