ಹೆಚ್ಚಿನ ಲೀಡ್‍ನಲ್ಲಿ ಗೀತಾ ಜಯ ಖಚಿತ: ಮಧು ವಿಶ್ವಾಸ

| Published : May 08 2024, 01:08 AM IST

ಸಾರಾಂಶ

ಆನವಟ್ಟಿ ಸಮೀಪದ ಕುಬಟೂರು ಮತಗಟ್ಟೆಯಲ್ಲಿ ಸಚಿವ ಎಸ್‍.ಮಧು ಬಂಗಾರಪ್ಪ, ಪತ್ನಿ ಅನಿತಾ ಮಧುಬಂಗಾರಪ್ಪ ದಂಪತಿ ಸಮೇತರಾಗಿ, ಸರತಿ ಸಾಲಿನಲ್ಲೇ ತೆರಳಿ ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ/ ಭದ್ರಾವತಿ/ ಸಾಗರ

ಈ ಬಾರಿಯ ಲೋಕಸಭೆ ಚುಣಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಚುಣಾವಣೆಯಾಗಿದ್ದು, ಬಿಜೆಪಿಗರು ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್‍ ಸರ್ಕಾರದ ಯೋಜನೆಗಳು ಮನೆ-ಮನೆಗೂ ತಲುಪಿದೆ. ಹಾಗಾಗಿ ಗೀತಾ ಅವರು ಹೆಚ್ಚು ಲೀಡ್‍ನಲ್ಲೇ ಜಯ ಗಳಿಸುತ್ತಾರೆ ಎಂದು ಪ್ರಾಥಮಿಕ ಹಾಗೂ ಸಾಕ್ಷರತಾ ಶಿಕ್ಷಣ ಇಲಾಖೆಯ ಸಚಿವ ಎಸ್‍.ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಸಚಿವ ಮಧು ಬಂಗಾರಪ್ಪ ಹಾಗೂ ಪತ್ನಿ ಅನಿತಾ ಮಧುಬಂಗಾರಪ್ಪ ದಂಪತಿ ಸಮೇತರಾಗಿ, ಎಸ್‍. ಬಂಗಾರಪ್ಪ, ಶಕುಂತಲ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಸ್ವಗ್ರಾಮದ ಕುಬಟೂರಿನ ಗಣಪತಿ ದೇವಸ್ಥಾನ, ಆಂಜನೇಯ ದೇವಸ್ಥಾನ ಹಾಗೂ ದ್ಯಾವಮ್ಮ ದೇವಸ‍್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮತಕಟ್ಟೆ ಯಲ್ಲಿ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಮೋದಿ ಬಂದ ಮೇಲೆ ದೇಶ ಅಭಿವೃಧಿ ಆಗಿದಿಯಾ? 65 ವರ್ಷ ಇವರೆಲ್ಲ ಕಾಂಗ್ರೆಸ್‍ ಸರ್ಕಾರದಲ್ಲಿ ಬದುಕಿರಲಿಲ್ಲವೇ? ಎಂದು ಪ್ರಶ್ನಿಸಿದ ಅವರು ಬರಿ ಹುಸಿ ಸುಳ್ಳು ಹುಟ್ಟುಹಾಕು ವುದರಲ್ಲೇ ಬಿಜೆಪಿ ಹತ್ತು ವರ್ಷ ಕಳೆದಿದೆ. ಇದನ್ನು ಸಾಮಾನ್ಯ ಜನರು ತಿಳಿದುಕೊಂಡಿದ್ದಾರೆ. ದೇಶದಲ್ಲಿ ಜನರಿಗೆ ಕಾಂಗ್ರೆಸ್‍ ಮೇಲೆ ಹೆಚ್ಚು ನಂಭಿಕೆ, ವಿಶ್ವಾಸವಿದೆ, ಜನಸಾಮಾನ್ಯರ ಬದುಕಿಗೆ ಕಾಂಗ್ರೆಸ್‍ ಸಹಕಾರ ನೀಡಿದೆ ಹಾಗಾಗಿ ದೇಶದಲ್ಲಿ ಕಾಂಗ್ರೆಸ್‍ ಸರ್ಕಾರ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸದಾನಂದ ಗೌಡ ಬಿಳಗಲಿ, ಪಿ.ಎಸ್‍ ಮಂಜುನಾಥ, ಸುರೇಶ್‍ ಸಾರೆಕೊಪ್ಪ, ಸುರೇಶ್‍ ಎಲೆಕ್ಟ್ರೀಕಲ್‍ ಇದ್ದರು.

