ಡಿಕೆಶಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

| Published : May 09 2024, 01:00 AM IST

ಸಾರಾಂಶ

ಕೆಲವರು ಅಶ್ಲೀಲ ಸುಳ್ಳು ದಾಖಲೆ ಸೃಷ್ಟಿಸಿ ಪೆನ್ ಡ್ರೈವ್ ಗಳಲ್ಲಿ ನಕಲಿ ಮಾಡಿ ಸುಳ್ಳು ಆರೋಪ ಹೊರಿಸಿ ನಮ್ಮ ಪಕ್ಷದ ನಾಯಕರನ್ನು ಬೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ. ಈ ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.

ಹುಬ್ಬಳ್ಳಿ:

ಹಾಸನ ಜಿಲ್ಲೆಯ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿದ ಪಿತೂರಿ ಆರೋಪಕ್ಕೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬುಧವಾರ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಧಾರವಾಡ ಜಿಲ್ಲಾ ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕುವವರ ವಿರುದ್ಧ, ಇಂತಹ ನೀಚ ಕೃತ್ಯಕ್ಕೆ ಮುಂದಾಗಿರುವ ಡಿ.ಕೆ. ಶಿವಕುಮಾರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಕೆಲವರು ಅಶ್ಲೀಲ ಸುಳ್ಳು ದಾಖಲೆ ಸೃಷ್ಟಿಸಿ ಪೆನ್ ಡ್ರೈವ್ ಗಳಲ್ಲಿ ನಕಲಿ ಮಾಡಿ ಸುಳ್ಳು ಆರೋಪ ಹೊರಿಸಿ ನಮ್ಮ ಪಕ್ಷದ ನಾಯಕರನ್ನು ಬೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ. ಈ ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹಾಗೂ ಪೆನ್ ಡ್ರೈವ್ ಬಿಡುಗಡೆ ಮಾಡಿದವರನ್ನು ಪತ್ತೆ ಮಾಡಿ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಸಚಿವ ಡಿ.ಕೆ. ಶಿವಕುಮಾರ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ರಾಜ್ಯ ಸರ್ಕಾರ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮುಖಂಡರಾದ ನವೀನಕುಮಾರ, ಬಾಷಾಸಾಬ್ ಮುದಗಲ್, ಮಾರುತಿ ಹಿಂಡಸಗೇರಿ, ವಿನಾಯಕ ಗಾಡಿವಡ್ಡರ, ಪೂರ್ಣಿಮಾ ಸವದತ್ತಿ, ಪೂಜಾ ಮೆಣಸಿನಕಾಯಿ, ಗೀತಾ, ಸುನಿತಾ, ಮಹಾದೇವಿ ಪಾಟೀಲ, ಶಂಕರಗೌಡ ದೊಡ್ಡಮನಿ, ಭೀಮರಾಯ ಗುಡೇನಕಟ್ಟಿ, ಬಸವರಾಜ ದನಿಗೊಂಡ, ಪ್ರಭು ಚೌಟಾ ಸೇರಿದಂತೆ ಹಲವರಿದ್ದರು.ಪೊಲೀಸರೊಂದಿಗೆ ವಾಗ್ವಾದ

ಪ್ರತಿಭಟನಾ ನಿರತ ಜೆಡಿಎಸ್‌ ಕಾರ್ಯಕರ್ತರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಭಾವಚಿತ್ರಕ್ಕೆ ಸಿಡಿ ಹಾರ ಹಾಕಿ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾ ನಿರತರಿಂದ ಡಿಕೆಶಿ ಭಾವಚಿತ್ರ ಕಸಿದುಕೊಂಡರು. ಇದಕ್ಕೆ ಆಕ್ರೋಶಗೊಂಡ ಜೆಡಿಎಸ್‌ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕಾಂಗ್ರೆಸ್‌ ನಾಯಕರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ಭಾವಚಿತ್ರಕ್ಕೆ ಬೆಂಕಿಹಚ್ಚಿ ಪ್ರತಿಭಟಿಸಬಹುದು. ಆದರೆ, ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಮಾಡದಂತೆ ಮನವಿ ಮಾಡಿದರು. ನಂತರ ಮಹಿಳಾ ಕಾರ್ಯಕರ್ತೆಯರು ಡಿಕೆಶಿ ಭಾವಚಿತ್ರಕ್ಕೆ ಕಪ್ಪುಬಣ್ಣದ ಸ್ಪ್ರೇ ಮಾಡಿ ಖಂಡಿಸಿದರು.