ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ರೈತರ ₹3.50 ಲಕ್ಷ ಕೋಟಿ ಸಾಲ ಮನ್ನಾ

| Published : May 05 2024, 02:13 AM IST / Updated: May 05 2024, 12:03 PM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ರೈತರ ₹3.50 ಲಕ್ಷ ಕೋಟಿ ಸಾಲ ಮನ್ನಾ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ದೇಶದ ಸರ್ವ ಜನರ ಅಭಿವೃದ್ಧಿ ಮಾಡುವ ಎಲ್ಲ ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ

ಗದಗ: ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ ₹ 3.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗುವುದು ಎಂದು ಕರ್ನಾಟಕ ಉಸ್ತುವಾರಿ ರಣದೀಪಸಿಂಗ್‌ ಸುರ್ಜಿವಾಲಾ ಹೇಳಿದರು.

ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರಾರ್ಥವಾಗಿ ಆಯೋಜಿಲಾಗಿದ್ದ ಪ್ರಜಾಧ್ವನಿ 2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಕರ್ನಾಟಕದಲ್ಲಿ ಏನು ಹೇಳಿದೆ‌ ಅದನ್ನು ಮಾಡಿ ತೋರಿಸಿದೆ, ಚುನಾವಣೆಯಲ್ಲಿ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ, ಅದಕ್ಕಾಗಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ದೇಶದ ಸರ್ವ ಜನರ ಅಭಿವೃದ್ಧಿ ಮಾಡುವ ಎಲ್ಲ ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿ, ಆನಂದ ಗಡ್ಡದೇವರಮಠ ಅವರನ್ನು ಗೆಲ್ಲಿಸುವಂತೆ ವಿನಂತಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ದೇಶದ ಎಲ್ಲ ರೈತರ ಸಾಲ ಕೇವಲ ₹ 3 ಲಕ್ಷ ಕೋಟಿ ಇದೆ. ಆದರೆ, ನರೇಂದ್ರ ಮೋದಿ ಸರ್ಕಾರ ದೊಡ್ಡ ಉದ್ದಿಮಿಗಳ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದೊಂದು ಬಡವರ ವಿರೋಧಿ ಸರ್ಕಾರವಾಗಿದ್ದು, ಶ್ರೀಮಂತರ ಪರವಾದ ಸರ್ಕಾರವಾಗಿದೆ ಎಂದರು.

ಕಾನೂನು‌ ಸಚಿವ ಎಚ್.ಕೆ. ಪಾಟೀಲ‌ ಮಾತನಾಡಿ, ನಮ್ಮ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಸಮರ್ಥ ಯುವ ನಾಯಕ, ಇಂತಹ ಯುವ ನಾಯಕನನ್ನು ಸಂಸತ್ ಗೆ ಕಳುಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಗದಗ ಐತಿಹಾಸಿಕ ನಗರವಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.ಆದರೆ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ನಡುವೆ ಜಗಳ ತಂದು ಅಧಿಕಾರ ಮಾಡುವ ಕನಸ್ಸು ಕಾಣುತ್ತಿದೆ. ಯಾವುದೇ ಅಭಿವೃದ್ಧಿ ಆಧಾರಿತ ರಾಜಕೀಯ ಮಾಡದೇ ಧರ್ಮ ಆಧಾರಿತವಾಗಿ ಜನರ ಮನಸ್ಸು ಒಡೆಯುತ್ತಿದ್ದಾರೆ ಇದಕ್ಕೆ ಅವಕಾಶ ಕೊಡಬೇಡಿ ಎಂದರು.

ಕಾರ್ಯಕ್ರಮದಲ್ಲಿ ಬಸವರಾಜ ಶಿವಣ್ಣವರ, ಹಾನಗಲ್ಲ‌ ಶಾಸಕ ಶ್ರೀನಿವಾಸ ಮಾನೆ, ಎಚ್.ಎಸ್. ಸೋಂಪುರ, ಪಾಂಡಿಚೇರಿ ಮಾಜಿ‌ ಮುಖ್ಯಮಂತ್ರಿ ನಾರಾಯಣಸ್ವಾಮಿ, ಎ.ಎಂ. ಹಿಂಡಸಗೇರಿ ಸಲೀಂ ಅಹ್ಮದ ಮುಂತಾದವರು ಮಾತನಾಡಿದರು.

ರೋಣ ಶಾಸಕ ಜಿ.ಎಸ್.ಪಾಟೀಲ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ರಾಮಕೃಷ್ಣ ದೊಡ್ಡಮನಿ, ಡಿ.ಆರ್. ಪಾಟೀಲ, ಸಚಿನ್ ಪಾಟೀಲ, ಕೃಷ್ಣಗೌಡ ಪಾಟೀಲ, ಅಶೋಕ ಮಂದಾಲಿ, ಸಿದ್ದಲಿಂಗೇಶ್ವರ ಪಾಟೀಲ, ಅಭ್ಯರ್ಥಿ ಆನಂದ ಗಡ್ಡದೇವಮಠ ಮುಂತಾದವರು ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿದರು. ಬಿ.ಬಿ. ಅಸೂಟಿ ವಂದಿಸಿದರು.