ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ರದ್ದುಪಡಿಸಲು ಆಗ್ರಹ

| Published : May 05 2024, 02:08 AM IST / Updated: May 05 2024, 01:19 PM IST

Prajwal Revanna

ಸಾರಾಂಶ

ಚಿಕ್ಕಮಗಳೂರು, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಆಗ್ರಹಿಸಿದ್ದಾರೆ.

  ಚಿಕ್ಕಮಗಳೂರು :  ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಆಗ್ರಹಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣವನ್ನು ಒಂದು ವರ್ಷದ ಹಿಂದೆಯೇ ಬಿಜೆಪಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದು ದೇವರಾಜಗೌಡ ಬಹಿರಂಗಪಡಿಸಿದ್ದಾರೆ. ಆದರೂ ಆರೋಪಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಹಾಸನ ಲೋಕಸಭಾ ಚುನಾವಣೆಯನ್ನು ಆಯೋಗ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಯಾರು ಎಂದು ಈಗಾಗಲೇ ಗೊತ್ತಾಗಿದೆ. ಬಂಧಿಸಲು ತಡವೇಕೆ ಎಂದು ಪ್ರಶ್ನಿಸಿದ ಅವರು, ಈ ಮಧ್ಯೆ ಕಾಂಗ್ರೆಸ್ ಬಿಜೆಪಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ. ಆರೋಪಿ ಕುಟುಂಬವನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣ ಮೊದಲೇ ಗೊತ್ತಿದ್ದರಿಂದ ಹೆದರಿ ರಕ್ಷಣೆಗಾಗಿ ಬಿಜೆಪಿ ಜತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಇದು ಸಾಮಾನ್ಯ ಪ್ರಕರಣವಲ್ಲ. ಇಡೀ ದೇಶದ ಜನತೆ ತಲೆ ತಗ್ಗಿಸುವಂತಾಗಿದೆ. ಈ ಸರಕಾರದಿಂದ ಶಾಸಕ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮಗಿಲ್ಲ. ಹೀಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ವಹಿಸಿರುವುದನ್ನು ಸ್ವಾಗತಿಸುತ್ತೇವೆ. ಜೊತೆಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಮುಖಂಡ ಪರಮೇಶ್ವರ್ ಮಾತನಾಡಿ, ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಲೀಸರು ಹಾಕಿರುವ 4 ಸೆಕ್ಷನ್‌ಗಳು ಜಾಮೀನು ತೆಗೆದುಕೊಳ್ಳುವಂತಹ ಕೇಸುಗಳಾಗಿವೆ. ಹಾಸನದ ಮಹಿಳೆ ನೀಡಿರುವ ಪ್ರಕರಣದಲ್ಲಿ ರಾಜ್ಯ ಸರಕಾರ ಜಾಮೀನು ಸಹಿತ ಪ್ರಕರಣ ದಾಖಲು ಮಾಡುವ ಮೂಲಕ ರೇವಣ್ಣ, ಪ್ರಜ್ವಲ್ ಇಬ್ಬರನ್ನೂ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ, ಯು.ಬಿ.ಮಂಜಯ್ಯ, ಕುಮಾರ್, ವಸಂತ, ರತ್ನ, ವಿಜಯ್, ಮಂಜುಳಾ, ಪಿ.ಕೆ.ಮಂಜುನಾಥ ಇದ್ದರು.