ವಿಕಸಿತ ಭಾರತವೆಂಬ ಸುಳ್ಳಿನ ಪ್ರಚಾರಕ್ಕೆ ಸೋಲಾಗಲಿದೆ: ಸಿಎಂ ಸಿದ್ದರಾಮಯ್ಯ

| Published : Apr 23 2024, 12:52 AM IST

ವಿಕಸಿತ ಭಾರತವೆಂಬ ಸುಳ್ಳಿನ ಪ್ರಚಾರಕ್ಕೆ ಸೋಲಾಗಲಿದೆ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಎನ್ನುವ ಸುಳ್ಳಿನ ಪ್ರಚಾರಕ್ಕೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತರೀಕೆರೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಎನ್ನುವ ಸುಳ್ಳಿನ ಪ್ರಚಾರಕ್ಕೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಎಪಿಎಂಸಿ ಯಾರ್ಡ್‌ನಲ್ಲಿ ಸೋಮವಾರ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಏರ್ಪಡಿಸಲಾಗಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪರ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಕಸಿತ ಭಾರತ ಅಂತ ನರೇಂದ್ರ ಮೋದಿ ಹೇಳಿದರು. ವಿಕಸಿತ ಸಮಾಜ ಅಂದರೆ ಅದು ವರ್ಗರಹಿತ ಸಮಾಜ, ಜಾತಿ ಯತೆ ಹೋಗಬೇಕು. ಸಮ ಸಮಾಜ ನಿರ್ಮಾಣ ಅಗಬೇಕು, ಮೋದಿ ಅವರು ಹತ್ತು ವರ್ಷ ರೈತರಿಗೆ, ಬಡವರಿಗೆ ಏನು ಮಾಡಿದ್ದಾರೆ. ಶ್ರೀಮಂತರು ಇಟ್ಟ ಕಪ್ಪು ಹಣ ನೂರೇ ದಿನದಲ್ಲಿ ವಾಪಸು ತರುತ್ತೇನೆ. 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇನೆ ಎಂದಿದ್ದರು, ಹಾಕಿದಾರಾ ಎಂದು ಪ್ರಶ್ನಿಸಿದರು,

ನಿರುದ್ಯೋಗ ಹೋಗಲಾಡಿಸುತ್ತೇನೆ, 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದಿದ್ದರು. ಉದ್ಯೋಗ ಸೃಷ್ಠಿಯಾಯಿತಾ,..? ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ, ಬೆಲೆ ಇಳಿಸುತ್ತೇನೆ ಎಂದರು. ಗ್ಯಾಸು, ಗೊಬ್ಬರ, ಪೆಟ್ರೋಲ್, ಡೀಸಲ್, ತೈಲ ಬೆಲೆ ಏರಿಸಲಾಯಿತು, ರೈತರಿಗೆ ಖರ್ಚು ಹೆಚ್ಚಾಯಿತು, ಅಚ್ಚೆ ದಿನ್ ಬಂತಾ ಎಂದು ಕೇಳಿದರು.

ವಾಜಪೇಯಿಯವರ ಇಂಡಿಯಾ ಶೈನಿಂಗ್ ಎನ್ನುವ ಸುಳ್ಳು ಪ್ರಚಾರ ಸೋತ ಹಾಗೆಯೇ ಮೋದಿಯವರ ವಿಕಸಿತ ಭಾರತ ಸುಳ್ಳಿನ ಪ್ರಚಾರಕ್ಕೂ ಸೋಲಾಗುತ್ತದೆ. ಬಡವರು, ಮಧ್ಯಮ ವರ್ಗದ ಕುಟುಂಬಗಳ ಭವಿಷ್ಯ ಉಳಿಯಲು ಇದು ನಿರ್ಣಾಯಕ ಚುನಾವಣೆ. ಯೋಚಿಸಿ ನಿರ್ಧರಿಸಬೇಕು ಎಂದರು. ದೇವೇಗೌಡರ ಸುಳ್ಳು ಕೇಳಿ ನಾಚಿಕೆ ಆಯ್ತು

ಮೋದಿಯವರ ಜತೆ ಪೈಪೋಟಿಗೆ ಬಿದ್ದವರಂತೆ ದೇವೇಗೌಡರು ಹೇಳಿದ ಸುಳ್ಳುಗಳನ್ನು ಕೇಳಿ ನನಗೇ ನಾಚಿಕೆ ಆಯ್ತು. ದೇವೇಗೌಡರು ಮೋದಿಯವರ ಮಟ್ಟಕ್ಕೆ ಇಳಿದು ಸುಳ್ಳು ಹೇಳಿದ್ರಲ್ಲಾ ಅಂತ ನನಗೇ ನಾಚಿಕೆ ಆಯ್ತು ಎಂದರು.

