ನೆತ್ತಿ ಸುಡುವ ಬಿಸಿಲಿನ ನಡುವೆ ಚುರುಕಿನ ಮತದಾನ

| Published : May 08 2024, 01:07 AM IST

ನೆತ್ತಿ ಸುಡುವ ಬಿಸಿಲಿನ ನಡುವೆ ಚುರುಕಿನ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪತ್ನಿ ಹೇಮಾ ಪಾಟೀಲ, ಪುತ್ರಿ ಲಕ್ಷ್ಮೀ ಪಾಟೀಲ, ಸಹೋದರ ಪಿ.ಕೆ. ಪಾಟೀಲ ಕುಟುಂಬದವರು ಒಟ್ಟಿಗೆ ಆಗಮಿಸಿ ಮತದಾನ ಮಾಡಿದರು

ಗದಗ: ಜಿಲ್ಲಾದ್ಯಂತ ಲೋಕಸಭಾ ಚುನಾವಣೆಯ ಮತದಾನಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಬಂದು ಮತದಾನ ಮಾಡಿದರು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮತದಾನ ನಡೆಯಿತು.

ಕಳೆದ ನಾಲ್ಕೈದು ದಿನಗಳಿಂದ ಸರಾಸರಿ 41 ಡಿಗ್ರಿ ಉಷ್ಣಾಂಶದ ಹಿನ್ನೆಲೆ ಮತದಾನದ ಪ್ರಾರಂಭದ ಪೂರ್ವದಲ್ಲಿಯೇ ವಯೋವೃದ್ಧರು, ಮಧ್ಯ ವಯಸ್ಕರು ಮತ ಕೇಂದ್ರದತ್ತ ಬಂದು ಸರದಿಯಲ್ಲಿ ನಿಂತು ಬಳಿಕ ಮತದಾನ ಆರಂಭವಾಗುತ್ತಿದ್ದಂತೆ ತಮ್ಮ ಹಕ್ಕು ಚಲಾಯಿಸಿದ ಹಿನ್ನೆಲೆ ಸಂಜೆ 5 ಗಂಟೆಯ ವೇಳೆಗೆ ಶೇ.67.47 ರಷ್ಟು ಮತದಾನವಾಯಿತು.

ಗಣ್ಯರ ಮತದಾನ: ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪತ್ನಿ ಹೇಮಾ ಪಾಟೀಲ, ಪುತ್ರಿ ಲಕ್ಷ್ಮೀ ಪಾಟೀಲ, ಸಹೋದರ ಪಿ.ಕೆ. ಪಾಟೀಲ ಕುಟುಂಬದವರು ಒಟ್ಟಿಗೆ ಆಗಮಿಸಿ ಮತದಾನ ಮಾಡಿದರು. ಇನ್ನು ನರಗುಂದ ಪಟ್ಟಣದ ಸರ್ಕಾರ ಶಾಲೆಯಲ್ಲಿನ ಮತದಾನ ಕೇಂದ್ರದ ಸರದಿ ಸಾಲಿನಲ್ಲಿ ನಿಂತು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ಪತ್ನಿ ಶೋಭಾ ಪಾಟೀಲ, ಪುತ್ರ ಉಮೇಶಗೌಡ ಪಾಟೀಲ ಹಾಗೂ ಸೊಸೆಯಂದಿರೊಂದಿಗೆ ಮತದಾನ ಮಾಡಿದರು. ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರಗಳು ಮತದಾನ ಮಾಡಿದರು.

