ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ vs ರಕ್ಷಾ ರಾಮಯ್ಯ ನಡುವೆ ಬಿಗ್‌ ಫೈಟ್‌

| Published : Apr 20 2024, 01:01 AM IST / Updated: Apr 20 2024, 12:21 PM IST

bjp congress
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ vs ರಕ್ಷಾ ರಾಮಯ್ಯ ನಡುವೆ ಬಿಗ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಡಾ. ಕೆ.ಸುಧಾಕರ್‌ ಸ್ಪರ್ಧೆಯಿಂದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಈ ಬಾರಿ ಪ್ರತಿಷ್ಠಿತ ಕ್ಷೇತ್ರಗಳ ಸಾಲಿಗೆ ಸೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ದಯಾಸಾಗರ್‌

 ಚಿಕ್ಕಬಳ್ಳಾಪುರ :  ಮಾಜಿ ಸಚಿವ ಡಾ. ಕೆ.ಸುಧಾಕರ್‌ ಸ್ಪರ್ಧೆಯಿಂದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಈ ಬಾರಿ ಪ್ರತಿಷ್ಠಿತ ಕ್ಷೇತ್ರಗಳ ಸಾಲಿಗೆ ಸೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌ನ ಭದ್ರಕೋಟೆಯಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಹೀಗಾಗಿ, ಕಾಂಗ್ರೆಸ್ ಈ ಬಾರಿ ಮರಳಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತವಕಿಸುತ್ತಿದೆ. ಇತ್ತ ಬಿಜೆಪಿ ಸಹ ಕ್ಷೇತ್ರವನ್ನು ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದೆ. ಹೀಗಾಗಿ, ಗೆಲ್ಲುವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾರಾಮಯ್ಯ ಅಭ್ಯರ್ಥಿ.

ಅಬ್ಬರದ ಪ್ರಚಾರ:

ಎರಡೂ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಡಾ.ಕೆ.ಸುಧಾಕರ್ ಅವರು ತಾವು ಆರೋಗ್ಯ ಸಚಿವರಾಗಿದ್ದಾಗ ಹಾಗೂ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ತಾವು ಕೈಗೊಂಡ ಜನಪರ ಕಾರ್ಯಕ್ರಮಗಳು ಹಾಗೂ ತಮ್ಮ ಸಾಧನೆಗಳ ಮೇಲೆ ಮತಯಾಚಿಸುತ್ತಿದ್ದಾರೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರುಗಳ ಸಮರ್ಥ ನಾಯಕತ್ವದ ಬೆಂಬಲ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಜೊತೆಗೆ, ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಜೆಡಿಎಸ್ ಮೈತ್ರಿ ಲಾಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು, ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯನವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಸಮರ್ಥ ನಾಯಕತ್ವ, ಜೊತೆಗೆ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ತಮ್ಮ ಕೈಹಿಡಿಯಲಿವೆ ಎಂಬ ಆಶಾವಾದದಲ್ಲಿ ಇದ್ದಾರೆ. ಈ ಮಧ್ಯೆ, ಹಾಲಿ ಸಂಸದ, ಬಿಜೆಪಿಯ ಬಿ.ಎನ್.ಬಚ್ಚೇಗೌಡರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪುತ್ರ ಹೊಸಕೋಟೆಯ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡರ ಬೆಂಬಲಕ್ಕೆ ನಿಂತಿರುವುದು ಕಾಂಗ್ರೆಸ್ ಗೆ ಪ್ಲಸ್‌ ಪಾಯಿಂಟ್‌.

ಕ್ಷೇತ್ರ ಪರಿಚಯ:

ಈ ಹಿಂದೆ ಚಿಕ್ಕಬಳ್ಳಾಪುರ, ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿತ್ತು. 2007ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡಿತು. 1977ರಲ್ಲಿ ಸ್ವತಂತ್ರವಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಈ ಕ್ಷೇತ್ರ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಯ ಕೆಲ ಭಾಗಗಳನ್ನೂ ಒಳಗೊಂಡಿದೆ.

