ಬೆಳಗ್ಗೆ ಅತ್ಯುತ್ಸಾಹ, ಮಧ್ಯಾಹ್ನ ನಿರುತ್ಸಾಹ

| Published : May 08 2024, 01:05 AM IST

ಸಾರಾಂಶ

ಮಧ್ಯಾಹ್ನದ ಹೊತ್ತು ಬಿಸಿಲು ನೆತ್ತಿ ಸುಡಲಿದೆ ಎಂದು ಬಹುತೇಕ ಮತದಾರರು ನಸುಕಿನಲ್ಲಿಯೇ ಎದ್ದು 7ಕ್ಕೆ ಮತಗಟ್ಟೆ ಬಂದು ಮತದಾನ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಧಾರವಾಡ:

ಬೆಳಗ್ಗೆ ಅತ್ಯುತ್ಸಾಹದಿಂದ ಮತದಾನ.. ಮಧ್ಯಾಹ್ನ ಬಿರು ಬಿಸಿಲಿಗೆ ವಿಶ್ರಾಂತಿ...ಮತ್ತೆ ಸಂಜೆ ಹೊತ್ತಿಗೆ ಉತ್ಸಾಹದಿಂದ ಮತದಾನ..!

ಮಂಗಳವಾರ ನಡೆದ ಧಾರವಾಡ ಲೋಕಸಭಾ ಚುನಾವಣೆಗೆ ಮತದಾರರ ಮತದಾನದ ಪ್ರತಿಕ್ರಿಯೆ ಹೀಗಿತ್ತು.

ಮಧ್ಯಾಹ್ನದ ಹೊತ್ತು ಬಿಸಿಲು ನೆತ್ತಿ ಸುಡಲಿದೆ ಎಂದು ಬಹುತೇಕ ಮತದಾರರು ನಸುಕಿನಲ್ಲಿಯೇ ಎದ್ದು 7ಕ್ಕೆ ಮತಗಟ್ಟೆ ಬಂದು ಮತದಾನ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಮಧ್ಯಾಹ್ನದ ಹೊತ್ತು ಮತದಾನಕ್ಕೆ ಬರುತ್ತಿದ್ದರು. ನಗರ ಹಾಗೂ ಗ್ರಾಮೀಣದ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಶುರುವಾತಿನಿಂದಲೂ ಮಧ್ಯಾಹ್ನ 12ರ ವರೆಗೂ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಒಂದೆಡೆ ಮತಯಂತ್ರ ಕೈಕೊಟ್ಟಿದ್ದು ಬಿಟ್ಟರೆ ಮತ್ತೆಲ್ಲೂ ಮತಯಂತ್ರಗಳ ಸಮಸ್ಯೆ ಉದ್ಭವಿಸಲಿಲ್ಲ. ಅಲ್ಲದೇ, ಯಾವುದೇ ಗದ್ದಲ-ಗೊಂದಲಗಳಿಲ್ಲದೇ ಮತದಾನ ಶಾಂತಿಯುತ, ಸೂಸುತ್ರವಾಗಿ ನಡೆಯಿತು.

ಸಮೀಪದ ಕೆಲಗೇರಿ, ಮುಗದ, ರಾಮಾಪುರ, ಕೋಟೂರ, ಗರಗ, ಉಪ್ಪಿನ ಬೆಟಗೇರಿ, ಯಾದವಾಡ, ಕಮಲಾಪುರ ಸೇರಿ ಇತರ ಗ್ರಾಮಗಳಲ್ಲಿ ಮತದಾನ ತುರುಸಿನಿಂದ ಕೂಡಿತ್ತು. ಅಂಗವಿಕಲರು, ಹಿರಿಯ ನಾಗರಿಕರು ಸಹ ಮೊಮ್ಮಕ್ಕಳು, ಮಕ್ಕಳ ನೆರವಿನೊಂದಿಗೆ ಆಗಮಿಸಿ ಮತದಾನ ಮಾಡಿದರು. ಯುವ ಮತದಾರರು ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿ ಉತ್ಸಾಹ ನಗೆ ಬೀರಿದರು.

85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಆಯೋಗ ಅವಕಾಶ ನೀಡಿತ್ತು. ಆದರೆ ಗ್ರಾಮೀಣ ಭಾಗದ ಬಹುತೇಕ ಜನರು ಇದರ ಪ್ರಯೋಜನ ಪಡೆದಂತೆ ಕಾಣಲಿಲ್ಲ. 85 ವರ್ಷದಿಂದ 100 ವರ್ಷ ದಾಟಿದವರೂ ಮತಗಟ್ಟೆಗಳಿಗೆ ಇತರರ ಸಹಾಯದೊಂದಿಗೆ ಆಗಮಿಸಿ ಮತ ಚಲಾಯಿಸುವ ದೃಶ್ಯಗಳು ಕಂಡು ಬಂದವು.

ಬಿಸಿನ ಝಳ ಹೆಚ್ಚಿರುವ ಕಾರಣಕ್ಕೆ ಪ್ರತಿ ಮತಗಟ್ಟೆಯಲ್ಲಿ ಶಾಮಿಯಾನ, ಕುಡಿಯುವ ನೀರು, ಆರೋಗ್ಯ ಸೇವೆ ಕಲ್ಪಿಸಲಾಗಿತ್ತು. ಮತ ಚಲಾಯಿಸಲು ಆಗಮಿಸಿದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ಅಗತ್ಯ ಔಷಧೋಪಚಾರ ವ್ಯವಸ್ಥೆಯ ಜತೆಗೆ ಒಆರ್​ಎಸ್​ ಪಾಕೆಟ್​ ಸಹ ಇಡಲಾಗಿತ್ತು. ಒರ್ವ ಮತಗಟ್ಟೆ ಸಿಬ್ಬಂದಿ ಹೊರತು ಪಡಿಸಿ ಮತ್ತೆಲ್ಲೂ ಅನಾರೋಗ್ಯದ ಸಮಸ್ಯೆ ಕಂಡು ಬಂದಿಲ್ಲ. ಧಾರವಾಡ ಜಿಲ್ಲೆಯಲ್ಲಿ ಶಾಂತಿಯುತ, ಸುಗಮ ಮತದಾನವಾಗಿದೆ. ಜಿಲ್ಲೆಯಲ್ಲಿ ಪಿಂಕ್ ಹಾಗೂ ಪಿಡಬ್ಲ್ಯೂಡಿ ಮತಗಟ್ಟೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಖಿ ಬೂತ್‌ನಲ್ಲಿ ಮಕ್ಕಳ ಆಟಗಳ ದೃಶ್ಯ ಸಂತಸ ತಂದಿದೆ. ಕೆಲ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಕ್ಷೇತ್ರದಲ್ಲಿ ಸುಗಮ ಮತದಾನವಾಗಿದೆ

ಹುಬ್ಬಳ್ಳಿ ಫೆಂಡಾರಗಲ್ಲಿಯಲ್ಲಿ 300 ಜನರನ್ನು ಮತ ಪಟ್ಟಿಯಿಂದ ತೆಗೆದಿರುವ ಬಗ್ಗೆ ದೂರು ಬಂದಿದ್ದು, ಪರಿಶೀಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.