ಕಾಂಗ್ರೆಸ್‌ ಗ್ಯಾರಂಟಿಗಳೇ ಕೈ ಹಿಡಿಯುತ್ತವೆ: ಗೀತಾಆನವಟ್ಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿರುವ ಐದು ಗ್ಯಾರಂಟಿಗಳು, ಪ್ರತಿ ಕುಟುಂಬಕ್ಕೂ ತಲುಪಿದೆ. ಮತ್ತೆ ಲೋಕಸಭೆ ಚುಣಾವಣೆಗೆ ಕಾಂಗ್ರೆಸ್‍ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ, ವಿಶ್ವಾಸ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ನನಗೆ ಗೆಲುವು ಸಿಗುತ್ತದೆ ಎಂದು ಶಿವಮೊಗ್ಗ ಕೇತ್ರ ಲೋಕಸಭೆ ಅಭ್ಯರ್ಥಿ ಗೀತಾ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿನ ಬಾಲಿಕಾ ಪ್ರೌಢಶಾಲೆಯ ಮತಕೇಂದ್ರದ ಬಳಿ ಭೇಟಿ ನೀಡಿ, ಕಾರ್ಯಕರ್ತರಿಂದ ಮಾಹಿತಿ ಪಡೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ನನ್ನ ತಮ್ಮ ಸೋತಾಗಲೂ, ಗೆದ್ದಾಗಲೂ ಜಿಲ್ಲೆಯ ಜನರ ಜೊತೆಗೆ ಇದ್ದಾನೆ. ನೀರಾವರಿ, ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಿದ್ದಾರೆ. ತಂದೆ ಬಂಗಾರಪ್ಪ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದ್ದರು. ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ಭವನಾತ್ಮಕ ಹೇಳಿಕೆಗಳಿಂದ ನಮಗೆ ಸೋಲಾಗಿರಬಹುದು. ಆದರೆ ಈಗ ಜನರಿಗೆ ಅರ್ಥವಾಗಿದೆ ನಮ್ಮ ಕುಟುಂಬ ಹಾಗೂ ಕಾಂಗ್ರೆಸ್‍ ಪಕ್ಷ ಸರ್ವ ಜನಾಂಗದ ಹಾಗೂ ಸರ್ವಧರ್ಮಗಳ ಪರವಾಗಿದೆ ಹಾಗಾಗಿ ಕ್ಷೇತ್ರದ ಜನ ನನ್ನ ಕೈಹಿಡಿ ಯುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್‍ ಪಕ್ಷದ ಮುಖಂಡರಾದ ಜರ್ಮಲೆ ಚಂದ್ರಶೆಖರ್‍, ಮಧುಕೇಶ್ವರ ಪಾಟೀಲ್, ಸುರೇಶ್‍ ಹಾವಣ್ಣನವರ್‌, ಸಂಜೀವ ತರಕಾರಿ, ಪಿ.ಹನುಮಂತಪ್ಪ ಹೊಸಳ್ಳಿ, ಅನೀಶ್‌ಗೌಡ, ದರ್ಶನ್‍ ದಚ್ಚು ಇದ್ದರು.ಗೀತಾ

ಗೆಲುವು ಖಚಿತ: ಸಂಗಮೇಶ್ವರ್ ವಿಶ್ವಾಸ

ಭದ್ರಾವತಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್‌ಗಳು ಮತದಾರರ ಮೇಲೆ ಪ್ರಭಾವ ಬೀರಿದ್ದು, ಮತದಾರರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಗೀತಾ ಗೆಲುವು ಖಚಿತ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಮಂಗಳವಾರ ಈ ಬಾರಿ ವಿಶೇಷವಾಗಿ ರೂಪಿಸಲಾಗಿರುವ ನಗರಸಭೆ ಮಾದರಿ ಮತಗಟ್ಟೆಯಲ್ಲಿ ಸಂಜೆ ಸುಮಾರು ೪ ಗಂಟೆಗೆ ಮತ ಚಲಾಯಿಸಿ ಮಾತನಾಡಿದರು. ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗೀತಾ ಶಿವರಾಜ್‌ಕುಮಾರ್‌ರವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಬಿಳಿಕಿ ಶ್ರೀಗಳಿಂದ ಮತ ಚಲಾವಣೆ :

