ಕನಿಷ್ಠ 25 ಕ್ಷೇತ್ರದಲ್ಲಿ ನಿಶ್ಚಿತ ಜಯ: ಯಡಿಯೂರಪ್ಪ

| Published : May 08 2024, 01:02 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನ ತಾಲೂಕಿನಾದ್ಯಂತ ಬಹುತೇಕ ಶಾಂತಿಯುತವಾಗಿದ್ದು,ಕೆಲವೆಡೆ ಮತಯಂತ್ರದ ದೋಷದಿಂದ ಕೆಲ ಕಾಲ ತಡವಾಗಿ ಆರಂಭವಾದ ಘಟನೆ ನಡೆದಿದೆ.

ಮಂಗಳವಾರ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನ ಪ್ರಕ್ರಿಯೆ ಶಿಕಾರಿಪುರ ತಾಲೂಕಿನಲ್ಲಿ ಶಾಂತಿಯುತವಾಗಿ ನಡೆದಿದ್ದು, ಬೆಳಿಗ್ಗೆ ಮತಗಟ್ಟೆಯಲ್ಲಿ ಮತದಾರರ ಸರತಿ ಸಾಲು ಕಂಡು ಬಂದಿತು ಮಧ್ಯಾಹ್ನದ ವೇಳೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಮತದಾರರ ಸಾಲು ಕ್ಷೀಣವಾಗಿತ್ತು. ಬಹುತೇಕ ಕಡೆಗಳಲ್ಲಿ ಮತದಾರರನ್ನು ಬಿಜೆಪಿ ಕಾಂಗ್ರೆಸ್ ಸಹಿತ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕರೆದುಕೊಂಡು ಬಂದು ಮತ ಚಲಾವಣೆಗೆ ಪ್ರೋತ್ಸಾಹಿಸುತ್ತಿದ್ದ ದೃಷ್ಯ ಕಂಡು ಬರುತ್ತಿತ್ತು ಹೊಸ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿನ ಆಡಳಿತ ಸೌಧದಲ್ಲಿನ ಬೂತ್ ಸಂಖ್ಯೆ 137ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಹಾಗೂ ಅಭ್ಯರ್ಥಿ ಬಿ.ವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಮ್ಮ ಕುಟುಂಬಸ್ಥರ ಜತೆಗೂಡಿ ಮತ ಚಲಾಯಿಸಿದರು.

ಬೆಳಿಗ್ಗೆ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ನಂತರದಲ್ಲಿ ಸಮೀಪದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಬೃಂದಾವನದ ದರ್ಶನ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.ನಂತರದಲ್ಲಿ ನೇರವಾಗಿ 7 ರ ವೇಳೆಯಲ್ಲಿ ಮತಗಟ್ಟೆಗೆ ಆಗಮಿಸಿದ ಅವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತದಾನದ ನಂತರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ರಾಜ್ಯಾದ್ಯಂತ ಬಿಜೆಪಿ ಪರವಾದ ಅಲೆಯಿದ್ದು ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ 14 ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯಸಾಧಿಸಲಿದ್ದಾರೆ ಇದೀಗ ನಡೆಯುತ್ತಿರುವ 2 ನೇ ಹಂತದಲ್ಲಿ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರ ಹೊರತು ಪಡಿಸಿ ಎಲ್ಲ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಜಯಸಾಧಿಸಲಿದ್ದಾರೆ ರಾಜ್ಯದಲ್ಲಿ ಪಕ್ಷ ಈ ಬಾರಿ ಕನಿಷ್ಠ 25 ಕ್ಷೇತ್ರದಲ್ಲಿ ನಿಶ್ಚಿತವಾಗಿ ಜಯಸಾಧಿಸಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ 2.5 ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸುವುದು ನಿಶ್ಚಿತ ಎಂದು ತಿಳಿಸಿದರು.