ಕಾಂಗ್ರೆಸ್-ಜೆಡಿಎಸ್‌ನ ಪಾರುಪತ್ಯವಿದ್ದ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ, ಮೋದಿಯ ಅಲೆ, ಒಕ್ಕಲಿಗ ಮತಗಳ ಪ್ರಾಬಲ್ಯದಿಂದ ಬಿಜೆಪಿ ಪಕ್ಷ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿತ್ತು. ಈಗ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಪರಿಶಿಷ್ಟ ಸಮುದಾಯದ ಮತದಾರರೇ ನಿರ್ಣಾಯಕ. ಆದರೂ, ಸಣ್ಣಪುಟ್ಟ ಸಮುದಾಯದ ಅಭ್ಯರ್ಥಿಗಳಿಗೇ ಕ್ಷೇತ್ರದ ಜನ ಮಣೆ ಹಾಕುತ್ತಾ ಬಂದಿದ್ದಾರೆ. 1977ರಿಂದ ಇಲ್ಲಿವರೆಗೆ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಕೇವಲ ಇಬ್ಬರು ಮಾತ್ರ.ಜಾತಿ ಲೆಕ್ಕಾಚಾರ:

ಒಕ್ಕಲಿಗರು 5,50,000, ಪರಿಶಿಷ್ಟ ಜಾತಿ ಮತ್ತು ಪಂಗಡದವರು 6,50,000, ಬಲಿಜಿಗರು 50,000, ಮುಸ್ಲಿಮರು 2 ಲಕ್ಷ, ಕ್ರಿಶ್ಚಿಯನ್ನರು 35 ಸಾವಿರ, ಲಿಂಗಾಯತರು ಹಾಗೂ ಬ್ರಾಹ್ಮಣರು 80 ಸಾವಿರ, ಕುರುಬರು 1 ಲಕ್ಷ, ಇತರ ಸಮುದಾಯದವರು 3 ಲಕ್ಷ ಇದ್ದಾರೆ.

ಅಭ್ಯರ್ಥಿಗಳ ಪರಿಚಯ:ಡಾ.ಕೆ.ಸುಧಾಕರ್‌: (ಬಿಜೆಪಿ):

1973ರ ಜೂನ್‌ 27ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಡಾ.ಕೆ.ಸುಧಾಕರ್, ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಿಂದ ಎಂಬಿಬಿಎಸ್‌ ಪದವಿ ಪಡೆದಿದ್ದಾರೆ. 2018ರಲ್ಲಿ ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾದರು. ನಂತರ, ಬಿಜೆಪಿ ಸೇರಿ 2019ರಲ್ಲಿ ವಿಧಾನಸಭೆಗೆ ಬಿಜೆಪಿಯಿಂದ ಆಯ್ಕೆಯಾದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಸಾಕಷ್ಟು ಹೆಸರು ಮಾಡಿದವರು. ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಉತ್ತಮ ಕೆಲಸ ಮಾಡಿ, ಜನಮನ್ನಣೆಗೆ ಪಾತ್ರರಾದವರು. ಬಿ.ಎಸ್.ಯಡಿಯೂರಪ್ಪನವರ ಸಚಿವಾಲಯದಲ್ಲಿ ಕಿರಿಯ ಕ್ಯಾಬಿನೆಟ್ ಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ರಕ್ಷಾರಾಮಯ್ಯ:(ಕಾಂಗ್ರೆಸ್‌):

ಬಲಿಜ ಜನಾಂಗದ ಎಂ.ಎಸ್‌. ರಕ್ಷಾ ರಾಮಯ್ಯ, ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರ ಪುತ್ರ. ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿ. 38 ವರ್ಷದ ರಕ್ಷಾ ರಾಮಯ್ಯ, ಪ್ರಸ್ತುತ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಮತದಾರರ ಸಂಖ್ಯೆ:ಪುರುಷರು: 10,43,740.

ಮಹಿಳೆಯರು: 9,37,102.

ಇತರರು: 505.

ಒಟ್ಟು: 19,81,347.2019ರ ಚುನಾವಣೆ:

ಬಿ.ಎನ್.ಬಚ್ಚೇಗೌಡ - ಬಿಜೆಪಿ - ಗೆಲುವು: 7,45,912.

ವೀರಪ್ಪ ಮೊಯ್ಲಿ - ಕಾಂಗ್ರೆಸ್‌ - ಸೋಲು: 5,63,802.

ಅಂತರ: 1,82,110 ಮತಗಳು.