ಬಸವಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡದಿರುವುದು ದುರದೃಷ್ಟಕರ

| Published : May 09 2024, 01:02 AM IST

ಸಾರಾಂಶ

ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಬಸವೇಶ್ವರ ಪ್ರತಿಮೆ ಸ್ಥಾಪನೆ ಜನರ ಭಾವನೆಗಳಿಗೆ ಸಂಬಂಧಿಸಿದ್ದಾಗಿತ್ತು. ಬಹಳಷ್ಟು ಸಂಘಟನೆಗಳು ಹಾಗೂ ನೂರಾರು ಸಾರ್ವಜನಿಕರು ಈ ವಿಚಾರವಾಗಿ ತ್ರೀವ್ರವಾಗಿ ಪರಿಗಣಿಸಿದ್ದು, ಪ್ರತಿಮೆ ಬಳಿ ಜಮಾವಣೆಗೊಂಡು ಸಾಕಷ್ಟು ವಿವಾದ ಸೃಷ್ಠಿಸಿದ್ದರೂ ಊರಿನಲ್ಲಿಯೇ ಇದ್ದ ಸಮಾಜದ ಮುಖಂಡರೂ ಹಾಗೂ ಶಾಸಕರು ಅತ್ತ ಕಡೆ ಸುಳಿಯದೇ ದೂರ ಉಳಿದಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಬಸವೇಶ್ವರ ಪ್ರತಿಮೆ ಸ್ಥಾಪನೆ ಜನರ ಭಾವನೆಗಳಿಗೆ ಸಂಬಂಧಿಸಿದ್ದಾಗಿತ್ತು. ಬಹಳಷ್ಟು ಸಂಘಟನೆಗಳು ಹಾಗೂ ನೂರಾರು ಸಾರ್ವಜನಿಕರು ಈ ವಿಚಾರವಾಗಿ ತ್ರೀವ್ರವಾಗಿ ಪರಿಗಣಿಸಿದ್ದು, ಪ್ರತಿಮೆ ಬಳಿ ಜಮಾವಣೆಗೊಂಡು ಸಾಕಷ್ಟು ವಿವಾದ ಸೃಷ್ಠಿಸಿದ್ದರೂ ಊರಿನಲ್ಲಿಯೇ ಇದ್ದ ಸಮಾಜದ ಮುಖಂಡರೂ ಹಾಗೂ ಶಾಸಕರು ಅತ್ತ ಕಡೆ ಸುಳಿಯದೇ ದೂರ ಉಳಿದಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.ನಗರದ ಕೌಸ್ತುಭ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಶಾಸಕರು ಬಂದು ಮುಂದೆ ನಿಂತು ಜನತೆಗೆ ಧೈರ್ಯ ಹೇಳಬೇಕಿತ್ತು. ಊರಿನ ಪವಿತ್ರವಾದ ಕೆಲಸವನ್ನು ಮುಂದಿನ ದಿನಗಳಲ್ಲಿ ಕಾನೂನು ಬದ್ದವಾಗಿ ಮಾಡಿಸುತ್ತೇನೆ ಎಂದು ಭರವಸೆ ನೀಡಬೇಕಿತ್ತು. ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರವೇ ಘೋಷಿಸಿದ್ದರೂ ಅವರ ಪ್ರತಿಮೆಯನ್ನು ಸ್ಥಾಪಿಸಲು ಇದುವರೆಗೂ ಸರ್ಕಾರ ಅನುಮತಿ ನೀಡದಿರುವುದು ದುರದೃಷ್ಟಕರ ಎಂದರು.

ಎರಡು ವರ್ಷದ ಹಿಂದೆಯೇ ಮಾಜಿ ಸಚಿವ ಬಿ.ಸಿ.ನಾಗೇಶ್ ಹಾಗೂ ನಗರಸಭೆಯ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಪ್ರತಿಮೆಯನ್ನು ಕೋಡಿ ವೃತ್ತದಲ್ಲಿ ಸ್ಥಾಪಿಸಲು ನಗರಸಭೆಯಲ್ಲಿ ನಿರ್ಣಯ ಮಂಡಿಸಿ ಅದನ್ನು ಅಂಗೀಕರಿಸಿ ಜಿಲ್ಲಾಧಿಕಾರಿಗಳಿಗೆ ಮುಂದಿನ ಅನುಮತಿ ನೀಡಲು ಕಳುಹಿಸಲಾಗಿದ್ದು, ಅನುಮತಿ ಮಾತ್ರ ದೊರಕಿಲ್ಲ. ಆದರೆ ಜಿಲ್ಲಾಧಿಕಾರಿಗಳು ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸಿದ್ದಾರೆ ಎಂದು ನಗರಸಭೆ ಆಯುಕ್ತರು ಮೌಖಿಕವಾಗಿ ನನಗೆ ತಿಳಿಸಿದ್ದಾರೆ. ಈ ವಿಚಾರವನ್ನು ಇನ್ನೂ ಬಹಿರಂಗಪಡಿಸದೇ ಇರುವುದೆ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ. ಈಗ ಮತ್ತೆ ನಗರಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲು ಕಳಿಸಬೇಕು. ಈ ವಿಚಾರದಲ್ಲಿ ಶಾಸಕರ ಪಾತ್ರ ಹೆಚ್ಚಿಗೆ ಇದೆ. ಅವರು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಪ್ರತಿಮೆ ಸ್ಥಾಪನೆಗೆ ಅನುಮತಿ ಕೊಡಿಸಬೇಕು. ರಾಜ್ಯದ ಹಲವಾರು ಕಡೆ ಪ್ರತಿಮೆ ಸ್ಥಾಪನೆಗೆ ಅನುಮತಿ ದೊರೆಯುತ್ತಿದೆ. ತಿಪಟೂರಿಗೆ ಮಾತ್ರ ಅನುಮತಿ ಯಾಕೆ ದೊರೆಯುತ್ತಿಲ್ಲ ಎಂದು ಪ್ರಶ್ನಿಸಿದರು.ಮೊನ್ನೆ ನಡೆದ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಬಳಗದ ಕೆಲವು ಯುವಕರ ಮೇಲೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ತಿಳಿದು ಬಂದಿದೆ. ಶಾಸಕರು ಪೊಲೀಸ್ ಇಲಾಖೆಗೆ ಮನವಿ ಮಾಡಿ ಇದನ್ನು ತಡೆಯಬಹುದು. ಬಾವೋದ್ರೇಗಕ್ಕೆ ಒಳಗಾಗಿ ಕೆಲವು ಯುವಕರು ಇದರಲ್ಲಿ ಭಾಗಿಯಾಗಿದ್ದರು. ಅವರ ಭವಿಷ್ಯದ ಹಿತದೃಷ್ಠಿಯಿಂದ ಶಾಸಕರು ಸರ್ಕಾರದ ಜೊತೆ ಮಾತನಾಡಿ ಅವರ ಮೇಲಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್, ಸದಸ್ಯರಾದ ಭಾರತಿ ಮಂಜುನಾಥ್, ಅಶ್ವಿನಿ ದೇವರಾಜು, ರೇಣುಪಟೇಲ್, ನಾಗರಾಜು, ಮೈಸ್ ರೇಣು ಇನ್ನಿತರರು ಭಾಗವಹಿಸಿದ್ದರು.