ಫಿಟ್ನೆಸ್‌ ಸರ್ಟಿಫಿಕೆಟ್‌ ಇಲ್ಲದ ಹಡಗುಗಳ ಬಗ್ಗೆ ಎಚ್ಚರ ಅಗತ್ಯ: ಎ.ವಿ. ರಮಣ

| Published : May 09 2024, 01:02 AM IST

ಫಿಟ್ನೆಸ್‌ ಸರ್ಟಿಫಿಕೆಟ್‌ ಇಲ್ಲದ ಹಡಗುಗಳ ಬಗ್ಗೆ ಎಚ್ಚರ ಅಗತ್ಯ: ಎ.ವಿ. ರಮಣ
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ಯೋಗ್ಯವಲ್ಲದ ಹಡಗುಗಳು ಭಾರತೀಯ ಕಾನೂನಿನ ಲೋಪದೋಗಳ ಲಾಭ ಪಡೆಯುತ್ತಾರೆ. ಹಾಗಾಗಿ ಅಂತಹ ಹಡಗುಗಳಿಂದ ಸಂಕಷ್ಟದ ನೆರವು ಕೋರಿ ಸಂದೇಶ ಬಂದಾಗ ಅಂತಹ ಹಡಗು ಅಂತಾರಾಷ್ಟ್ರೀಯ ವಿಮೆ ಹೊಂದಿರುವುದನ್ನು ಖಾತರಿಪಡಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಮುದ್ರದಲ್ಲಿ ಭಾರತೀಯ ಅಥವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪಾಯಕ್ಕೆ ಸಿಲುಕಿ ನೆರವು ಕೋರುವ ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ಎಚ್ಚರ ವಹಿಸುವಂತೆ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಹಾಗೂ ಸರಕು ಸಾಗಾಟ ಹಡಗುಗಳ ಎಜೆಂಟರಿಗೆ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಎ.ವಿ. ರಮಣ ಸಲಹೆ ನೀಡಿದ್ದಾರೆ.

ಎನ್‌ಎಂಪಿಎ ವತಿಯಿಂದ ನಗರದಲ್ಲಿ ಸೋಮವಾರ ಕಡಲ ಸಮಸ್ಯೆಗಳ ಕುರಿತು ಆಯೋಜಿಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಮುದ್ರದಲ್ಲಿ ಸಂಚರಿಸಲು ಯೋಗ್ಯವಲ್ಲದ, ಫಿಟ್‌ನೆಸ್‌ ಪ್ರಮಾಣ ಪತ್ರ ಹೊಂದಿರದ ವಾಣಿಜ್ಯ ಹಡಗುಗಳು ಪ್ರತಿಕೂಲ ಹವಾಮಾನ, ಚಂಡಮಾರುತ ಬಂದಾಗ ಸಮಸ್ಯೆಗೆ ಒಳಗಾಗುತ್ತವೆ. ಇದರಿಂದ ನಮ್ಮ ಬಂದರು ಮತ್ತು ಸರ್ಕಾರ ತೊಂದರೆಗೆ ಸಿಲುಕಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅಂತಹ ಹಡಗುಗಳು ಸಮುದ್ರದ ನಡುವೆ ಮುಳುಗಡೆಯಾಗುತ್ತವೆ. ಇದರಿಂದ ನಮ್ಮ ಬಂದರು, ಸಮಸ್ಯೆಯ ಜತೆಗೆ ಸಮುದ್ರ ಮಾಲಿನ್ಯವನ್ನು ಎದುರಿಸಬೇಕಾಗುತ್ತದೆ ಎಂದು ಎ.ವಿ. ರಮಣ ಹೇಳಿದರು.

ಸಂಚಾರ ಯೋಗ್ಯವಲ್ಲದ ಹಡಗುಗಳು ಭಾರತೀಯ ಕಾನೂನಿನ ಲೋಪದೋಗಳ ಲಾಭ ಪಡೆಯುತ್ತಾರೆ. ಹಾಗಾಗಿ ಅಂತಹ ಹಡಗುಗಳಿಂದ ಸಂಕಷ್ಟದ ನೆರವು ಕೋರಿ ಸಂದೇಶ ಬಂದಾಗ ಅಂತಹ ಹಡಗು ಅಂತಾರಾಷ್ಟ್ರೀಯ ವಿಮೆ ಹೊಂದಿರುವುದನ್ನು ಖಾತರಿಪಡಿಸಬೇಕು ಎಂದು ಸಲಹೆ ನೀಡಿದರು.

ಸಂಕಷ್ಟದಲ್ಲಿರುವ ಹಡಗುಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು ಹೊರತಂದಿದ್ದು, ಇದನ್ನು ಡೈರೆಕ್ಟರೇಟ್‌ ಜನರಲ್‌ ಆಫ್‌ ಶಿಪ್ಪಿಂಗ್‌, ಅಡಿಶನಲ್‌ ಸೆಕ್ರಟರಿ ಶಿಪ್ಪಿಂಗ್‌, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಇದರಿಂದ ಸಂಚಾರ ಯೋಗ್ಯವಲ್ಲದ ಹಡಗುಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ಬಂದರಿನ ಅಭಿವೃದ್ಧಿ ಸ್ಥಳೀಯ ಅಭಿವೃದ್ಧಿಗೆ ಪೂರಕ. ರಾಜ್ಯ ರಾಜಧಾನಿಯೊಂದಿಗೆ ಮಂಗಳೂರನ್ನು ಸಂಪರ್ಕಿಸುವ ಎನ್‌ಎಚ್‌ 75ರ ಕಾಮಗಾರಿ ಪೂರ್ಣವಾದಾಗ ಬಂದರು ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಮಂಗಳೂರಿನಲ್ಲಿ ಟ್ರಕ್‌ ಟರ್ಮಿನಲ್‌ ಕಾಮಗಾರಿಯ ಪಾಲುದಾರಿಕೆಗೆ ಎನ್‌ಎಂಪಿಎ ಮುಂದೆ ಬಂದಿದೆ ಎಂದರು.

ಮರ್ಮುಗಾಂವ್‌ ಬಂದರು ಪ್ರಾಧಿಕಾರ ಉಪ ಸಂರಕ್ಷಣಾಧಿಕಾರಿ ಕ್ಯಾ.ಮನೋಜ್‌ ಜೋಶಿ, ಬಂದರು, ಶಿಪ್ಪಿಂಗ್‌ ಮತ್ತು ಜಲ ಮಾರ್ಗಗಳ ಸಚಿವಾಲಯದ ಪರಿಸರ ಸಲಹೆಗಾರ ಡಾ.ಆರ್‌.ಡಿ. ತ್ರಿಪಾಠಿ ಇದ್ದರು.