ಬೀದರ್‌: ಶಾಂತಿಯುತ ಮತದಾನ, ಜಿಲ್ಲಾಡಳಿತದಿಂದ ಮತದಾರರಿಗಾಗಿ ಅಗತ್ಯ ವ್ಯವಸ್ಥೆ

| Published : May 08 2024, 01:03 AM IST

ಬೀದರ್‌: ಶಾಂತಿಯುತ ಮತದಾನ, ಜಿಲ್ಲಾಡಳಿತದಿಂದ ಮತದಾರರಿಗಾಗಿ ಅಗತ್ಯ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲು ಹೆಚ್ಚಾಗಿದ್ದರಿಂದ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡು ಬಂತು. ಮಧ್ಯಾಹ್ನ ಹೆಚ್ಚು ಬಿಸಿಲಿದ್ದ ಕಾರಣ ಮತಗಟ್ಟೆಗಳಲ್ಲಿ ಜನರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಮತದಾನ ಮಾಡಲು ಬರುವವರಿಗೆ ಬಿಸಿಲಿನ ತೊಂದರೆಯಾಗದಂತೆ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತಿ ಮತಗಟ್ಟೆಗಳಲ್ಲಿ ಎರಡು ವಿಶ್ರಾಂತಿ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಯಸ್ಸಾದವರು, ವಿಕಲಚೇತನರಿಗಾಗಿ ಮತದಾನ ಮಾಡಲು ಬರುವವರಿಗೆ ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಾದ ಬಸವಕಲ್ಯಾಣ, ಹುಮನಾಬಾದ್‌, ಬೀದರ್‌ ದಕ್ಷಿಣ, ಬೀದರ್‌, ಭಾಲ್ಕಿ, ಔರಾದ್‌ ಹಾಗೂ ಕಲಬುರಗಿ ಜಿಲ್ಲೆಯ 2 ಕ್ಷೇತ್ರಗಳಾದ ಚಿಂಚೋಳಿ ಮತ್ತು ಆಳಂದ ವಿಧಾನ ಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

ಬಿಸಿಲು ಹೆಚ್ಚಾಗಿದ್ದರಿಂದ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡು ಬಂತು. ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಬಿಸಿಲಿದ್ದ ಕಾರಣ ಮತಗಟ್ಟೆಗಳಲ್ಲಿ ಜನರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಮತದಾನ ಮಾಡಲು ಬರುವವರಿಗೆ ಬಿಸಿಲಿನ ತೊಂದರೆಯಾಗದಂತೆ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತಿ ಮತಗಟ್ಟೆಗಳಲ್ಲಿ ಎರಡು ವಿಶ್ರಾಂತಿ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಯಸ್ಸಾದವರು, ವಿಕಲಚೇತನರಿಗಾಗಿ ಮತದಾನ ಮಾಡಲು ಬರುವವರಿಗೆ ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿತ್ತು.

ಗಮನ ಸೆಳೆದ ವಿಶೇಷ ಮತಗಟ್ಟೆಗಳು :

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು 30 ಸಖಿ ಮತಗಟ್ಟೆಗಳು. 6 ಯುವ ಮತಗಟ್ಟೆಗಳು. 6 ವಿಶೇಷ ಚೇತನರ ಮತಗಟ್ಟೆಗಳು ಹಾಗೂ 6 ವಿಷಯಾಧಾರಿತ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಮತದಾನ ಮಾಡಲು ಬರುವವರಿಗೆ ಈ ವಿಶೇಷ ಮತಗಟ್ಟೆಗಳು ಗಮನಸೆಳೆದವು. ಸಖಿ ಮತಗಟ್ಟೆಗಳಲ್ಲಿ ಮಹಿಳೆಯರೆ ಮತಗಟ್ಟೆ ಸಿಬ್ಬಂದಿಗಳಿದ್ದು ಅವರು ಗುಲಾಬಿ ಬಣ್ಣದ ಸೀರೆಗಳನ್ನು ಧರಿಸಿದ್ದರು ಇಡೀ ಮತಗಟ್ಟೆಗಳು ಗುಲಾಬಿ ಬಣ್ಣದಲ್ಲಿ ಅಲಂಕಾರವಾಗಿರುವುದು ವಿಶೇಷವಾಗಿ ಕಂಡು ಬಂತು.

