ಜೋಶಿ, ಹೊರಟ್ಟಿ ಸೇರಿದಂತೆ ಗಣ್ಯರಿಂದ ಮತದಾನ

| Published : May 08 2024, 01:03 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ತಮ್ಮ ಮತವನ್ನು ಬೆಳಗಾವಿಗೆ ವರ್ಗಾಯಿಸಿಕೊಂಡು ಮತದಾನ ಮಾಡಿದರು.

ಹುಬ್ಬಳ್ಳಿ:

ಧಾರವಾಡ-ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಮತದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹುಬ್ಬಳ್ಳಿಯ ಭವಾನಿನಗರದಲ್ಲಿ ಸ್ಥಾಪಿಸಿರುವ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕುಟುಂಬ ಸಮೇತರಾಗಿ ಆಗಮಿಸಿದ್ದ ಜೋಶಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಇಲ್ಲಿನ ಲ್ಯಾಮಿಂಗ್ಟನ್‌ ಸ್ಕೂಲ್‌ನಲ್ಲಿ ಮತಗಟ್ಟೆಯಲ್ಲಿ ಪುತ್ರ, ಸೊಸೆ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ತಮ್ಮ ಮತದಾನ ಮಾಡಿದರು.

ಬಿಜಪಿ ಶಾಸಕ ಮಹೇಶ ಟೆಂಗಿನಕಾಯಿ ಬಸವೇಶ್ವರ ನಗರದ ಮತಗಟ್ಟೆಯಲ್ಲಿ ಮತಚಲಾಯಿಸಿದರೆ, ಶಾಸಕ ಪ್ರಸಾದ ಅಬ್ಬಯ್ಯ ತಮ್ಮ ತಾಯಿ ಹಾಗೂ ಪತ್ನಿಯೊಂದಿಗೆ ಆಗಮಿಸಿ ಸಂತೋಷನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಶಾಸಕ ಎಂ.ಆರ್‌. ಪಾಟೀಲ ಯರಗುಪ್ಪಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಕೇಂದ್ರದಲ್ಲಿ ಮತಚಲಾಯಿಸಿದರು. ವಿಧಾನಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ್‌ ತಮ್ಮ ಹಕ್ಕು ಚಲಾಯಿಸಿದರು. ಶೆಟ್ಟರ್‌ ಮತ ಬೆಳಗಾವಿಯಲ್ಲಿ

ಈ ನಡುವೆ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ತಮ್ಮ ಮತವನ್ನು ಬೆಳಗಾವಿಗೆ ವರ್ಗಾಯಿಸಿಕೊಂಡು ಮತದಾನ ಮಾಡಿದರು.

ಈ ವರೆಗೆ ಹುಬ್ಬಳ್ಳಿಯಲ್ಲೇ ಮತಚಲಾಯಿಸುತ್ತಿದ್ದ ಜಗದೀಶ ಶೆಟ್ಟರ್‌, ಈ ಸಲ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಈ ಕಾರಣದಿಂದ ತಮ್ಮ ವೋಟನ್ನು ಬೆಳಗಾವಿಗೆ ಸ್ಥಳಾಂತರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಲ್ಲೇ ಮತಚಲಾಯಿಸಿದರು. ಆದರೆ ಅವರ ಪತ್ನಿ ಶಿಲ್ಪಾ ಶೆಟ್ಟರ್‌, ಸೊಸೆ ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮತ ಹುಬ್ಬಳ್ಳಿಯಲ್ಲೇ ಇದೆ. ಶೆಟ್ಟರ್‌ ಸಹೋದರ ಹಾಗೂ ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಅವರ ಕುಟುಂಬದೊಂದಿಗೆ ತೆರಳಿದ ಶೆಟ್ಟರ್‌ ಕುಟುಂಬಸ್ಥರು ಮತಚಲಾಯಿಸಿದರು.