ಸಿದ್ದಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

| Published : Apr 25 2024, 01:11 AM IST

ಸಾರಾಂಶ

ಸಮೀಪದ ಸಿದ್ದಾಪುರ ಗ್ರಾಮದ ಮತದಾರರು ಏ.26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಸಿರಿಗೆರೆ: ಸಮೀಪದ ಸಿದ್ದಾಪುರ ಗ್ರಾಮದ ಮತದಾರರು ಏ.26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 550 ಮತದಾರರು ಇದ್ದಾರೆ. ಗ್ರಾಮಸ್ಥರು ಮತದಾನ ಬಹಿಷ್ಕಾರ ಕಾರ್ಡ್‌ಗಳನ್ನು ಹಿಡಿದು, ಘೋಷಣೆ ಕೂಗಿ ಮತದಾನ ಬಹಿಷ್ಕರಿಸಿದ್ದಾರೆ.

ಗ್ರಾಮದ ಬಳಿ ಇರುವ ಮೆದಿಕೇರಿಪುರ ಗುಡ್ಡದಲ್ಲಿ ಹಲವು ಸಂಸ್ಥೆಗಳು ಗಣಿಗಾರಿಕೆಯನ್ನು ದಶಕಗಳಿಂದ ನಡೆಸುತ್ತಿವೆ. ಇದರಿಂದ ಗಣಿಗಾರಿಕೆ ವ್ಯಾಪ್ತಿಗೆ ಸೇರುವ ಹತ್ತಾರು ಹಳ್ಳಿಗಳು ಹಲವು ತೊಂದರೆಗಳಿಗೆ ಸಿಲುಕಿವೆ. ಕೆಲವು ವರ್ಷಗಳ ಹಿಂದೆ ಗಣಿಗಾರಿಕೆ ವ್ಯಾಪ್ತಿಯ ಹಳ್ಳಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಕೇವಲ 2 ಕಿಮೀ ದೂರ ಇರುವ ಗ್ರಾಮವನ್ನು ಕೈಬಿಡಲಾಗಿದೆ. ಪರಿಣಾಮವಾಗಿ ಗ್ರಾಮಕ್ಕೆ ಯಾವುದೇ ಗಣಿಗಾರಿಕೆ ಸಂಸ್ಥೆಗಳಿಂದ ಸೌಲಭ್ಯಗಳು ದೊರಕುತ್ತಿಲ್ಲ. ಗ್ರಾಮದ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಬೆಳೆಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಗ್ರಾಮದಿಂದ ದೂರವಿರುವ ಹಳ್ಳಿಗಳನ್ನು ಗಣಿಬಾಧಿತ ಪಟ್ಟಿಗೆ ಸೇರಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಣ್ಣೆದುರೇ ಡಿಎಂಎಫ್ ನಿಧಿ ಬಳಕೆ ತಾರತಮ್ಯ ಗೋಚರಿಸುತ್ತಿದೆ. ಇದನ್ನು ಬಗೆಹರಿಸಿ ಗ್ರಾಮವನ್ನೂ ಗಣಿಬಾಧಿತ ಪ್ರದೇಶದ ಪಟ್ಟಿಗೆ ಸೇರಿಸಬೇಕೆಂದು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಗ್ರಾಮಸ್ಥರ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ನಾಗರಿಕ ಸೌಲಭ್ಯವನ್ನು ಸಮಾನವಾಗಿ ಹಂಚಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿರುವುದರಿಂದ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಗ್ರಾಮಸ್ಥರೆಲ್ಲ ದೇವಾಲಯದ ಮುಂದೆ ಸಭೆ ಸೇರಿ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ. ಭರಮಗೌಡ, ಮೂಲಂಗಿ ನಾಗರಾಜ, ಎಸ್. ಚಿದಾನಂದ ಮುಂತಾದವರು ಭಾಗವಹಿಸಿದ್ದರು.

ಜಮ್ಮೇನಹಳ್ಳಿಯದೂ ಇದೇ ಕಥೆ: ಜಮ್ಮೇನಹಳ್ಳಿ ಗ್ರಾಮವನ್ನು ಗಣಿಗಾರಿಕೆ ವ್ಯಾಪ್ತಿಯ ಪಟ್ಟಿಗೆ ಸೇರಿಸಿದ್ದರೂ ವಸತಿ ನಿವೇಶನದಾರರಿಗೆ ಒಂದೇ ಒಂದು ಮನೆಯನ್ನೂ ನಿರ್ಮಿಸಲಾಗಿಲ್ಲ. ಗಣಿಗಾರಿಕೆ ನಿಧಿಯ ಸೌಲಭ್ಯಗಳ ಹಂಚಿಕೆಯ ತಾರತಮ್ಯ ಎದ್ದುಕಾಣುತ್ತಿದೆ ಎಂದು ಗ್ರಾಮದ ಸಿ.ಎಸ್. ತಿಪ್ಪೇಸ್ವಾಮಿ ದೂರಿದರು.