ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಬೇಕು: ಜಿ.ಧನಂಜಯ ದರಸಗುಪ್ಪೆ

| Published : May 06 2024, 12:41 AM IST

ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಬೇಕು: ಜಿ.ಧನಂಜಯ ದರಸಗುಪ್ಪೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಿ ರೂಪುಗೊಂಡಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ 25 ಮಂದಿ ಸೇವೆ ಸಲ್ಲಿಸಿ, ಡಾ.ನೋಡೋಜ ಮಹೇಶ ಜೋಷಿ ಅವರು ಪ್ರಸ್ತುತ 26ನೇ ರಾಜ್ಯಾಧ್ಯಕ್ಷರಾಗಿದ್ದಾರೆ. ಇದುವರೆವಿಗೂ 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದು, 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕನ್ನಡ ನಾಡು -ನುಡಿ ಏಳ್ಗೆಗಾಗಿ ಶ್ರಮಿಸುತ್ತಿರುವ ಶತಮಾನದ ಇತಿಹಾಸವಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಗೌರವ ಹೊಂದಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಅಭಿಪ್ರಾಯಪಟ್ಟರು.

ತಾಲೂಕಿನ ಅರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ತಾಲೂಕು ಕಸಾಪದಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಶತಮಾನದ ಇತಿಹಾಸವುಳ್ಳ ಸುಮಾರು 5 ಲಕ್ಷದಷ್ಟು ಸದಸ್ಯರನ್ನು ಹೊಂದಿರುವ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಘಟಕಗಳಲ್ಲದೇ ಹೊರನಾಡು ಹಾಗೂ ಗಡಿನಾಡುಗಳಲ್ಲಿಯೂ ಘಟಕಗಳನ್ನು ಹೊಂದಿರುವ ಕನ್ನಡ ಭಾಷೆಯ ಏಳ್ಗೆಗಾಗಿ ಶ್ರಮಿಸುತ್ತಿರುವ ವಿಶ್ವದಲ್ಲಿಯೇ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಬಹುಶಃ ತಪ್ಪಾಗಲಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಿ ರೂಪುಗೊಂಡಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ 25 ಮಂದಿ ಸೇವೆ ಸಲ್ಲಿಸಿ, ಡಾ.ನೋಡೋಜ ಮಹೇಶ ಜೋಷಿ ಅವರು ಪ್ರಸ್ತುತ 26ನೇ ರಾಜ್ಯಾಧ್ಯಕ್ಷರಾಗಿದ್ದಾರೆ. ಇದುವರೆವಿಗೂ 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದು, 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಶಿಕ್ಷಕ ಎ.ಆರ್.ಅನಿಲ್ ಬಾಬು ಅರಕೆರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭ, ಬೆಳವಣಿಗೆ -ಪ್ರಸ್ತುತ ಸ್ಥಿತಿ -ಗತಿ, ಸಮ್ಮೇಳನಗಳು, ಗೋಷ್ಠಿಗಳು, ಪ್ರಕಟಣೆ ಗಳು, ದತ್ತಿ ಗೋಷ್ಠಿ, ಸನ್ಮಾನ, ಅಭಿನಂದನೆಗಳು, ಇನ್ನಿತರೇ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀರಂಗಪಟ್ಟಣ ತಾಲೂಕು ಕಸಾಪ ಅಧ್ಯಕ್ಷ. ಬಿ..ಮಂಜುನಾಥ್ ಬಲ್ಲೇನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸಲು ತಾಲೂಕಿನಾದ್ಯಂತ ಜಿಲ್ಲೆಯ ಹಿರಿಯ ಕವಿಗಳ-ಕಾವ್ಯಗಳ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.

ಇದೇ ವೇಳೆ ಪರಿಷತ್ತಿನ ಹಿರಿಯ ಸದಸ್ಯರಾದ ಕೆ.ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಅ.ಸೋಮಶೇಖರ್ ಅರಕೆರೆ ಉದ್ಘಾಟಿಸಿದರು. ಮಹಿಳಾ ಮಂಡಳಿ ಸುಮಾ, ಗ್ರಾಪಂ ಸದಸ್ಯೆ ಮೀನಾ, ಶಿವಕುಮಾರ ಅರಕೆರೆ, ಕೊ.ನಾ. ಪುರುಷೋತ್ತಮ್, ಪಾಲಹಳ್ಳಿ ಶೇಖರ್, ನಗರ ಘಟಕದ ಅಧ್ಯಕ್ಷೆ ಎನ್.ಸರಸ್ವತಿ, ಅರಕೆರೆ ಡೈರಿ ಅಧ್ಯಕ್ಷ ಪ್ರಕಾಶ್, ಶ್ರೀಧರ್, ದೀಪು, ಎಂ. ಜಗದೀಶ್ ಕುಮಾರ್, ಎ.ಪಿ.ರವಿ, ಎಂ. ಬಿ.ಅನಂತಯ್ಯ, ಹರೀಶ್ ಬಳ್ಳೆಕೆರೆ, ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು.

ಇದೇ ವೇಳೆ ಕಸಾಪ 110 ಎಂದು ನಮೂದಿಸಿರುವ ಕೇಕ್ ಕತ್ತರಿಸಿ ಸಂಭ್ರಮಿಸಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.