ಬೆಳಿಗ್ಗೆ 7ರಿಂದ ಸಂಜೆ 6ಗಂಟೆಗಳವರೆಗೆ ಸುಸೂತ್ರವಾಗಿ ನಡೆದ ಮತದಾನ ಮಧ್ಯಾಹ್ನ ಬಿಸಿಲಿರುವ ಕಾರಣ ಮತಗಟ್ಟೆಗಳಲ್ಲಿ ಕಡಿಮೆ ಜನರು ಇರುವುದು ಕಂಡು ಬಂತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಂತಿಯುತವಾಗಿ ಮತದಾನ ನಡೆಸುವಂತೆ ಚುನಾವಣಾ ಸಿಬ್ಬಂದಿಗಳಿಗೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಮಾತನಾಡಿ, ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮತದಾನ ಮಾಡಲು ಬರುವ ಜನರು ನಿರ್ಭೀತಿಯಿಂದ ಮತದಾನ ಮಾಡಲು ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಬೀದರ್‌ ಜಿಲ್ಲೆ ಮೊದಲಿನಿಂದಲೂ ಶಾಂತಿಪ್ರಿಯ ಜಿಲ್ಲೆಗೆ ಹೆಸರಾಗಿದೆ ಎಂದರು.

ರಾಜ್ಯದ 2ನೇ ಹಂತದ ಮತದಾನ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ನಿಗದಿಯಾಗಿತ್ತಾದರೂ ಕೆಲ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದವರು ರಾತ್ರಿ 7ರ ವರೆಗೆ ಮತದಾನ ಮಾಡಿದ್ದಾರೆ.ಮತದಾನವಾದ ವಿವರ:

ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಶೇ. 8.9, 9ರಿಂದ 11ರ ವರೆಗೆ ಶೇ. 21.92, 11ರಿಂದ 1ರ ವರೆಗೆ ಶೇ. 37.97, ಮಧಾಹ್ನ 1ರಿಂದ 3ರ ವರೆಗೆ ಶೇ. 47.58, ಮಧ್ಯಾಹ್ನ 3ರಿಂದ ಸಂಜೆ 5ರ ಶೇ. 60.2ರಷ್ಟು ಮತದಾನವಾಗಿದೆ.ಚುನಾವಣೆ ಶಾಂತಿಯುತವಾಗಿ ನಡೆದಿದೆ. ಬಿಸಿಲು ಹೆಚ್ಚಾಗಿದ್ದರಿಂದ ಜನರಿಗೆ ತೊಂದರೆಯಾಗದಂತೆ ಮತಗಟ್ಟೆಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೊಲೀಸ್‌ ಸಿಬ್ಬಂದಿಗಳು, ಬಿಎಲ್‌ಒ ಹಾಗೂ ಹೋಮ್‌ಗಾರ್ಡ್ ಮತ್ತು ಆಶಾ ಕಾರ್ಯಕರ್ತೆಯರು ಮತದಾನ ಮಾಡಲು ಬರುವವರಿಗೆ ಸಹಾಯ ಮಾಡಿದ್ದಾರೆ. ಶಾಂತಿಯುತವಾಗಿ ಮತದಾನದಲ್ಲಿ ಭಾಗವಹಿಸಿದ ಬೀದರ್‌ ಲೋಕಸಭಾ ಕ್ಷೇತ್ರದ ಜನತೆಗೆ ಅಭಿನಂದನೆಗಳು ಸಲ್ಲಿಸುತ್ತೇನೆ.

ಗೋವಿಂದರೆಡ್ಡಿ, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