ಪ್ರತಿಭಾವಂತರಿಗೆ ಡಿಡಿಎನ್‌ಕೆ ಅಸೋಸಿಯೇಶನ್‌ ವೇದಿಕೆ

| Published : May 10 2024, 01:37 AM IST

ಪ್ರತಿಭಾವಂತರಿಗೆ ಡಿಡಿಎನ್‌ಕೆ ಅಸೋಸಿಯೇಶನ್‌ ವೇದಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡಿ ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುತ್ತದೆ ಎಂದು ಡಿ.ಡಿ.ಎನ್.ಕೆ ಅಸೋಸಿಯೇಶನ್ ಗೌರವ ಅಧ್ಯಕ್ಷ, ವಕೀಲ ಎಸ್.ಡಿ. ಚಿನಿವಾಲ ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಮುಧೋಳದ ಡಿ.ಡಿ.ಎನ್.ಕೆ ಅಸೋಸಿಯೇಶನ್‌ ಸಂಸ್ಥೆ ದುಡ್ಡು ಮಾಡುವ ಉದ್ದೇಶದಿಂದ ಪ್ರಾರಂಭವಾಗಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು, ಸಂಸ್ಥೆಯಲ್ಲಿ ಶಿಕ್ಷಣ ಮತ್ತು ತರಬೇತಿ ಪಡೆದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಅಲಂಕರಿಸಲಿ ಎಂಬುದು ಸಂಸ್ಥೆಯ ಮುಖ್ಯ ಉದ್ದೇಶ. ಇಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡಿ ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುತ್ತದೆ ಎಂದು ಡಿ.ಡಿ.ಎನ್.ಕೆ ಅಸೋಸಿಯೇಶನ್ ಗೌರವ ಅಧ್ಯಕ್ಷ, ವಕೀಲ ಎಸ್.ಡಿ. ಚಿನಿವಾಲ ಹೇಳಿದರು.

ಬುಧವಾರ ಸಂಜೆ ಡಿ.ಡಿ.ಎನ್.ಕೆ ಅಸೋಸಿಯೇಶನ್ ದಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯಲ್ಲಿ ಇಂಗ್ಲಿಷ್ ಗ್ರಾಮರ್ ಮತ್ತು ಸ್ಪೋಕನ್ ಇಂಗ್ಲಿಷ್ ಕಲಿಸಲಾಗುತ್ತಿದ್ದು, ಇಲ್ಲಿ ಕಲಿತಿರುವ ವಿದ್ಯಾರ್ಥಿನಿ ಶ್ರುತಿ ತೇಲಿ ಈಗ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾಳೆ. 2023-24ನೇ ಸಾಲಿಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಚಿನ ತಳವಾರ ಶೇ.90ರಷ್ಟು ಅಂಕಪಡೆದು ಉತ್ತೀರ್ಣರಾಗಿದ್ದಾರೆ. ಸಮಾರಂಭದಲ್ಲಿ ಇವರಿಬ್ಬರನ್ನು ಅಭಿನಂದಿಸಿ ಸನ್ಮಾನಿಸಲಾಯಿತು, ಇದೇ ರೀತಿ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ಹೇಳಿದರು.

ಸಿವ್ಹಿಲ್ ಜಡ್ಜ ಆಗಿ ಆಯ್ಕೆಯಾಗಿರುವ ಶ್ರುತಿ ತೇಲಿ ಸನ್ಮಾನ ಸ್ವಿಕರಿಸಿ ಮಾತನಾಡಿ. ನನ್ನ ಸಾಧನೆಗೆ ಡಿ.ಡಿ.ಎನ್.ಕೆ ಅಸೋಸಿಯೇಶನ್‌ ಕಾರ್ಯಾಧ್ಯಕ್ಷೆ ಪ್ರೊ.ನಿರ್ಮಲಾ ನಾವಲಗಿ ಅವರ ಮಾರ್ಗದರ್ಶನ, ಪ್ರೊತ್ಸಾಹ ಮತ್ತು ಬೆಂಬಲ, ಪ್ರೇರಣೆ ಆಗಿದೆ, ಈ ಸಂಸ್ಥೆಯಿಂದ ನಾನು ನಿರರ್ಗಳವಾಗಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುವ, ಬರೆಯುವ ಕೌಶಲ್ಯ ಕಲಿತಿರುವುದಾಗಿ ಹೇಳಿದರು. ಈ ಸಂಸ್ಥೆಯ ವಿದ್ಯಾರ್ಥಿಗಳು ನನ್ನ ಹಾಗೆ ಸಾಧನೆ ಮಾಡಿ ಮುಂದೆ ಬರಲಿ ಎಂದರು.

ಡಿ.ಡಿ.ಎನ್.ಕೆ ಅಸೋಸಿಯೇಶನ್ ಕಾರ್ಯಾಧ್ಯಕ್ಷೆ ಪ್ರೊ.ನಿರ್ಮಲಾ (ಹೇಮಾ) ನಾವಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ದುಡ್ಡು ಮಾಡಬೇಕೆಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಿಲ್ಲ, ಗ್ರಾಮೀಣ ಭಾಗದ ಕಡುಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು, ಅದರಲ್ಲೂ ನಗರ ಭಾಗದ ಮಕ್ಕಳಂತೆ ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಮತ್ತು ಬರೆಯುವ ಕೌಶಲ್ಯ ಕಲಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದುವೇ ನಮ್ಮ ಸಂಸ್ಥೆಗೆ ಕೊಟ್ಟಂತಹ ಕೊಡುಗೆ ಎಂದರು.

ಶ್ರೀದೇವಿ ಅಂಗಡಿ ಪ್ರಾರ್ಥಿಸಿದರು. ಪ್ರೊ.ನಿರ್ಮಲಾ ಸ್ವಾಗತಿಸಿ, ನಿರೂಪಿಸಿದರು. ವಿಜಯಲಕ್ಷ್ಮೀ ಗಂಗರಡ್ಡಿ ವಂದಿಸಿದರು. ಡಿ.ಡಿ.ಎನ್.ಕೆ ಅಸೋಸಿಯನ್ ಪದಾಧಿಕಾರಿಗಳು, ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.