ಪೆನ್ ಡ್ರೈವ್ ಪ್ರಕರಣ ಸಿಬಿಐಗೆ ವರ್ಗಾಯಿಸಲು ಒತ್ತಾಯ

| Published : May 08 2024, 01:08 AM IST

ಸಾರಾಂಶ

ಪೆನ್ ಡ್ರೈವ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಈ ಪ್ರಕರಣವು ಮೂಲ ಕೈಗಳಾಗಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ದಾರಿ ತಪ್ಪುತ್ತಿದೆ, ಇಂತಹ ಸಂಸ್ಥೆಯ ಮೇಲೆ ನಮಗೆ ಯಾವುದೇ ನಂಬಿಕೆ ಇಲ್ಲ.

ಕನ್ನಡಪ್ರಭ ವಾರ್ತೆ ಕುಣಿಗಲ್

ಹಾಸನದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಒಕ್ಕಲಿಗ ಕುಟುಂಬವನ್ನು ತುಳಿಯಲು ಹೊರಟಿದೆ. ಎಸ್ಐಟಿ ತನಿಖಾ ಸಂಸ್ಥೆ ಮೇಲೆ ನಮಗೆ ಅಸಮಾಧಾನ ಇದ್ದು ಸಿಬಿಐಗೆ ವರ್ಗಾಯಿಸಬೇಕೆಂದು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು

ಪಟ್ಟಣದ ಹುಚ್ಚ ಮಾಸ್ತಿ ಗೌಡ ವೃತ್ತದಲ್ಲಿ ಸಂಘಟನೆಗೊಂಡ ಜೆಡಿಎಸ್ ಕಾರ್ಯಕರ್ತರು, ರಾಜ್ಯ ಸರ್ಕಾರ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಅಧ್ಯಕ್ಷ ಬಿಎನ್ ಜಗದೀಶ್ ಮಾತನಾಡಿ, ಪೆನ್ ಡ್ರೈವ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಈ ಪ್ರಕರಣವು ಮೂಲ ಕೈಗಳಾಗಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ದಾರಿ ತಪ್ಪುತ್ತಿದೆ, ಇಂತಹ ಸಂಸ್ಥೆಯ ಮೇಲೆ ನಮಗೆ ಯಾವುದೇ ನಂಬಿಕೆ ಇಲ್ಲ, ಆದ್ದರಿಂದ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಯಿಂದ ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ನಾಶ ಮಾಡುವ ಉದ್ದೇಶ ಮತ್ತು ಒಕ್ಕಲಿಗ ನಾಯಕರನ್ನು ರಾಜಕೀಯದಿಂದ ಸರ್ವನಾಶ ಮಾಡುವ ಕೆಲಸ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆ. ಯಾವುದೋ ವಿಡಿಯೋ ತಂದು ಹಲವಾರು ಹೆಣ್ಣು ಮಕ್ಕಳ ಮುಖಗಳನ್ನು ಅದಕ್ಕೆ ಹಾಕಿ, ಸಾವಿರಾರು ಪೆನ್ ಡ್ರೈವ್ ಗಳನ್ನು ಹಂಚಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥ ಸ್ಥಾನದಲ್ಲಿರುವ ರೇವಣ್ಣ ಅವರ ಪುತ್ರರನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ, ಆ ವಿಚಾರವಾಗಿ ತನಿಖಾ ಸಂಸ್ಥೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು.ಹುಚ್ಚ ಮಾಸ್ತಿ ಗೌಡ ವೃತದಲ್ಲಿ ಪ್ರತಿಭಟನೆ ನಂತರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.