ಕ್ಷೇತ್ರದ ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿ ಬಾರಿ ಸಾರ್ವಜನಿಕ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುತ್ತಿದ್ದು, ಈ ಬಾರಿ ಸಹ ಬಿಳಿಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಪ್ರತಿಯೊಬ್ಬ ಮತದಾರ ಸಹ ಯಾವುದೇ ಆಮಿಷಗಳಿಗೆ ಒಳಗಾಗದೆ ಪಾರದರ್ಶಕವಾಗಿ ಮತ ಚಲಾಯಿಸಬೇಕು. ನಾವು ಪಾರದರ್ಶಕವಾಗಿದ್ದರೆ ಮಾತ್ರ ನಮ್ಮಿಂದ ಆಯ್ಕೆಯಾದವರು ಸಹ ಪಾರದರ್ಶಕವಾಗಿರಲು ಸಾಧ್ಯ ಎಂದರು.ಸಿ.ಎಂ ಇಬ್ರಾಹಿಂ ಹಕ್ಕು ಚಲಾವಣೆ:

ಹಿರಿಯ ರಾಜಕೀಯ ಮುತ್ಸದ್ದಿ, ಕೇಂದ್ರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದು, ಈ ಬಾರಿ ಸಹ ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿ ಮತಗಟ್ಟೆ ಸಂಖ್ಯೆ ೬೭ರಲ್ಲಿ ಮತ ಚಲಾಯಿಸಿದರು. ಇಬ್ರಾಹಿಂ ಅವರು ಈ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೆ ತಟಸ್ಥವಾಗಿ ಉಳಿದಿದ್ದು, ಅವರ ಮುಂದಿನ ರಾಜಕೀಯ ನಡೆ ಕಾದು ನೋಡಬೇಕಾಗಿದೆ.

ಶಾರದ ಅಪ್ಪಾಜಿ ಮತದಾನ: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಧರ್ಮಪತ್ನಿ, ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಈ ಬಾರಿ ಸಹ ತಮ್ಮ ಮತದಾನದ ಹಕ್ಕು ಚಲಾಯಿಸಿದರು.ಪಕ್ಷೇತರ ಅಭ್ಯರ್ಥಿ ಜಾನ್ ಬೆನ್ನಿ: ಈ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಾನ್ ಬೆನ್ನಿಯವರು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.

ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ೧೪೬ರಲ್ಲಿ ಜಾನ್‌ಬೆನ್ನಿ ಹಾಗು ಇವರ ಪತ್ನಿ ಮತ್ತು ಪುತ್ರಿ ಮತ ಚಲಾಯಿಸಿದರು. ಬೆನ್ನಿಯವರು ಈಗಾಗಲೇ ೨ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಗೀತಾ ಗೆಲುವು ನಿಶ್ಚಿತ: ಬೇಳೂರು ವಿಶ್ವಾಸ

ಸಾಗರ : ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಕುಟುಂಬದವರೊಂದಿಗೆ ಮತಚಲಾಯಿಸಿದರು. ಮತ ಹಾಕಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ ಗೀತಾ ಅವರ ಗೆಲುವಿಗೆ ಬೇಕಾದ ಮತದಾನವಾಗಿದೆ. ಮೂರು ಅವಧಿಯಲ್ಲಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಏನೂ ಕೆಲಸ ಮಾಡಿಲ್ಲ. ಸಾಗರ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯವಾಗಿದೆ. ಮೂರು ಅವಧಿಯಲ್ಲಿ ತಮ್ಮ ಆಸ್ತಿ ಜಾಸ್ತಿ ಮಾಡಿಕೊಂಡಿದ್ದಾರೆಯೆ ಹೊರತು ಅಭಿವೃದ್ದಿ ಬಗ್ಗೆ ಗಮನ ಹರಿಸಿಲ್ಲ. ಇದು ಕಾಂಗ್ರೆಸ್ಸಿನ ಗೆಲುವಿಗೆ ಪೂರಕವಾಗಲಿದೆ ಎಂದರು. ಈ ಸಂದರ್ಭದಲ್ಲಿ ರಾಧಾ ಗೋಪಾಲಕೃಷ್ಣ, ಅಶೋಕ್ ಬೇಳೂರು, ವಿ.ಶಂಕರ್ ಇನ್ನಿತರರು ಹಾಜರಿದ್ದರು.