ಹಕ್ಕು ಚಲಾಯಿಸಿದ ಅಭ್ಯರ್ಥಿಗಳು, ಸಚಿವರು, ಶಾಸಕರು

| Published : May 08 2024, 01:09 AM IST

ಸಾರಾಂಶ

ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಪತ್ನಿ ಶೀಲಾ ಖೂಬಾ, ಪುತ್ರ ಅಶುತೋಷ ಖೂಬಾ, ಸಹೋದರ ಅಶೋಕ ಖೂಬಾ ಸೇರಿದಂತೆ ಮತ್ತಿತರೊಂದಿಗೆ ಔರಾದ್ ಪಟ್ಟಣದ ಮತಗಟ್ಟೆ ಸಂಖ್ಯೆ 84ಕ್ಕೆ ಆಗಮಿಸಿ ಮತ ಚಲಾಯಿಸಿದರು. ಔರಾದ್ ಶಾಸಕ ಪ್ರಭು ಚವ್ಹಾಣ್‌ ಸ್ವಗ್ರಾಮ ಬೋಂತಿ ಗ್ರಾಮದ ಮತಗಟ್ಟೆ ಸಂಖ್ಯೆ 31ಕ್ಕೆ ಆಗಮಿಸಿ ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಲ್ಲದೆ ಜಿಲ್ಲೆಯ ಘಟಾನುಘಟಿಗಳು ಬೆಳ್ಳಂಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ತಮ್ಮ ತಂದೆ ಶತಾಯುಷಿ ಭೀಮಣ್ಣ ಖಂಡ್ರೆ, ಪತ್ನಿ ಡಾ. ಗೀತಾ ಖಂಡ್ರೆ ಹಾಗೂ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಅವರೊಂದಿಗೆ ಭಾಲ್ಕಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ಕ್ಕೆ ಆಗಮಿಸಿ ಮತ ಚಲಾಯಿಸಿದರು.

ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಪತ್ನಿ ಶೀಲಾ ಖೂಬಾ, ಪುತ್ರ ಅಶುತೋಷ ಖೂಬಾ, ಸಹೋದರ ಅಶೋಕ ಖೂಬಾ ಸೇರಿದಂತೆ ಮತ್ತಿತರೊಂದಿಗೆ ಔರಾದ್ ಪಟ್ಟಣದ ಮತಗಟ್ಟೆ ಸಂಖ್ಯೆ 84ಕ್ಕೆ ಆಗಮಿಸಿ ಮತ ಚಲಾಯಿಸಿದರು. ಔರಾದ್ ಶಾಸಕ ಪ್ರಭು ಚವ್ಹಾಣ್‌ ಸ್ವಗ್ರಾಮ ಬೋಂತಿ ಗ್ರಾಮದ ಮತಗಟ್ಟೆ ಸಂಖ್ಯೆ 31ಕ್ಕೆ ಆಗಮಿಸಿ ಮತದಾನ ಮಾಡಿದರು.

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಿಟ್ಟಾವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 61ರಲ್ಲಿ ಮತ ಚಲಾಯಿಸಿದರೆ ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ಹುಮನಾಬಾದ್‌ನ ಮತಗಟ್ಟೆ ಸಂಖ್ಯೆ 167ಕ್ಕೆ ಆಗಮಿಸಿ ಮತ ಚಲಾಯಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಅವರು ಕುಟುಂಬ ಸಮೇತರಾಗಿ ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 178ಕ್ಕೆ ಆಗಮಿಸಿ ಮತದಾನ ಮಾಡಿದರು.

ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಇಲ್ಲಿನ ರೈತ ಭವನದ ಮತಗಟ್ಟೆ ಸಂಖ್ಯೆ 103ರಲ್ಲಿ ಮತದಾನ ಮಾಡಿದರೆ ಮಾಜಿ ಶಾಸಕ ವಿಜಯಸಿಂಗ್‌ ಅವರು ಪತ್ನಿ ಸೋನಾಲ ಅವರೊಂದಿಗೆ ಬಸವಕಲ್ಯಾಣ ನಗರದ ಖಿಲ್ಲಾ ಗಲ್ಲಿಯ ಮತಗಟ್ಟೆ ಸಂಖ್ಯೆ 121ಕ್ಕೆ ಆಗಮಿಸಿ ಮತದಾನ ಮಾಡಿದರು.

ಪೌರಾಡಳಿತ ಸಚಿವ ರಹೀಮ್‌ ಖಾನ್‌ ಬೀದರ್‌ನ ಸಬ್ಬಲ್‌ ಬರೀದ್‌ ಬಡಾವಣೆಯ 151 ಮತಗಟ್ಟೆಯಲ್ಲಿ ಮತದಾನ ಮಾಡಿದರೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಪತ್ನಿ ನಳಿನಿ ಖಾಶೆಂಪೂರ್‌ ಅವರೊಂದಿಗೆ ಹಳೇ ಬೀದರ್‌ನ ಯುನಾನಿ ಆಸ್ಪತ್ರೆಯ ಕಟ್ಟಡದ ಮತಗಟ್ಟೆ ಸಂಖ್ಯೆ 106ರಲ್ಲಿ ಮತದಾನ ಮಾಡಿದರು.

ಬೀದರ್‌ನಲ್ಲಿ ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ತಮ್ಮ ಬೆಂಬಲಿಗರೊಂದಿಗೆ ನಗರದ ಎಲ್‌ಐಜಿ ಕಾಲನಿಯಲಿರುವ ಮತಗಟ್ಟೆ ಸಂಖ್ಯೆ 132ಕ್ಕೆ ತೆರಳಿ ಮತದಾನ ಮಾಡಿದರು.