ಬೇಲೂರಲ್ಲಿ ಚುನಾವಣಾ ಸಿಬ್ಬಂದಿಗೆ ರುಚಿಕರ ಭೋಜನ ವ್ಯವಸ್ಥೆ

| Published : Apr 26 2024, 12:45 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ 270 ಮತಗಟ್ಟೆ ಕೇಂದ್ರಗಳಿಗೆ ತೆರಳಲಿರುವ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆಯವರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರು

ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ 270 ಮತಗಟ್ಟೆ ಕೇಂದ್ರಗಳಿಗೆ ತೆರಳಲಿರುವ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆಯವರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.

ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಜೊತೆ ಸಿಬ್ಬಂದಿ ಮತಗಟ್ಟೆಗೆ ತೆರಳಲು ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ನಿರ್ವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಲೂಕಿನ ಮತಗಟ್ಟೆ ಕೇಂದ್ರಗಳಿಗೆ ಗುರುವಾರ 1304 ಸಿಬ್ಬಂದಿ, 17 ಮೈಕ್ರೋ ಆಫೀಸರ್‌ಗಳು ಹಾಗೂ ತಾಲೂಕು ಆಡಳಿತದ ನೌಕರರು ತೆರಳಲಿದ್ದಾರೆ. ಶಾಂತಿ ಮತ್ತು ಸುಗಮವಾಗಿ ಚುನಾವಣೆಯನ್ನು ನಡೆಸಲು 800 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಇಷ್ಟು ಜನ ಸಿಬ್ಬಂದಿಗೆ ಬೆಳಿಗ್ಗೆ ಪುದೀನಾ ಪಲಾವ್, ಚಟ್ನಿ, ಮಧ್ಯಾಹ್ನ ಮುದ್ದೆ, ನುಗ್ಗೆಕಾಯಿ ಸಾಂಬಾರ್, ಹಪ್ಪಳ, ಪಾಯಸ ಹಾಗೂ ತಂಪಾದ ಮಜ್ಜಿಗೆಯನ್ನು ನೀಡಲಾಗಿತ್ತು. ಚುನಾವಣಾ ನಿರತ ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತು ಭೋಜನ ಪಡೆದರು.

ಸಿಬ್ಬಂದಿಗೆ ಅಚ್ಚುಕಟ್ಟಾದ ಉಪಾಹಾರ ಹಾಗೂ ಹಾಗೂ ಊಟದ ವ್ಯವಸ್ಥೆಯನ್ನು ಚುನಾವಣಾ ಅಧಿಕಾರಿ ಮಂಜುನಾಥ್, ತಹಸೀಲ್ದಾರ್ ಮಮತಾ ಎಂ. ಹಾಗೂ ಆಹಾರ ನಿರೀಕ್ಷಕರು ಸೇರಿದಂತೆ ತಾಲೂಕು ಆಡಳಿತದ ಸಿಬ್ಬಂದಿ ಸಹಕಾರ ನೀಡಿದ್ದರು. ತೆರಳುವ ಸಿಬ್ಬಂದಿಗೆ ತಹಸೀಲ್ದಾರ್ ಮಮತಾ ಊಟೋಪಚಾರದ ವ್ಯವಸ್ಥೆಯನ್ನು ತಾವೇ ಖುದ್ದಾಗಿ ನಿಂತು ನಿಭಾಯಿಸಿ ಶುಭ ಕೋರಿದರು.

ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ 270 ಮತ ಕಟ್ಟ ಕೇಂದ್ರಗಳಿಗೆ ತೆರಳಲಿರುವ ಸಿಬ್ಬಂದಿ ಹಾಗೂ ಆರಕ್ಷಕರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.