ಮರಳಿ ಗೂಡು ಸೇರಿ ವಿಶ್ರಾಂತಿಗೆ ಜಾರಿದ ಅಭ್ಯರ್ಥಿಗಳು

| Published : Apr 28 2024, 01:23 AM IST

ಮರಳಿ ಗೂಡು ಸೇರಿ ವಿಶ್ರಾಂತಿಗೆ ಜಾರಿದ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಗೂಡು ಸೇರಿದ್ದಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಗೂಡು ಸೇರಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೂ ಕ್ಷೇತ್ರಾದ್ಯಂತ ನಿತ್ಯ ಪ್ರತ್ಯಕ್ಷಗೊಳ್ಳುತ್ತಿದ್ದ ರಾಜಕೀಯ ಮುಖಂಡರು, ಕಾರ್ಯಕರ್ತರು ಇದೀಗ ಫುಲ್ ರೆಸ್ಟ್ ಮೂಡ್‌ನಲ್ಲಿದ್ದಾರೆ. ಆದರೆ, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಬೆಂಗಳೂರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕನಕಪುರದಲ್ಲಿ ಉಳಿದುಕೊಂಡಿದ್ದಾರೆ. ಕಣದಲ್ಲಿದ್ದ ಉಳಿದ ಅಭ್ಯರ್ಥಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

ಚುನಾವಣೆಯಲ್ಲಿ ಪರಸ್ಪರ ವಾಗ್ದಾಳಿಗಳಿಂದಲೇ ಸಾಕಷ್ಟು ಕೂತುಹಲ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಖಾಡ ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿತ್ತು. ಹೀಗಾಗಿ ಸಾಕಷ್ಟು ಉತ್ಸಾಹದಲ್ಲಿ ದುಡಿದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಇದೀಗ ಎಲ್ಲಿದ್ದಾರೆ? ಎಂಬ ಹುಡುಕಾಟ ಕ್ಷೇತ್ರಾದ್ಯಂತ ನಡೆಯುತ್ತಿದೆ. ನಿತ್ಯ ಮತದಾರರ ಮುಂದೆ ಮೈಕ್ ಹಿಡಿದು, ಕೈ ಮುಗಿದು ನಿಲ್ಲುತ್ತಿದ್ದ ನಾಯಕರು ಸಹ ಎಲ್ಲಿದ್ದಾರೆ ಎಂಬ ಯಕ್ಷ ಪ್ರಶ್ನೆ ಮತದಾರರನ್ನು ಕಾಡುತ್ತಿರುವುದು ಮಾತ್ರವಲ್ಲ, ಮತ್ತೊಮ್ಮೆ ನಮ್ಮೂರಿಗೆ ನಾಯಕರು ಬರುವುದಕ್ಕೆ ಮತ್ತೊಂದು ಚುನಾವಣೆಯೇ ಬರಬೇಕು ಎಂಬ ವ್ಯಂಗ್ಯವೂ ಸಹ ಕೇಳಿ ಬರುತ್ತಿದೆ.

ಮನೆ ಬಿಟ್ಟು ಹೊರಬಾರದ ಮುಖಂಡರು!

ಇನ್ನು ಪ್ರಚಾರದ ಸಮಯದಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೇ ಕಣದಲ್ಲಿದ್ದ ಕಾರ್ಯಕರ್ತರು ಇದೀಗ ಮನೆಯಿಂದ ಹೊರಬರುವುದಿರಲಿ, ಯಾವೊಂದು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಿತ್ಯ ಪ್ರಚಾರ ಕಣದಲ್ಲಿ ದುಡಿಯುತ್ತಿದ್ದವರು ಇದೀಗ ವಿಶ್ರಾಂತಿ ಕೇಳುತ್ತಿದ್ದಾರೆ. ಗ್ರಾಮಗಳಲ್ಲಿ ಅರಳೀಕಟ್ಟೆ ರಾಜಕೀಯ ಮಾಡುತ್ತಿದ್ದವರು ಇದೀಗ ಸಾಕಪ್ಪ ಸಾಕು ರಾಜಕೀಯ ಎನ್ನುತ್ತಿದ್ದಾರೆ.

ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯ ಕರ್ತರು ಒಟ್ಟಿಗೆ ಈ ಚುನಾವಣೆಯಲ್ಲಿ ಶ್ರಮಿಸಿದ್ದರು. ಕಾಂಗ್ರೆಸ್ ಮಾತ್ರವೇ ನೇರ ಹಣಾಹಣಿ ನಡೆಸಿತ್ತು. ಹೀಗಾಗಿ ಎಲ್ಲ ಕಾರ್ಯಕರ್ತರು, ಮುಖಂಡರು ಶನಿವಾರ ಬೆಳಗ್ಗೆ 11 ಗಂಟೆವರೆಗೂ ನಿದ್ರೆಗೆ ಜಾರಿದ್ದರು. ಒಟ್ಟಿನಲ್ಲಿ ಶಾಂತಿಯುತವಾಗಿ ಮತದಾನ ಸಂಪೂರ್ಣಗೊಂಡ ಬಳಿಕ ಇಡೀ ಜಿಲ್ಲೆಯೇ ರಾಜಕೀಯ ಗುಂಗಿನಿಂದ ಹೊರಬಂದು ಸ್ತಬ್ಧಗೊಂಡಿದೆ.

ಬಾಕ್ಸ್‌.........

ಚುನಾವಣೆ ಅಬ್ಬರಕ್ಕೆ ಮತದಾರನ ತೆರೆ

ಕಳೆದ 1 ತಿಂಗಳಿನಿಂದ ಸದಾ ಕೇಳುತ್ತಿದ್ದ ಚುನಾವಣೆ ಪದ ಇದೀಗ ಏಕಾಎಕೀ ಇಳಿಕೆಯಾಗಿದೆ. ಈಗೇನಿದ್ದರೂ, ಯಾರು-ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬುದೊಂದೆ ಚರ್ಚೆಯಲ್ಲಿದೆ. ಮನೆ ಬಿಟ್ಟು ಹೊರ ಬಾರದ ಅಭ್ಯರ್ಥಿಗಳು - ಮುಖಂಡರು ಮತದಾನದ ಶೇಕಡವಾರು ಲೆಕ್ಕಹಾಕಿಕೊಂಡು, ಯಾವ ಕ್ಷೇತ್ರಗಳಲ್ಲಿ ಎಷ್ಟು ಮತಗಳನ್ನು ಪಡೆಯಲಾಗಿದೆ ಎಂಬ ಮತಗಳ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಆದರೆ, ರಾಜಕೀಯದಷ್ಟು ಅಬ್ಬರ ಇರದ ಹಿನ್ನೆಲೆಯಲ್ಲಿ ಎಲ್ಲವು ಧ್ವನಿ ಕಳೆದುಕೊಂಡಿದೆ.

ಚುನಾವಣೆಗೆ ಒಂದು ದಿನದ ಮುನ್ನ ಹಾಗೂ ಮತದಾನ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ಮಳೆರಾಯನ ಸಿಂಚನವಾಗಿರುವ ಹಿನ್ನೆಲೆಯಲ್ಲಿ ಈ ವರೆಗೂ ರಾಜಕೀಯ ಚರ್ಚೆಯಲ್ಲಿದ್ದ ಅನ್ನದಾತರು ಇದೀಗ ಭೂಮಿಯ ಉಳುಮೆ, ಮಾವಿನ ಸುಗ್ಗಿಯಲ್ಲಿ ಮುಳುಗಿದ್ದಾರೆ.

27ಕೆಆರ್ ಎಂಎನ್ 1,2.ಜೆಪಿಜಿ

1.ಡಾ.ಸಿ.ಎನ್ .ಮಂಜುನಾಥ್

2.ಡಿ.ಕೆ.ಸುರೇಶ್