ಪರಿಸರ ರಕ್ಷಣೆಗೆ ಸಾಮೂಹಿಕ ಕಾಳಜಿ ಅಗತ್ಯ

| Published : Apr 25 2024, 01:05 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆಯ ಕುರಿತು ಸಾಮೂಹಿಕವಾಗಿ ಕಾಳಜಿ ವಹಿಸಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ತಮ್ಮ ಅಳಿಲು ಸೇವೆ ಸಲ್ಲಿಸುವುದು ಅಗತ್ಯ.

ಬಳ್ಳಾರಿ; ಪರಿಸರ ಸಂರಕ್ಷಣೆಗೆ ಮಾನವನ ಕೊಡುಗೆಗಳು ಗಣನೀಯವಾಗಿ ಕ್ಷೀಣಿಸುತ್ತಿದ್ದು, ಇದು ಮನುಕುಲಕ್ಕೆ ಸಂಕಷ್ಟ ತಂದೊಡ್ಡುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ ಅಭಿಪ್ರಾಯಪಟ್ಟರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಯೋಜನೆಯ ಭಾಗವಾಗಿ ಆಯೋಜಿಸಿದ್ದ ‘ಯುವಮಂಥನ’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆಯ ಕುರಿತು ಸಾಮೂಹಿಕವಾಗಿ ಕಾಳಜಿ ವಹಿಸಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ತಮ್ಮ ಅಳಿಲು ಸೇವೆ ಸಲ್ಲಿಸುವುದು ಅಗತ್ಯ, ಈ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್ ರುದ್ರೇಶ್ ಮಾತನಾಡಿ, ಪರಿಸರದಲ್ಲಿನ ಹಲವಾರು ಜೀವರಾಶಿಗಳ ಉಳಿವಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಬೇಕು. ಸುಸ್ಥಿರ ಬದುಕಿಗೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ನೈಸರ್ಗಿಕ ತಾಪಮಾನ ನಿಯಂತ್ರಣ ಮಾಡಲು ಮರ-ಗಿಡಗಳನ್ನು ನೆಟ್ಟು ಪೋಷಿಸಬೇಕು. ಇಲ್ಲವಾದಲ್ಲಿ ಮುಂಬರುವ ಪೀಳಿಗೆಗೆ ಪರಿಸರ ಕಾಳಜಿಗೆ ನಾವು ನೀಡುವ ಕೊಡುಗೆ ಶೂನ್ಯವಾಗುತ್ತದೆ ಎಂದು ತಿಳಿಸಿದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಸಂಯೋಜಕರಾದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಿರಂಜನ್ ಅತಿಥಿಗಳನ್ನು ಸ್ವಾಗತಿಸಿದರು. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿಗಳು ಸೇರಿದಂತೆ ಪರಿಸರ ರಕ್ಷಣೆಯ ಕುರಿತಾದ 10 ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ನಡೆಯಿತು.

ವಿವಿಧ ವಿಭಾಗಗಳ 50 ವಿದ್ಯಾರ್ಥಿಗಳು ತಮ್ಮ ವಿಚಾರಧಾರೆ ಮಂಡಿಸಿದರು. ಸಂವಾದ ಗೋಷ್ಠಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಹನುಮೇಶ್ ವೈದ್ಯ, ಡಾ.ಕೆ.ಎಸ್. ಲೋಕೇಶ್, ಡಾ.ಅಂಶುಮಾಲಿ ತೀರ್ಪುಗಾರರಾಗಿ ಆಗಮಿಸಿದ್ದರು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.