ಮೋದಿಯವರು ರಾಜ್ಯದ ಜನತೆಗೆ ಕೊಟ್ಟ ಖಾಲಿ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಸುಳ್ಳು ಹೇಳಿದ್ದಾರೆ. ಚೊಂಬು ಅಕ್ಷಯ ಪಾತ್ರೆ ಆಗಿದ್ದರೆ, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಾಗಲಿಲ್ಲ ? ರೈತರ ಸಾಲ ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಡೀ ದೇಶದ ರೈತರ ಸಾಲ 76 ಸಾವಿರ ಕೋಟಿಯನ್ನು ಒಂದೇ ಸಾರಿ ಮನ್ನಾ ಮಾಡಿದರು. ಮೋದಿ15 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಹೀಗಾಗಿ ಮೋದಿ ಯವರು ರಾಜ್ಯದ, ದೇಶದ ಮಧ್ಯಮ ವರ್ಗ ಮತ್ತು ಬಡವರ ಕೈಗೆ ಖಾಲಿ ಚೊಂಬು ಕೊಟ್ಟರು. ಶ್ರೀಮಂತ ಉದ್ಯಮಿಗಳ ಪಾಲಿಗೆ ಅಕ್ಷಯ ಪಾತ್ರೆ ಆದರು. ಈ ಸತ್ಯ ದೇವೇಗೌಡರಿಗೆ ಗೊತ್ತಿದ್ದೂ ಏಕೆ ರಾಜ್ಯದ ಜನರಿಗೆ ಸುಳ್ಳು ಹೇಳಿದರು ಎಂದು ಪ್ರಶ್ನಿಸಿದರು.

ನಾವು ನುಡಿದಂತೆ ನಡೆದು ಪ್ರತೀ ಕುಟುಂಬಗಳ ಖಾತೆಗೆ, ಜನರ ಜೇಬಿಗೆ ಹಣ ಹಾಕುತ್ತಿರುವ ನಮ್ಮ ಗ್ಯಾರಂಟಿಗಳಿಗೆ ಮತ ಹಾಕುತ್ತೀರೋ, ಸುಳ್ಳುಗಳ ಸರದಾರನ ಖಾಲಿ ಚೊಂಬಿಗೆ ಮತ ಹಾಕುತ್ತೀರೋ ಯೋಚಿಸಿ ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಮಹಿಳೆಯರಿಗೆ ಕೊಡುತ್ತಿರುವ ವಾರ್ಷಿಕ 24 ಸಾವಿರ ರು. ಜತೆಗೆ ರಾಷ್ಟ್ರೀಯ ಕಾಂಗ್ರೆಸ್ ನಿಂದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರು. ಕೊಡುವ ಘೋಷಣೆ ಮಾಡಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಿದ್ದಾರೆ. ಜತೆಗೆ ಇಡೀ ದೇಶದ ರೈತರ ಸಾಲ ಸಂಪೂರ್ಣ ಮನ್ನಾ, ನಿರುದ್ಯೋಗಿ ಯುವಕರ ಖಾತೆಗೆ ಲಕ್ಷ ರು. ಹಾಕುವ ಗ್ಯಾರಂಟಿಯನ್ನೂ ನಾವು ನೀಡಿದ್ದೇವೆ. ಹೀಗಾಗಿ ಖಾಲಿ ಚೊಂಬಿಗೆ ಮತ ಹಾಕಿ ಹಾಳು ಮಾಡಿಕೊಳ್ತೀರೋ, ನಿಮ್ಮಗೆ ಸ್ಪಂದಿಸಿ ನಿಮ್ಮ ಜೇಬಿಗೆ ಶಕ್ತಿ ತುಂಬುವ ಗ್ಯಾರಂಟಿ ಕಾಂಗ್ರೆಸ್ಸಿಗೆ ಮತ ಹಾಕ್ತೀರೋ ನಿರ್ಧರಿಸಿ ಎಂದು ಹೇಳಿದರು.

ಸರ್ಕಾರದ ಗ್ಯಾರಂಟಿ ಪಡೆದು ರಾಜ್ಯದ ಮಹಿಳೆಯರು ಹಾದಿ ತಪ್ಪಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಟ್ಟಾದ ಸಿಎಂ, ಅವರ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ಇಂಥಾ ಮಾತು ಹೇಳೋಕೆ ಅವರಿಗೆ ನಾಚಿಕೆಯಾದ್ರೂ ಆಗಲಿಲ್ವಾ ಎಂದರು.