ಸಂಸದ ರಾಘವೇಂದ್ರ ಮಾತನಾಡಿ, ಕಳೆದ 3 ತಿಂಗಳಿಂದ ಕಾರ್ಯಕರ್ತರ ಪಡೆ ನನ್ನ ಗೆಲುವಿಗಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ ಈ ರೀತಿಯ ಕಾರ್ಯಕರ್ತರು ಬಿಜೆಪಿ ಹೊರತು ಪಡಿಸಿ ಬೇರೆ ಪಕ್ಷದಲ್ಲಿ ಕಾಣಲು ಸಾದ್ಯವಿಲ್ಲ ಎಲ್ಲರ ಹಾರೈಕೆಯಿಂದ ಈ ಬಾರಿ ಅತಿ ಹೆಚ್ಚಿನ ಅಂತರದಲ್ಲಿ ಗೆಲವು ಸಾಧಿಸುವುದು ಶತಸಿದ್ದ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ತೇಜಸ್ವಿನಿ ರಾಘವೇಂದ್ರ, ಪ್ರೇಮಾ ವಿಜಯೇಂದ್ರ, ಸುಬಾಷ್, ಭಗತ್ ಮುಖಂಡ ಗುರುಮೂರ್ತಿ, ಚನ್ನವೀರಪ್ಪ,ಮೋಹನ್ ಮತ್ತಿತರರು ಹಾಜರಿದ್ದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಯಂತ್ರದಲ್ಲಿನ ದೋಷದಿಂದಾಗಿ ಕೆಲಕಾಲ ತಡವಾಗಿ ಮತದಾನ ಆರಂಭವಾಯಿತು.ಹಿತ್ತಲ ಗ್ರಾಮದಲ್ಲಿ ಸಹೋದರಿಯನ್ನು ಬೈಕ್ ನಲ್ಲಿ ಕುಳ್ಳರಿಸಿಕೊಂಡು ಮತಗಟ್ಟೆಗೆ ತೆರಳುತ್ತಿದ್ದ ಭದ್ರಾವತಿ ಮೂಲದ ಮಂಜುನಾಥ [32] ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.3 ಲಕ್ಷ ಮತಗಳ ಅಂತರದ ಗೆಲುವು

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಮಾತನಾಡಿ, ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದು, ತ್ರಿಕೋನ ಸ್ಪರ್ಧೆಯ ಪ್ರಶ್ನೆ ಉದ್ಭವಿಸುವುದಿಲ್ಲ ಮತದಾರರು ದಡ್ಡರಲ್ಲ, ಯೋಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ರಾಘಣ್ಣ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ. ಜೂನ್ 4ರಂದು ಫಲಿತಾಂಶ ಪ್ರಕಟಗೊಂಡ ನಂತರದಲ್ಲಿ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌ ಗೆ ಅಚ್ಚರಿ ಕಾದಿದೆ ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳು ಯಾವುದೇ ಪರಿಣಾಮ ಬೀರಿಲ್ಲ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಪೆನ್ ಡ್ರೈವ್ ಪ್ರಕರಣಕ್ಕೆ ಹೆಚ್ಚಿನ ಗಮನಹರಿಸಿದೆ, ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ವ್ಯಕ್ತಿಗಳ ಕೈವಾಡವಿದ್ದು, ಸಿಬಿಐ ತನಿಖೆಗೆ ವಹಿಸಿದಲ್ಲಿ ಪ್ರಕರಣದ ಬಗ್ಗೆ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.

ಎರಡೂವರೆ ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು: ಬಿಎಸ್‌ವೈ ಭವಿಷ್ಯ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಕಾರಿಪುರದ ಮತಕಟ್ಟೆಯಲ್ಲಿ ಕುಟುಂಬದವರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲಿಯೂ ಬಿಜೆಪಿ ಪರವಾದ ವಾತಾವರಣ ಇದೆ. ಅದೇ ರೀತಿ ಶಿವಮೊಗ್ಗದಲ್ಲಿ ನಮ್ಮ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.ರಾಜ್ಯದ ಮೊದಲ ಹಂತದ ಚುನಾವಣೆ ನಡೆದ ಎಲ್ಲ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಎರಡನೇ ಹಂತದಲ್ಲಿ ಇಂದು ನಡೆದ ಹದಿನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ರಾಜ್ಯದಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೇಶಕ್ಕೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಅಭಿಲಾಷೆ ದೇಶವಾಸಿಗಳಲ್ಲಿದೆ. ಅದೇ ರೀತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎಂದು ಮೋದಿ ಬಯಸಿದ್ದಾರೆ. ಅದು ನಿಜವಾಗಲಿದೆ ಎಂದು ಹೇಳಿದರು.