ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆ

| Published : May 08 2024, 01:07 AM IST

ಸಾರಾಂಶ

ಚಿಕ್ಕಮಗಳೂರು, ಬಿಸಿಲಿನ ಝಳದಿಂದ ತತ್ತರಿಸಿದ್ದ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಭಾರೀ ಗಾಳಿಗೆ ಬಿದ್ದ ಮರಗಳು । ಆಲಿಕಲ್ಲಿನಿಂದ ಸೋಲಾರ್ ಟ್ಯೂಬ್‌ಗಳಿಗೆ ಹಾನಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಸಿಲಿನ ಝಳದಿಂದ ತತ್ತರಿಸಿದ್ದ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು.ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆ, ಸಮುಖ ನಗರ, ಬೈಪಾಸ್ ರಸ್ತೆಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಇಲ್ಲಿನ ಎಂಜಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹಲವು ಅಡ್ಡ ರಸ್ತೆಗಳು ಜಲಾವೃತವಾಗಿದ್ದವು. ತಗ್ಗಿನ ಪ್ರದೇಶಗಳಲ್ಲಿರುವ ಕೆಲವು ಮನೆಗಳ ಒಳಗೆ ನೀರು ನುಗ್ಗಿತ್ತು.ಕೆಲವು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಬಿಸಿಲಿನ ಝಳ ಜೋರಾಗಿದೆ. ಬೆಳಿಗ್ಗೆ 7.30 ರಿಂದ ಸಂಜೆ 4.30 ರವರೆಗೆ ಸರಾಸರಿ 37 ಡಿಗ್ರಿ ಉಷ್ಣಾಂಶ ದಾಖಲಾಗಿರುತ್ತದೆ. ಮಂಗಳವಾರವೂ ಕೂಡ ಬೆಳಿಗ್ಗೆ ಇದೇ ಪರಿಸ್ಥಿತಿ ಇತ್ತು. ಮಧ್ಯಾಹ್ನ 1.30ರ ವೇಳೆಗೆ ಮೋಡ ಆವರಿಸಿದ್ದು 2.10 ಕ್ಕೆ ಸಾಧಾರಣವಾಗಿ ಆರಂಭವಾದ ಮಳೆ 10 ನಿಮಿಷದ ಬಳಿಕ ದಟ್ಟವಾಗಿ ಸುರಿಯಿತು. ಭಾರೀ ಗಾಳಿ ಆಲಿಕಲ್ಲಿನೊಂದಿಗೆ ಸುರಿದ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿಸಿತು. ಹಲವೆಡೆ ವಾಹನಗಳು ರಸ್ತೆಗಳಿಗೆ ಇಳಿಯಲೇ ಇಲ್ಲ.ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸಂಚಾರದಲ್ಲಿ ಅಡಚಣೆಯಾಗಿತ್ತು. ಸಂಜೆ 7 ಗಂಟೆ ನಂತರದಲ್ಲಿ ಕೆಲವೆಡೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿತ್ತು. ಮಳೆಯ ಜತೆಯಲ್ಲಿ ಆಲಿಕಲ್ಲು ಬಿದ್ದ ಪರಿಣಾಮ ಹಿರೇಮಗಳೂರಿನ ಪುಟ್ಟಸ್ವಾಮಿ, ಅನಿತಾ ದೊರೆಸ್ವಾಮಿ, ಟೈಲರ್ ಪ್ರಕಾಶ್ ಅವರ ಮನೆಯ ಮೇಲಿರುವ ಸೋಲಾರ್ ಟ್ಯೂಬ್‌ಗಳಿಗೆ ಹಾನಿಯಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಸುರಿದ ಮಳೆಯಿಂದಾಗಿ ತೆರೆದ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ದ್ವಿಚಕ್ರ ವಾಹನ ಸವಾರರು ಅಂಗಡಿಗಳಲ್ಲಿ ನಿಂತುಕೊಂಡಿದ್ದರು. ನಗರದ ಅಗಸರ ಬೀದಿಯಲ್ಲಿರುವ ಮೋಹನ್‌ಕುಮಾರ್ ಸೇರಿದಂತೆ ಹಲವರ ಮನೆಯೊಳಗೆ ಮಳೆ ನೀರಿನ ಜತೆಗೆ ಚರಂಡಿ ನೀರು ಸೇರಿಕೊಂಡಿತ್ತು. ಲಕ್ಷ್ಮೀಶ ನಗರ ಸೇರಿದಂತೆ ಹಲವು ತಗ್ಗಿನ ಪ್ರದೇಶಗಳಲ್ಲಿರುವ ಮನೆಗಳಲ್ಲೂ ಕೂಡ ನೀರು ನಿಂತಿದ್ದರಿಂದ ಅದನ್ನು ಹೊರಗೆ ಹಾಕಲು ಹರ ಸಾಹಸಪಟ್ಟರು. ಸಂಜೆ 4.15ರ ವೇಳೆಗೆ ಮಳೆ ಬಿಡುವು ನೀಡಿತು. ನಂತರ ಎಂದಿನಂತೆ ಅದೇ ಬಿಸಿಲು. ಆದರೆ, ಮಳೆ ಬಂದಿದ್ದರಿಂದ ವಾತಾವರಣ ಸಂಜೆ ಕೂಲ್‌ ಕೂಲ್‌ ಆಗಿತ್ತು.

