ದ.ಕ.: ಸುಡುಬಿಸಿಲಿನ ನಡುವೆ ಬಿರುಸಿನ ಮತದಾನ

| Published : Apr 27 2024, 01:16 AM IST

ಸಾರಾಂಶ

ದ.ಕ.ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು. ಮತದಾನ ಆರಂಭದ ಅರ್ಧ ತಾಸು ಮೊದಲೇ ಬಹುತೇಕ ಗ್ರಾಮೀಣ ಭಾಗದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿರುಬೇಸಗೆ ನಡುವೆಯೂ ಶುಕ್ರವಾರ ಬಿರುಸಿನ ಮತದಾನ ನಡೆದಿದೆ. ಮಂಗಳೂರು ಹಾಗೂ ಪುತ್ತೂರಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಚಕಮಕಿ ಘಟನೆ ಹೊರತುಪಡಿಸಿದರೆ ಇಡೀ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗಿನಿಂದಲೇ ಬಿರುಸುಗೊಂಡ ಮತದಾನ:

ದ.ಕ.ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು. ಮತದಾನ ಆರಂಭದ ಅರ್ಧ ತಾಸು ಮೊದಲೇ ಬಹುತೇಕ ಗ್ರಾಮೀಣ ಭಾಗದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರು. 7 ಗಂಟೆಗೆ ಮತದಾನ ಆರಂಭವಾದಂತೆಯೇ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುತ್ತಿದ್ದರು. 11 ಗಂಟೆ ಬಳಿಕ 3 ಗಂಟೆ ವರೆಗೆ ಮತದಾನ ಮಂದಗತಿಯಲ್ಲಿ ನಡೆಯಿತು. ಬಳಿಕ ಮತ್ತೆ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದುದು ಕಂಡುಬಂತು.

ಮುನ್ನಡೆ ಕಾಯ್ದುಕೊಂಡ ದ.ಕ.:

ಮತದಾನದಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲೇ ಸಂಜೆ 3 ಗಂಟೆ ವರೆಗೆ ಗರಿಷ್ಠ ಮುನ್ನಡೆ ಕಾಯ್ದುಕೊಂಡಿತ್ತು. ಬೆಳಗ್ಗೆ 9 ಗಂಟೆಗೆ ಶೇ.14.33 ಮತದಾನವಾಗಿದ್ದರೆ, 11 ಗಂಟೆಗೆ ಶೇ. 30.96, ಮಧ್ಯಾಹ್ನ 1 ಗಂಟೆಗೆ ಶೇ. 48.1, ಸಂಜೆ 3 ಗಂಟೆಗೆ ಶೇ. 58.65 ಹಾಗೂ ಸಂಜೆ 5 ಗಂಟೆಗೆ ಶೇ.71.83 ಮತದಾನ ದಾಖಲಾಗಿದೆ. ಬೆಳ್ತಂಗಡಿಯಲ್ಲಿ ಶೇ.75.59, ಮೂಡುಬಿದಿರೆ ಶೇ. 68.62, ಮಂಗಳೂರು ಉತ್ತರ ಶೇ.69.75, ಮಂಗಳೂರು ದಕ್ಷಿಣ ಶೇ.61.81, ಮಂಗಳೂರು ಶೇ.73.45, ಬಂಟ್ವಾಳ ಶೇ.73.69, ಪುತ್ತೂರು ಶೇ.75.2, ಸುಳ್ಯ ಶೇ.78.35 ಮತದಾನ ದಾಖಲಾಗಿದೆ.