ಕಾಂತರಾಜ್ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ: ಪ್ರೊ.ಎಚ್.ರಾಚಪ್ಪ ಕರೆ

| Published : Apr 28 2024, 01:15 AM IST

ಕಾಂತರಾಜ್ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ: ಪ್ರೊ.ಎಚ್.ರಾಚಪ್ಪ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿಂದು ಜನಜಾಗೃತಿ ವೇದಿಕೆ ಪದಾಧಿಕಾರಿಗಳು. ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸುವಂತೆ ಮನವಿ ಮಾಡಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಕಾಂತರಾಜ ಆಯೋಗದ ವರದಿ ವಿರೋಧಿಸುತ್ತಿರುವ ಶಾಮನೂರು ಕುಟುಂಬ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮತದಾರರು ಸೋಲಿಸಬೇಕು ಎಂದು ಹಿಂದುಳಿದ ಜನಜಾಗೃತಿ ವೇದಿಕೆ ಗೌರವಾಧ್ಯಕ್ಷ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ರಾಚಪ್ಪ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಕಾಂತರಾಜ ಆಯೋಗದ ವರದಿ, ಹಿಂದುಳಿದ ಜಾತಿ ವರ್ಗಗಳ ಅಭಿವೃದ್ಧಿಗೆ ದಾರಿದೀಪವಾಗಿದೆ. ಆದರೆ ಈ ವರದಿ ಜಾರಿಯಾಗದಂತೆ ಕೆಲವು ಬಲಾಢ್ಯ ಶಕ್ತಿಗಳು ಷಡ್ಯಂತ್ರ ನಡೆಸಿವೆ, ಮೇಲ್ವರ್ಗಗಳ ಕೆಲವು ಮಂತ್ರಿಗಳು, ಶಾಸಕರು ಹಾಗೂ ಕೆಲವು ಮಠಾಧೀಶರು ಹಾಗೂ ಒಕ್ಕಲಿಗರು ವರದಿ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅದರಲ್ಲಿ ಮುಂಚೂಣಿಯಲ್ಲಿರುವವರು ಶಾಸಕ ಶಾಮನೂರು ಶಿವಶಂಕರಪ್ಪ, ಈಗವರು ತಮ್ಮ ಸೊಸೆಗೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಟಿಕೆಟ್ ಕೊಡಿಸಿದ್ದಾರೆ. ಒಂದು ವೇಳೆ ಅವರು ಗೆದ್ದರೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಕಾರಣವಾಗಿರುವ ವರದಿ ಅನುಷ್ಠಾನಗೊಳಿಸುವಲ್ಲಿ ಬೆಂಬಲ ಕೊಡಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಹಿಂದುಳಿದ ವರ್ಗದ ಮತದಾರರು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿ ಅವರಿಂದ ಉತ್ತರ ಪಡೆಯಬೇಕು ಎಂದು ಮನವಿ ಮಾಡಿದರು.

ಶತಮಾನಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಹಿಂದುಳಿದ ಜಾತಿಗಳಿಗೆ ಯಾವುದೇ ಸವಲತ್ತುಗಳು ಸಿಗಬಾರದು ಎನ್ನುವುದು ಶಾಮನೂರು ಶಿವಶಂಕರಪ್ಪ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಉದ್ಧೇಶವಾಗಿದೆ ಎಂದು ಆರೋಪಿಸಸಿದರು. ಕಾಂತರಾಜ ವರದಿ ವಿರೋಧಿಸಿದವರಲ್ಲಿ ಕೆ.ಎಸ್.ಈಶ್ವರಪ್ಪ ಅವರೂ ಒಬ್ಬರು, ಅವರಿಗೂ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧಿಸುವಂತೆ ಕರೆ ನೀಡುವುದಾಗಿ ಹೇಳಿದರು.

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬೆಂಬಲಿಸಲು ಮನವಿ:

ಹಿಂದುಳಿದ ವರ್ಗಕ್ಕೆ ಸೇರಿದ ಜಿ.ಬಿ.ವಿನಯಕುಮಾರ್ ಐಎಎಸ್ ಇನ್ಸೈಟ್ಸ್ ನಂತಹ ಸಂಸ್ಥೆ ಸ್ಥಾಪಿಸಿ, ಬಡವರಿಗೆ, ಹಿಂದುಳಿದ ವರ್ಗದವರಿಗೆ ಸಹಾಯಹಸ್ತ ಚಾಚಿದ್ದಾರೆ. ದಾವಣಗೆರೆಯಲ್ಲಿ ಪ್ರಭುತ್ವ ವಿರೋಧಿಗಳು ಸ್ಪರ್ಧಿಸಿದ್ದು ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ನಮ್ಮ ನಿಜವಾದ ಹೋರಾಟ ಚುನಾವಣೆ ನಂತರದಲ್ಲಿ ಚಾಲ್ತಿಗೆ ಬರಲಿದೆ. ಈ ಹೋರಾಟ ಬಹಳ ಗಂಭೀರವಾಗಿ ನಡೆಯಲಿದೆ ಎಂದ ಅವರು, ಮೇಲ್ವರ್ಗದವರು ಶೇ.4.5ರಷ್ಟು ಇದ್ದರೂ, ಅವರು ಮೀಸಲಾತಿ ಕೇಳದಿದ್ದರೂ ಅವರಿಗೆ ಪ್ರಧಾನಿ ಮೋದಿಯವರು ಶೇ.10ರಷ್ಟು ಮೀಸಲಾತಿ ಕೊಟ್ಟರು, ಇದು ಸರಿಯೇ ಎಂದು ಪ್ರಶ್ನಿಸಿದ ಅವರು, ಯಾವ ಜಾತಿಯಾಗಲಿ ಅವರವರ ಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಬೇಕು ಆಗ ಮಾತ್ರ ಡಾ.ಅಂಬೇಡ್ಕರ್ ಅವರ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಆಶಯ ಈಡೇರಿದಂತಾಗುತ್ತದೆ ಎಂದು ಹೇಳಿದರು.

ತಮ್ಮ ವೇದಿಕೆ ಯಾವುದೇ ಜಾತಿ ಧರ್ಮ, ರಾಜಕೀಯ ಪಕ್ಷಗಳ ವಿರೋಧಿಗಳಲ್ಲ ಆದರೆ ಸಂವಿಧಾನ ಬದ್ಧವಾಗಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯ ದೊರೆಯುವಂತಾಗಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂಬುದೇ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ, ಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷರಾದ ಪ್ರೊ. ಜಿ. ಪರಮೇಶ್ವರಪ್ಪ, ಪ್ರೊ. ಉಮೇಶ್ಯಾಗದವ್, ಪ್ರೊ. ಪ್ರಭಾಕರ್, ಸಂಚಾಲಕ ಆರ್.ಟಿ. ನಾಗರಾಜ್, ಚನ್ನವೀರಪ್ಪ, ರಾಮಕೃಷ್ಣ ಉರಣಕರ್, ಜನಮೇಜಿರಾವ್ ಉಪಸ್ಥಿತರಿದ್ದರು.