ಆಲ್ದೂರು, ಕಣತಿ, ಸಂಗಮೇಶ್ವರ ಪೇಟೆ, ಬಾಳೆಹೊನ್ನೂರು, ಸೀತೂರು, ಹೇರೂರು ಸುತ್ತಮುತ್ತ 10-20 ನಿಮಿಷ ಭಾರೀ ಗಾಳಿ ಸಹಿತ ಸಾಧಾರಣ ಮಳೆ ಬಂದಿದೆ. ಇದರಿಂದ ಕಾಫಿ ಬೆಳೆಗೆ ಅನುಕೂಲವಾಗಿದೆ. ಕಡೂರು ಪಟ್ಟಣ ಸೇರಿದಂತೆ ಕೆಲವೆಡೆ ಸಂಜೆ 6 ಗಂಟೆ ವೇಳೆಗೆ 5-10 ನಿಮಿಷ ಗುಡುಗು ಸಹಿತ ಸಾಧಾರಣ ಮಳೆ ಬಂದಿತು. ನಂತರ ಬಿಡುವು ನೀಡಿದ್ದರಿಂದ ಬಿಸಿಲು ಮುಂದುವರೆದಿತ್ತು. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಎಂದಿನಂತೆ ಬಿಸಿಲು ನಂತರ ಮೋಡ ಕವಿದ ವಾತಾವರಣ ಇತ್ತು.

-- ಬಾಕ್ಸ್---

ಬಾಳೆಹೊನ್ನೂರು ಸುತ್ತಮುತ್ತ ಮಳೆಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಸಾಧಾರಣ ಪ್ರಮಾಣದ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಗುಡುಗು ಸಹಿತ ಆರಂಭಗೊಂಡ ಮಳೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆಯಿತು.೦೭ಬಿಹೆಚ್‌ಆರ್ ೧:ಬಾಳೆಹೊನ್ನೂರು ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಮಳೆ ಸುರಿದಾಗ ಕಂಡುಬಂದ ದೃಶ್ಯ.

---

ಶೃಂಗೇರಿಯಲ್ಲಿ ಗುಡುಗು ಗಾಳಿ ಸಹಿತ ಸಾಧಾರಣ ಮಳೆಶೃಂಗೇರಿ: ತಾಲೂಕಿನ ಕೆಲವೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಸಾಧಾರಣ ಮಳೆ ಬಿದ್ದಿದೆ. ಸಂಜೆಯವರೆಗೂ ಸುಡು ಬಿಸಿಲ ವಾತಾವರಣವಿದ್ದು, ಸಂಜೆ ದಟ್ಟ ಮೋಡ ಕವಿದು ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಯಿತು. ತಾಲೂಕಿನ ಪಟ್ಟಣದಲ್ಲಿ ಗಾಳಿ ಸಹಿತ ಸಾಧಾರಣ ಮಳೆ ಬಿದ್ದಿತು. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಕೆಲಹೊತ್ತು ಮಳೆ ಸುರಿಯಿತು. ಸಂಜೆಯವರೆಗೂ ಸುಡು ಬಿಸಿಲ ವಾತಾವರಣಕ್ಕೆ ಮಳೆಯಿಂದ ಕೊಂಚ ತಂಪೆರೆದಂತಾಯಿತು.

--- 7 ಕೆಸಿಕೆಎಂ 4ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಗೆ ಸಂಪರ್ಕ ಕಲ್ಪಿಸುವ ಕರಾಳಮ್ಮ ದೇವಾಲಯದ ರಸ್ತೆ ಜಲಾವೃತವಾಗಿರುವುದು.

----ಪೋಟೋ ಪೈಲ್ ನೇಮ್‌ 7 ಕೆಸಿಕೆಎಂ 5ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಿಂದ ಮಾರ್ಕೆಟ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿರುವುದು.

---ಪೋಟೋ ಫೈಲ್‌ ನೇಮ್‌ 7 ಕೆಸಿಕೆಎಂ 6ಹಿರೇಮಗಳೂರಿನಲ್ಲಿ ಆಲಿಕಲ್ಲಿನಿಂದಾಗಿ ಮನೆಗಳ ಮೇಲಿನ ಸೋಲಾರ್‌ ಟ್ಯೂಬ್‌ಗೆ ಹಾನಿಯಾಗಿರುವುದು.