ಬಡವರ ಜೀವನಕ್ಕೆ ಗೃಹಲಕ್ಷ್ಮಿ ಸಹಕಾರಿ: ಡಾ.ಪ್ರಭಾ

| Published : Apr 26 2024, 12:46 AM IST

ಸಾರಾಂಶ

ಬಡತನ ಜೀವನಾಧಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರು ತಾಲೂಕಿನಲ್ಲಿ ಮತಯಾಚಿಸಿ ಕಾಂಗ್ರೆಸ್‌ ಬೆಂಬಲಿಸಲು ಮನವಿ

- - - ಕನ್ನಡಪ್ರಭ ವಾರ್ತೆ ಜಗಳೂರು

ಬಡತನ ಜೀವನಾಧಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಜಗಳೂರು ತಾಲೂಕಿನ ಅಣಬೂರು ಗ್ರಾಮದಿಂದ ಗುರುವಾರ ಪ್ರಚಾರ ಆರಂಭಿಸಿದ ಅವರು ಹನುಮಂತಾಪುರ, ತರಳಬಾಳು ಕೇಂದ್ರ, ಹಿರೇಮಲ್ಲನಹೊಳೆ, ಮುಸ್ಠೂರು, ಕಲ್ಲೇದೇವರಪುರ, ದೊಣ್ಣೆಹಳ್ಳಿ, ತೋರಣಗಟ್ಟೆ, ಬಿದರಕೆರೆ, ಬಿಸ್ತುವಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.

ಗೃಹಲಕ್ಷ್ಮಿ ಯೋಜನೆ ಪರಿಣಾಮ ಸಾವಿರಾರು ಹೆಣ್ಣುಮಕ್ಕಳು ಮನೆಗಳಿಗೆ ಟಿ.ವಿ., ಫ್ರಿಜ್‌, ವಾಷಿಂಗ್ ಮೆಷಿನ್, ಬಂಗಾರ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಪಿ.ಯು.ಸಿ ಪರೀಕ್ಷೆ ಫಲಿತಾಂಶದಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಪಡೆದ ವಿದ್ಯಾರ್ಥಿಯೂ ನನ್ನ ವಿದ್ಯಾಭ್ಯಾಸಕ್ಕೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. ಜಗಳೂರು ವಿಧಾನಸಭೆ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ₹98 ಕೋಟಿಯಷ್ಟು ಹಣ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದ ಅವರು, ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳನ್ನು ಒಟ್ಟೊಟ್ಟಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಬಿ. ದೇವೇಂದ್ರಪ್ಪ, ಮಾಜಿ ಶಾಸಕರಾದ ಗುರುಸಿದ್ದನ ಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಶೀರ್ ಅಹಮದ್, ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ, ಕೆ.ಪಿ. ಪಾಲಯ್ಯ, ಮುಖಂಡರಾದ ಡಾ.ಟಿ.ಜಿ. ರವಿಕುಮಾರ್, ಕಲ್ಲೇಶ್ ರಾಜ್ ಪಾಟೀಲ್, ಸುರೇಶ್ ಗೌಡ್ರು, ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- - - -25ಜೆಎಲ್ಆರ್1:

ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಣಬೂರು ಗ್ರಾಮದಿಂದ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ ಕಾರ್ಯ ಆರಂಭಿಸಿದರು.