ಕಾಂಗ್ರೆಸ್‌ಗೆ ಮತ ನೀಡಿದರೆ ಕಸದ ಡಬ್ಬಿಯಲ್ಲಿ ಹಾಕಿದಂತೆ: ಜನಾರ್ದನ ರೆಡ್ಡಿ

| Published : Apr 27 2024, 01:21 AM IST

ಕಾಂಗ್ರೆಸ್‌ಗೆ ಮತ ನೀಡಿದರೆ ಕಸದ ಡಬ್ಬಿಯಲ್ಲಿ ಹಾಕಿದಂತೆ: ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಶಿವರಾಜ ತಂಗಡಗಿ ಅವರಿಗೆ ಮೋದಿ ಹೆಸರು ಕರ್ಕಶ ಶಬ್ದದಂತೆ ಕೇಳುತ್ತಿದೆ ಎನಿಸುತ್ತದೆ. ಅದಕ್ಕಾಗಿ ಅವರು ಮೋದಿ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದಾರೆ. ಅದಕ್ಕೆ ಮತದಾರರು ಮತ ಹಾಕುವ ಸಂದರ್ಭದಲ್ಲಿ ಎರಡು ಸಲ ಮೋದಿ ಅಂತ ಹೇಳಬೇಕು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಕುಷ್ಟಗಿ: ಕಾಂಗ್ರೆಸ್ ಗ್ಯಾರಂಟಿ ಕೊಡುವ ಮೂಲಕ ನಮ್ಮ ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿದೆ. ಆದರೆ ನರೇಂದ್ರ ಮೋದಿ ಅವರು ಸ್ವಾವಲಂಬಿ ಜೀವನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡಿದ್ದಾರೆ. ಆದ ಕಾರಣ ಬಿಜೆಪಿಗೆ ಮತ ಹಾಕುವ ಮೂಲಕ ಡಾ. ಬಸವರಾಜ ಅವರನ್ನು ಗೆಲ್ಲಿಸಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಶಿವರಾಜ ತಂಗಡಗಿ ಅವರಿಗೆ ಮೋದಿ ಹೆಸರು ಕರ್ಕಶ ಶಬ್ದದಂತೆ ಕೇಳುತ್ತಿದೆ ಎನಿಸುತ್ತದೆ. ಅದಕ್ಕಾಗಿ ಅವರು ಮೋದಿ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದಾರೆ. ಅದಕ್ಕೆ ಮತದಾರರು ಮತ ಹಾಕುವ ಸಂದರ್ಭದಲ್ಲಿ ಎರಡು ಸಲ ಮೋದಿ ಅಂತ ಹೇಳಬೇಕು. ಅಂದಾಗ ತಂಗಡಗಿ ಅವರಿಗೆ ಎರಡು ಕಪಾಳಕ್ಕೆ ಹೊಡೆದಂತೆ ಆಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಿದ್ದರಾಮಯ್ಯ ಅವರು ಗ್ಯಾರಂಟಿಯ ಸಲುವಾಗಿ ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣವನ್ನು ಬಳಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭಿಕ್ಷೆ ಎತ್ತುವ ಕಾಲ ಬರಬಹುದು. ಗ್ಯಾರಂಟಿ ಯೋಜನೆಗಳ ಮಂಕುಬೂದಿ ಎರಚುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿಯವರ ಸಾಧನೆ ಚೊಂಬು ಎನ್ನುವ ಸಿದ್ದರಾಮಯ್ಯ ಅವರು ಕೇವಲ ಮಹಿಳೆಯರಿಗೆ ಮಾತ್ರ ಯೋಜನೆ ಜಾರಿಗೆ ತಂದಿದ್ದಾರೆ. ಬರಗಾಲದಿಂದ ತತ್ತರಿಸಿ ಹೋಗುತ್ತಿರುವ ರೈತರ ಕೈನಲ್ಲಿ ಚಿಪ್ಪು ಕೊಟ್ಟಿದ್ದಾರೆ ಎಂದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಈ ಲೋಕಸಭೆ ಚುನಾವಣೆಯು ನಮ್ಮ ಸ್ವಾಭಿಮಾನದ ಚುನಾವಣೆಯಾಗಿದೆ. ನಮ್ಮ ಕುಷ್ಟಗಿ ಕ್ಷೇತ್ರಕ್ಕೆ ಇಂದು ಟಿಕೆಟ್ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ. ಎಲ್ಲರೂ ಒಗ್ಗಟ್ಟಾಗಿ ಜಾತಿ, ಮತ ನೋಡದೆ ಬಿಜೆಪಿಗೆ ಮತ ಹಾಕಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ ಮಾತನಾಡಿ, ದೇಶದ ಭದ್ರತೆಗಾಗಿ, ದೇಶದ ಅಭಿವೃದ್ಧಿಗಾಗಿ ಬಿಜೆಪಿಯ ಅಭ್ಯರ್ಥಿಯಾದ ನನಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕೋರಿದರು.

ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಪ್ರಭಾಕರ ಚಿಣಿ, ಪರಸಪ್ಪ ಕತ್ತಿ, ಫಕೀರಪ್ಪ ಚಳಗೇರಿ, ನಾಗರಾಜ ಮೇಲಿನಮನಿ, ದೇವೇಂದ್ರಪ್ಪ ಬಳೂಟಗಿ, ನಾಗಪ್ಪ ಸೂಡಿ, ಶಂಕರ ಕರಪಡಿ, ದೊಡ್ಡಬಸವ ಸುಂಕದ್ ಇದ್ದರು.