ಫುಟ್‌ಪಾತ್, ಚರಂಡಿಗಳ ಒತ್ತುವರಿ ತೆರವು

| Published : May 09 2024, 01:06 AM IST

ಸಾರಾಂಶ

ಪಟ್ಟಣದ ಪ್ರಮುಖ ವ್ಯಾಪಾರ ರಸ್ತೆಗಳಾದ ಬಜಾರ್ ರಸ್ತೆ, ಬಾಲಚಂದ್ರ ಚಿತ್ರಮಂದಿರ ರಸ್ತೆ ಹಾಗೂ ಮಾಧಯ್ಯ ರಸ್ತೆ ತುಂಬಾ ಕಿರಿದಾಗಿದ್ದು ವಾಹನಗಳ ಸಂಚರಿಸಲು ನಿತ್ಯ ಪರದಾಡಬೇಕು, ಇನ್ನು ಸಾರ್ವಜನಿಕರ ಓಡಾಟಕ್ಕೆ ಹರಸಾಹಸ ಮಾಡಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಫುಟ್‌ಪಾತ್ ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದ ಅಂಗಡಿಗಳ, ಮನೆ ಮಾಲೀಕರಿಗೆ ಮತ್ತು ವ್ಯಾಪಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ ನೇತೃತ್ವದಲ್ಲಿ ಬುಧವಾರ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಶಾಕ್ ನೀಡಿದೆ.

ಪಟ್ಟಣದಲ್ಲಿ ಸಾರ್ವಜನಿಕರ ಸಂಚಾರಕ್ಕಾಗಿ ಮೀಸಲಿಟ್ಟಿದ್ದ ಪಾದಚಾರಿ ಜಾಗವನ್ನು ಕೆಲವು ಪ್ರಭಾವಿಗಳು ಹಾಗೂ ವ್ಯಾಪಾರಿಗಳು ಆಕ್ರಮಿಸಿಕೊಂಡು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ರಾಜಾರೋಷವಾಗಿ ನಡೆಸುತ್ತಿದ್ದರು,

ರಸ್ತೆಗೆ ಹರಿಯುವ ಕೊಳಚೆ

ಅದೇ ರೀತಿ ಚರಂಡಿಗಳನ್ನೂ ಬಿಡದೆ ಆಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ಕೊಳಚೆ ನೀರು ಹಾಗೂ ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯಲು ಅಡ್ಡಿಪಡಿಸಿದ್ದರು. ಇದರಿಂದ ಚರಂಡಿಯ ಕೊಳಚೆ ನೀರು ರಸ್ತೆಗಳ ಮೇಲೆ ಹರಿದು ಸಾರ್ವಜನಿಕರಿಗೆ ಓಡಾಡಲು ಮುಜುಗರಪಡುವಂತಾಗಿದ್ದರೂ ಪುರಸಭೆ ಆಡಳಿತ ಮಾತ್ರ ತೆರವು ಕಾರ್ಯಾಚರಣೆಗೆ ಮುಂದಾಗಿರಲಿಲ್ಲ.ಪಟ್ಟಣದ ಪ್ರಮುಖ ವ್ಯಾಪಾರ ರಸ್ತೆಗಳಾದ ಬಜಾರ್ ರಸ್ತೆ, ಬಾಲಚಂದ್ರ ಚಿತ್ರಮಂದಿರ ರಸ್ತೆ ಹಾಗೂ ಮಾಧಯ್ಯ ರಸ್ತೆ ತುಂಬಾ ಕಿರಿದಾಗಿದ್ದು ವಾಹನಗಳ ಸಂಚರಿಸಲು ನಿತ್ಯ ಪರದಾಡಬೇಕು, ಇನ್ನು ಸಾರ್ವಜನಿಕರ ಓಡಾಟಕ್ಕೆ ಹರಸಾಹಸ ಮಾಡಬೇಕು.ಸಾಮಾನ್ಯ ದಿನಗಳಲ್ಲೆ ಹೀಗಾದರೆ ಇನ್ನು ಹಬ್ಬ ಹರಿದಿನಗಳಲ್ಲಿ ಹೇಳ ತೀರದು.ಫುಟ್‌ಪಾತ್‌, ಚರಂಡಿ ಒತ್ತುವರಿ

ಈ ಮೂರು ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು ಒಂದೆಡೆಯಾದರೆ, ವ್ಯಾಪಾರಿಗಳು ಫುಟ್‌ಪಾತ್ ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಮತ್ತಷ್ಟು ಕಿರಿಕಿರಿ ಮಾಡುತ್ತಿದ್ದರು. ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಒತ್ತಡ ಬಂದಾಗ ಹೆಸರಿಗೆಂಬಂತೆ ಫುಟ್‌ಪಾತ್ ಒತ್ತುವರಿ ವ್ಯಾಪಾರಿಗಳಿಗೆ ಹಾಗೂ ಚರಂಡಿ ಆಕ್ರಮಿತ ಮಾಲೀಕರಿಗೆ ತೆರವಿಗೆ ಸೂಚಿಸಿ ಗಡಿ ರೇಖೆ ಹಾಕಿದ್ದರೂ ಗಂಭೀರವಾಗಿ ತೆರವುಗೊಳಿಸುವ ಗೋಜಿಗೆ ಯಾರೂ ಕೈಹಾಕಿರಲಿಲ್ಲ.

ರಾಜಕೀಯ ಒತ್ತಡಕ್ಕೆ ಸಿಲುಕಿ ಅಧಿಕಾರಿಗಳು ಮೌನಕ್ಕೆ ಜಾರಿದ್ದರು. ಆದರೆ ಕಳೆದ ಎರಡು ಮೂರು ದಿನಗಳಿಂದ ಪಟ್ಟಣದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಹಾಗೂ ಫುಟ್‌ಪಾತ್ ಮತ್ತು ಚರಂಡಿಗಳ ಒತ್ತುವರಿಯಿಂದ ನಾಗರಿಕರು ಸಂಕಟ ಅನುಭವಿಸುವಂತಾಗಿತ್ತು.

ಒತ್ತುವರಿ ತೆರವು ಕಾರ್ಯಾಚರಣೆ

ಇದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಎಂ. ಮೀನಾಕ್ಷಿ ಬುಧವಾರ ಪೊಲೀಸರ ಬೆಂಗಾವಲಿನಲ್ಲಿ ರಸ್ತೆಗಿಳಿದು ಎಲ್ಲೆಲ್ಲಿ ಫುಟ್‌ಪಾತ್ ಹಾಗೂ ಚರಂಡಿಗಳ ಒತ್ತುವರಿಯಾಗಿದೆಯೋ ಅಲ್ಲಿ ತೆರವುಗೊಳಿಸುವ ಕಾರ‍್ಯಕೈಗೊಂಡರು. ಇದರಿಂದ ಹಲವು ಅಡೆತಡೆಗಳನ್ನು ಎದುರಿಸಿದರೂ ತೆರವು ಕಾರ‍್ಯಾಚರಣೆ ಕೈಗೊಂಡರು. ಇನ್ನು ಕೆಲವರಿಗೆ ಒತ್ತುವರಿ ತೆರವು ಮಾಡಲು ಕಾಲಾವಕಾಶ ನೀಡಿದರು.