ಕುರುಬ ಸಮಾಜದವರಿಂದ ಪೂಜೆ: ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಕಾರ್ಯ ಪ್ರಾರಂಭಿಸಬೇಕಾದಲ್ಲಿ ಕುರುಬ ಸಮಾಜದವರಿಂದ ಪೂಜೆ ನೆರವೇರಿಸುವುದು ವಾಡಿಕೆ ಮತ್ತು ಶುಭ ಸೂಚಕ ಎನ್ನುವ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಅದು ಈ ಬಾರಿ ಮತದಾನದಲ್ಲಿಯೂ ಕಂಡು ಬಂದಿದ್ದು, ಮತಗಟ್ಟೆಯಲ್ಲೂ ಸಂಪ್ರದಾಯಸದ ಪ್ರಕಾರ ಕುರುಬರಿಂದಲೇ ಮಂಗಳವಾರ ಪೂಜೆ ಸಲ್ಲಿಸಲಾಯಿತು. ಮತದಾನ ಆರಂಭಕ್ಕೂ ಮುನ್ನವೇ ಗದಗ-ಬೆಟಗೇರಿ ನಗರಸಭೆ ಸದಸ್ಯ ಗೂಳಪ್ಪ (ಮುತ್ತು) ಮುಷಿಗೇರಿ ದಂಪತಿಯಿಂದ ಗದಗ ನಗರದ ಸಿ.ಎಸ್. ಪಾಟೀಲ ಪ್ರೌಢ ಶಾಲೆಯ 54 ಹಾಗೂ 55 ಮತಗಟ್ಟೆಯಲ್ಲಿ ಮತಗಟ್ಟೆ ಬಾಗಿಲಿಗೆ ಹೂವಿನ ಮಾಲೆ ಹಾಕಿ, ಕರ್ಪೂರ ಬೆಳಗಿ ತಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಈ ವಿಶೇಷತೆ ಜಿಲ್ಲೆಯಾದ್ಯಂತ ಕಂಡು ಬಂದಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಕುರುಬ ಸಮುದಾಯದವರಿಂದ ಪೂಜೆ ಸಲ್ಲಿಸಿದ ಉದಾಹರಣೆಗಳಿವೆ.

ವಿವಿ ಪ್ಯಾಟ್‌ ತಾಂತ್ರಿಕ ದೋಷ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಆಡಳಿತ ಭವನದ ಕ್ರಮ ಸಂಖ್ಯೆ110, ಮತಗಟ್ಟೆಸಂಖ್ಯೆ 99, 107 ಮತಗಟ್ಟೆಯ ವಿವಿ ಪ್ಯಾಟ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅಧಿಕಾರಿಗಳು ತಕ್ಷಣವೇ ಸರಿಪಡಿಸಿ ಮತದಾನ ಪ್ರಕ್ರಿಯೆ ಪ್ರಾರಂಭಿಸಿದರು. ಇನ್ನುಳಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಈ ಸಮಸ್ಯೆ ಕಂಡು ಬರಲಿಲ್ಲ. ಬೆಳಗ್ಗೆ ಬಿರುಸಿನಿಂದ ಕೂಡಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನ ನಿಧಾನವಾದ ನಂತರ ಸಂಜೆ ವೇಳೆಗೆ ಅಲ್ಪ ಏರಿಕೆ ಕಂಡಿತು.

ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿ ಹಬ್ಬದಂತೆ ಆಚರಿಸಿದ್ದೇವೆ‌, ಅಭಿವೃದ್ಧಿ ಅಂದರೆ ಬಡವರ ಬದುಕಿನಲ್ಲಿ ನಗು ಮೂಡಿಸುವುದು‌ ಎನ್ನುವುದು ನಮ್ಮ ಪಕ್ಷದ ಧ್ಯೇಯ, ರಾಷ್ಟ್ರ ಕಟ್ಟಲು ನಾವು ಗ್ಯಾರಂಟಿ ನೀಡಿದ್ದೇವೆ‌. ಉತ್ತರ ಕರ್ನಾಟಕ ಭಾಗದಲ್ಲಿ ನಾವು ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ದೇಶದ ಭದ್ರತೆ ಮತ್ತು ಸುಭದ್ರ ಆಡಳಿತ ಹಾಗೂ ಭಯ ಮುಕ್ತ ಬದುಕಿಗಾಗಿ ಪ್ರತಿಯೊಬ್ಬರೂ ಬಿಜೆಗೆ ಮತ ನೀಡುತ್ತಾರೆ. ಹೀಗಾಗಿ ಕೇಂದ್ರದಲ್ಲಿ ನಮ್ಮ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಹಾವೇರಿ ಗದಗ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡ್ರ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ರಾಜ್ಯ ಸರ್ಕಾರದ ದುರಾಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನೆಮ್ಮದಿಯ ದೇಶ ನಿರ್ಮಾಣಕ್ಕೆ ಪ್ರದಾನಿ ಮೋದಿ ಅವರಿಗೆ ಜನ ಅಭೂತ ಪೂರ್ವ ಬೆಂಬಲ ನೀಡುತ್ತಾರೆ ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.