ಮಾನವ ಜೀವನ ಬಹುಮುಖ್ಯ, ಬದುಕು ದೇವರು ಕೊಟ್ಟ ವರ

| Published : May 10 2024, 01:30 AM IST

ಮಾನವ ಜೀವನ ಬಹುಮುಖ್ಯ, ಬದುಕು ದೇವರು ಕೊಟ್ಟ ವರ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಜೀವನ ಬಹುಮುಖ್ಯವಾದದ್ದು, ಈ ಬದುಕು ನಮಗೆ ದೇವರು ಕೊಟ್ಟ ವರ. ಮನುಷ್ಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜಮುಖಿಯಾಗಿ ಬಾಳಿ-ಬದುಕಿ ಈ ಭೂಮಿಯ ಋಣ ತೀರಿಸಬೇಕು. ಅಂದಾಗ ಮಾತ್ರ ಮಾನವ ಜನ್ಮದ ಸಾರ್ಥಕತೆ ಎಂದು ದಕ್ಷಿಣ ಭಾರತ ಜೈನ ಸಭೆಯ ಪದವೀಧರ ಸಂಘಟನೆಯ ಸಂಸ್ಥಾಪಕ ಆರ್.ಪಿ.ಪಾಟೀಲ ಸಿದ್ನಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಪರಮಾನಂದವಾಡಿಮಾನವ ಜೀವನ ಬಹುಮುಖ್ಯವಾದದ್ದು, ಈ ಬದುಕು ನಮಗೆ ದೇವರು ಕೊಟ್ಟ ವರ. ಮನುಷ್ಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜಮುಖಿಯಾಗಿ ಬಾಳಿ-ಬದುಕಿ ಈ ಭೂಮಿಯ ಋಣ ತೀರಿಸಬೇಕು. ಅಂದಾಗ ಮಾತ್ರ ಮಾನವ ಜನ್ಮದ ಸಾರ್ಥಕತೆ ಎಂದು ದಕ್ಷಿಣ ಭಾರತ ಜೈನ ಸಭೆಯ ಪದವೀಧರ ಸಂಘಟನೆಯ ಸಂಸ್ಥಾಪಕ ಆರ್.ಪಿ.ಪಾಟೀಲ ಸಿದ್ನಾಳಕರ ಹೇಳಿದರು.

ಸಮೀಪದ ಖೇಮಲಾಪುರ ಗ್ರಾಮದಲ್ಲಿ ಈಚೆಗೆ ನಡೆದ ದಕ್ಷಿಣ ಭಾರತ ಜೈನ ಸಭೆಯ ಹಾಗೂ ಲಠ್ಠೆ ಎಜುಕೇಶನ್‌ ಸಂಸ್ಥೆಗಳ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಕೃಷಿ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ನಿವೃತ್ತ ಪ್ರಾಚಾರ್ಯ ಅಕ್ಷಯಕುಮಾರ (ಅಪ್ಪಾಸಾಹೇಬ) ಆದಪ್ಪ ಮೂಡಲಗಿ ಹಾಗೂ ಮಧುಮತಿ ಅಕ್ಷಯಕುಮಾರ ಮೂಡಲಗಿ ದಂಪತಿಯ ನಿಸ್ವಾರ್ಥ ಸಮಾಜ ಸೇವೆಯ ಗೌರವ ನಿಮಿತ್ತ ನಡೆದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೂರ್ವಜನ್ಮದ ಪುಣ್ಯದ ಫಲದಿಂದಲೂ ಅಥವಾ ಆಕಸ್ಮಾತಾಗಿಯೂ ಲಭಿಸಿದ ಕಿರಿದಾದ ಈ ಜೀವನ ಪಯಣದಲ್ಲಿ ನಮಗೆ ಹಲವಾರು ಜನರ ಸಂಪರ್ಕ ಬರುತ್ತದೆ, ಹಲವಾರು ಜನರ ಪರಿಚಯವಾಗುತ್ತದೆ ಎಂದು ತಿಳಿಸಿದರು.

