ಸುಳ್ಳಿನ ಬಿಜೆಪಿಗೆ ನಿದ್ದೆಗೆಡಿಸಿದ ಕಾಂಗ್ರೆಸ್‌ ಗ್ಯಾರಂಟಿಗಳು: ಸಂಯುಕ್ತಾ ಪಾಟೀಲ

| Published : Apr 27 2024, 01:20 AM IST

ಸುಳ್ಳಿನ ಬಿಜೆಪಿಗೆ ನಿದ್ದೆಗೆಡಿಸಿದ ಕಾಂಗ್ರೆಸ್‌ ಗ್ಯಾರಂಟಿಗಳು: ಸಂಯುಕ್ತಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ಹೇಳಿ ನಂಬಿಸಿ ಮತಪಡೆದು ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿಗೆ ಕಾಂಗ್ರೆಸ್ಸಿನ ಗ್ಯಾರಂಟಿ ನಿದ್ದೆಗೆಡಿಸಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೆರೂರ

ಸುಳ್ಳು ಹೇಳಿ ನಂಬಿಸಿ ಮತಪಡೆದು ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿಗೆ ಕಾಂಗ್ರೆಸ್ಸಿನ ಗ್ಯಾರಂಟಿ ನಿದ್ದೆಗೆಡಿಸಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು. ಗುರುವಾರ ಮುಷ್ಠಿಗೇರಿ ಜಿಪಂ ವ್ಯಾಪ್ತಿಯ ಮಮಟಗೇರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದರು. ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆ ಮಾಡಿದ್ದರು. ಈಗ ಚಿತ್ರನಟಿ ಶ್ರುತಿ ಇದೇ ರೀತಿ ಮಾತನಾಡಿದ್ದಾರೆ. ಒಬ್ಬ ಮಹಿಳೆಯಾಗಿ ಸ್ತ್ರೀ ಸಮೂಹ ಅಪಮಾನ ಮಾಡುವುದು ನಾಚಿಕೆಗೇಡು. ಯಾರಾದರೂ ಮಹಿಳೆ ದಾರಿ ತಪ್ಪಿದ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು.

ಲಕ್ಷ ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಬಿಜೆಪಿ ನಾಯಕರು ಸೋಲಿನ ಹತಾಸೆಯಿಂದ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಆಸರೆಯಾಗಿವೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ರೈತರ ಆದಾಯ ದ್ವಿಗುಣವಾಗಲಿಲ್ಲ. ಭರವಸೆಯಂತೆ ಖಾತೆಗೆ ₹ 15 ಲಕ್ಷ ಹಾಕಲಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ದ್ವಿಗುಣವಾಗಿ ನಾಗರಿಕರು ಪರದಾಡುವಂತಾಗಿದೆ. ಸತತ ಎರಡು ಬಾರಿ ಬರಗಾಲಕ್ಕೆ ತುತ್ತಾದ ರಾಜ್ಯದ ರೈತರಿಗೆ ಪರಿಹಾರ ಕೊಡಬೇಕೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಳಿದಾಗ ಮೋದಿ ಸರ್ಕಾರ ಕ್ಯಾರೇ ಎನ್ನಲಿಲ್ಲ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಂಯುಕ್ತಾ ಪಾಟೀಲ ವಕೀಲರಾಗಿದ್ದು, ಅಪಾರ ಜ್ಞಾನ ಹೊಂದಿದ ದಿಟ್ಟ ಹೋರಾಟಗಾರ್ತಿಯಾಗಿದ್ದಾರೆ. ಅವರನ್ನು ಗೆಲ್ಲಿಸಬೇಕೆಂದು ಕಾಂಗ್ರೆಸ್ ಪಕ್ಷ ನನ್ನ ಉಡಿಗೆ ಹಾಕಿದೆ. ನಾನು ನಿಮ್ಮ ಉಡಿಯಲ್ಲಿ ಹಾಕುತ್ತೇನೆ. ಅವರ ಗೆಲುವು ನಿಮ್ಮ ಗುರಿಯಾಗಿರಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ ಧುರೀಣ ಗಿರೀಶ ಅಂಕಲಗಿ ಮಾತನಾಡಿದರು. ಶರಣಪ್ಪ ಕಲಬಾಶೆಟ್ಟಿ, ಈರಣಗೌಡ ಕರಿಗೌಡ್ರ ಮಾತನಾಡಿದರು. ವೇದಿಕೆ ಮೇಲೆ ಕೆರೂರಿನ ಪಪಂ ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ, ಮಹಾಂತೇಶ ಹಟ್ಟಿ, ಶಿವು ಕೋನೇರಿ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಡೊಳ್ಳಿನ, ಶಕುಂತಲಾ ಹರಣಶಿಕಾರಿ, ಭೀರಪ್ಪ ಪೆಂಟಿ, ಉಸ್ಮಾನ ಅತ್ತಾರ, ಬಸಪ್ಪ ಹೊಸಮನಿ, ನಿಂಗಪ್ಪ ಕುರಿ, ಅಯ್ಯಪ್ಪ ರಡ್ಡೇರ, ಯಲ್ಲಪ್ಪ ಘಟ್ನೂರ, ವಿಠ್ಠಲ ದ್ಯಾವನಗೌಡ್ರ, ಹನುಮಂತ ನರಗುಂದ, ಲೆಂಕೆಪ್ಪ ಬಿಲ್ಲಾರ ಸೇರಿದಂತೆ ಹಲವಾರು ನಾಯಕರಿದ್ದರು. ಮಮಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಡೊಳ್ಳಿನ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.