ಮೋದಿ ಸರ್ಕಾರ ಅಡಕೆಯನ್ನು ವಿದೇಶದಿಂದ ಆಮದು ಮಾಡಿ, ರಾಜ್ಯದ ಅಡಕೆ ಬೆಳೆಗಾರರ ಕುಟುಂಬಕ್ಕೆ ದ್ರೋಹ ಬಗೆದಿದೆ. ಇದಕ್ಕೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಚ್‌.ಡಿ. ತಮ್ಮಯ್ಯ, ಕೆ.ಎಸ್‌. ಆನಂದ್‌, ಟಿ.ಡಿ. ರಾಜೇಗೌಡ, ಶ್ರೀನಿವಾಸ್‌, ನಯನಾ ಮೋಟಮ್ಮ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ, ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಸಚಿವೆ ಮೋಟಮ್ಮ, ಡಾ. ಬಿ.ಎಲ್‌. ಶಂಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಅಂಶುಮಂತ್‌, ಎಂ.ಸಿ. ಶಿವಾನಂದಸ್ವಾಮಿ, ಎಚ್‌.ಎಂ. ಗೋಪಿಕೃಷ್ಣ, ಮುಖಂಡರಾದ ಎಚ್.ಯು.ಫಾರೂಕ್, ದಯಾನಂದ್, ಕಾಂಗ್ರೆಸ್ ಸಮಿತಿ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಸಮೀವುಲ್ಲಾ ಶರೀಫ್‌ ಉಪಸ್ಥಿತರಿದ್ದರು.

ಕಾವೇರಿಗೆ ದೇವೇಗೌಡ, ಕುಮಾರಸ್ವಾಮಿ ಪಾತ್ರ ಏನು: ಸಿದ್ದು ಪ್ರಶ್ನೆಚಿಕ್ಕಮಗಳೂರು: ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಬೇಕೆಂದು ಸಂಸದ ಪ್ರತಾಪ್‌ ಸಿಂಹ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ದೇಶದಲ್ಲಿ ಪ್ರಕ್ಷುಬ್ಧತೆ ಕ್ರಿಯೇಟ್ ಮಾಡಿರೋರು ಯಾರೆಂದು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದ ನಿಮಿತ್ತ ತರೀಕೆರೆಗೆ ಸೋಮವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಭಾರತ್ ಜೋಡೋ ಯಾತ್ರೆ ಮಾಡಿದ್ದು ಎಂದರು.ಕಾವೇರಿಗೆ ದೇವೇಗೌಡ, ಕುಮಾರಸ್ವಾಮಿ ಅವರ ಪಾತ್ರ ಏನು ? ಅವರು ಏನಾದರೂ ಮಾಡಿದ್ದೇವೆ ಎಂದು ಹೇಳಿದ್ದಾರಾ, ಪ್ರಧಾನ ಮಂತ್ರಿ ಕೆಲಸವೇ ದೇಶ ಕಾಯುವುದು, ದೇಶಕ್ಕೆ ರಕ್ಷಣೆ ಕೊಡೋದು ಎಂದ ಅವರು, ಇಂದಿರಾಗಾಂಧಿ, ನೆಹರೂ, ರಾಜೀವ್ ಗಾಂಧಿ ಮಾಡಲಿಲ್ಲವೇ ? ನರಸಿಂಹರಾವ್ ಮಾಡಲಿಲ್ವಾ. ಇವರು ಮಾತ್ರ ಕಾಯ್ತಾ ಇದ್ದಾರಾ ಎಂದು ಪ್ರಶ್ನಿಸಿದರು.ಗ್ಯಾರಂಟಿ ಸವಲತ್ತು ಚಿಪ್ಪಾರಾಜ್ಯ ಸರ್ಕಾರದ ವಿರುದ್ಧ ಚಿಪ್ಪು ಜಾಹೀರಾತು ಕೊಡ್ತಿವಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಾವು ಜಾಹೀರಾತು ಕೊಟ್ಟ ಮೇಲೆ ಅವರು ಯೋಚನೆ ಮಾಡುವುದು ಬೇರೆ. ಕರ್ನಾಟಕಕ್ಕೆ ಚೊಂಬು ಕೊಟ್ಟರು ಎಂದು ನಾವು ಹೇಳಿದ ಮೇಲೆ ಮಾಡುತ್ತಿದ್ದಾರೆ ಎಂದರು.ಹೆಣ್ಣು ಮಕ್ಕಳಿಗೆ 2000 ಹಣ ಕೊಡ್ತಾ ಇದ್ದೇವೆ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ ಎಂದ ಅವರು, ಅನ್ನಭಾಗ್ಯ 5 ಕೆಜಿ ಜಾಸ್ತಿ ಮಾಡಿದ್ದು ಚಿಪ್ಪಾ, ಎಲ್ಲರಿಗೂ ಫ್ರೀಯಾಗಿ ಕರೆಂಟ್ ಕೊಡುವುದು ಚಿಪ್ಪಾ, ಯುವ ನಿಧಿ, ತಿಂಗಳಿಗೆ 4-5 ಸಾವಿರ ಕುಟುಂಬಕ್ಕೆ ಕೊಡುವುದು ಚಿಪ್ಪಾ ? ಅವರು ಏನು ಮಾಡಿದ್ದಾರೆಂದು ಕಿಡಿಕಾರಿದರು.

22 ಕೆಸಿಕೆಎಂ 2ತರೀಕೆರೆಯ ಎಪಿಎಂಸಿ ಯಾರ್ಡ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪರ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರು ಇದ್ದರು.