ಪ್ರಾಮಾಣಿಕ ದುಡಿಮೆ, ಸುತ್ತಲಿನವರಿಗೆ, ಸ್ನೇಹಿತರಿಗೆ ಸಹಾಯ ಮಾಡುವ ಸಹಜ ಸರಳ ವ್ಯಕ್ತಿಯುಳ್ಳ ಯೋಗಿ, ತ್ಯಾಗಿಗಳಂತೆ. ಇತರರ ಕಲ್ಯಾಣಕ್ಕಾಗಿ ಶ್ರಮಿಸುವ ವ್ಯಕ್ತಿ ನಮ್ಮ ಸ್ನೇಹಿತರಾಗಿರುವುದು ನಮಗೆ ಅಭಿಮಾನ, ಗೌರವ ತರುವ ಸಂಗತಿ. ಇದೀಗ ಜೀವನದ ಮಹತ್ವಪೂರ್ಣ 75 ವರ್ಷ ಅರ್ಥಪೂರ್ಣವಾಗಿ ಬದುಕಿದ ಪ್ರಾಚಾರ್ಯ ಅಕ್ಷಯಕುಮಾರ ಮೂಡಲಗಿ ಅವರ ಮುಂದಿನ ದಿನಗಳು ಸುಖ, ಸಂತೃಪ್ತಿ, ಶಾಂತಿ, ಸಮಾಧಾನದಿಂದ ಕೂಡಲೆಂದು ನಾವೆಲ್ಲರೂ ಇಂದು ಹಾರೈಸಬೇಕು. ಇವರ ಸೇವೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದಕ್ಷಿಣ ಭಾರತ ಜೈನ ಸಭೆಗೆ ಅವಶ್ಯಕತೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಡಾ.ಎಸ್.ಪಿ.ಪಾಟೀಲ, ಜಿನ್ನಪ್ಪ ಅಸ್ಕಿ ಆಗಮಿಸಿದ್ದರು. ಅತಿಥಿಗಳಾಗಿ ಸುನಿಲ ಪಾಟೀಲ, ನಂದೇಶ್ವರ ಚಿಟ್ಟಿ, ಡಾ. ಭರತಕುಮಾರ ಮೂಡಲಗಿ, ಪದ್ಮಜಿತ ಮೂಡಲಗಿ, ಸಿದ್ದಪ್ಪ ನಾಗನೂರ, ಡಾ.ಮನೋಹರ ಮೂಡಲಗಿ, ಡಾ. ಪ್ರಿಯಾಂಕಾ ಮೂಡಲಗಿ, ಸುವರ್ಣಾ ಮೂಡಲಗಿ, ನಿತೀನ್‌ ವಿರೋಜೆ, ಅಮಿತ್‌ ಪಾಟೀಲ, ಉಜ್ವಲಾ ವಿರೋಜೆ, ದೀಪಾಲಿ ಪಾಟೀಲ ಸೇರಿದಂತೆ ಇನ್ನೂ ಮುಂತಾದ ಮುಖಂಡರು ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಅಶೋಕ ಶಿರಹಟ್ಟಿ ಸ್ವಾಗತಿಸಿ ನಿರೂಪಿಸಿದರು. ಶೀತಲ ಮಾಲಗಾಂವೆ ವಂದನಾರ್ಪಣೆ ಮಾಡಿದರು.

9 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯಧನ:

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಅಕ್ಷಯಕುಮಾರ ಮೂಡಲಗಿ ಅವರು ಗ್ರಾಮದ 9 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯಧನ ವಿತರಿಸಿದರು.ಕೆಲವರು ತಮ್ಮ ಗುಣ ಗೌರವಗಳಿಂದಾಗಿ ತುಂಬಾ ಆತ್ಮೀಯರಾಗಿ ಬಿಡುತ್ತಾರೆ. ಪ್ರೀತಿಯ ವಿದ್ಯಾರ್ಥಿಗಳಿಗೆ ಮೂಡಲಗಿ ಸರ್ ಎಂದರೇ ಅಪಾರ ಪ್ರೀತಿ, ಗೌರವ. ಇವರು ನಿವೃತ್ತಿಯ ನಂತರ ವಿಶ್ರಾಂತಿ ತೆಗೆದುಕೊಳ್ಳದೇ ದಕ್ಷಿಣ ಭಾರತ ಜೈನ ಸಮಾಜದ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ, ಬೆಳಗಾವಿ ವಿಭಾಗದ ಉಪಾಧ್ಯಕ್ಷರಾಗಿ ನಂತರ ಸಹ ಖಜಾಂಚಿಯಾಗಿ, ಮರಾಠಿ ಪತ್ರಿಕೆಗಳಾದ ಪ್ರಗತಿ ಮತ್ತು ಜಿನವಿಜಯ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹಾಗೂ ಗ್ರಾಜುವೇಟ್‌ ಅಸೋಸಿಯೇಷನ್‌ ಚೇರಮನ್‌ರಾಗಿಯೂ ಸೇವೆ ಸಲ್ಲಿಸಿದ್ದಾರೆ.

-ಆರ್.ಪಿ.ಪಾಟೀಲ ಸಿದ್ನಾಳಕರ,

ದಕ್ಷಿಣ ಭಾರತ ಜೈನ ಸಭೆಯ ಪದವೀಧರ ಸಂಘಟನೆಯ ಸಂಸ್ಥಾಪಕರು.