ಅರುಣ್‌ಗೆ ನಲ್ಲೂರಹಳ್ಳಿಯ ರಾಧಾಕೃಷ್ಣ ದೇವಾಲಯಕ್ಕೆ ವಿಗ್ರಹ ಕೆತ್ತುವ ಹೊಣೆ

| Published : May 09 2024, 01:16 AM IST / Updated: May 09 2024, 09:28 AM IST

ಅರುಣ್‌ಗೆ ನಲ್ಲೂರಹಳ್ಳಿಯ ರಾಧಾಕೃಷ್ಣ ದೇವಾಲಯಕ್ಕೆ ವಿಗ್ರಹ ಕೆತ್ತುವ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಒಳಗೆ ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ನಲ್ಲೂರಹಳ್ಳಿಯ ದೇಗುಲಕ್ಕೆ ರಾಧಾಕೃಷ್ಣ ವಿಗ್ರಹ ಕೆತ್ತನೆ ಮಾಡಲಾಗುವುದು ಎಂದು ರಾಮಲಲ್ಲಾ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಿಳಿಸಿದರು.

 ಮಹದೇವಪುರ ; ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಒಳಗೆ ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ನಲ್ಲೂರಹಳ್ಳಿಯ ದೇಗುಲಕ್ಕೆ ರಾಧಾಕೃಷ್ಣ ವಿಗ್ರಹ ಕೆತ್ತನೆ ಮಾಡಲಾಗುವುದು ಎಂದು ರಾಮಲಲ್ಲಾ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಿಳಿಸಿದರು.

ವೈಟ್‌ಫೀಲ್ಡ್ ಸಮೀಪದ ನಲ್ಲೂರಹಳ್ಳಿಯಲ್ಲಿ ಇಎಲ್‌ವಿ ಪ್ರಾಜೆಕ್ಟ್ಸ್ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ರಾಧಾಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಮಾತನಾಡಿದರು.

ನೂತನ ದೇಗುಲದಲ್ಲಿ ರಾಧಾಕೃಷ್ಣನ ಕಲ್ಲಿನ ವಿಗ್ರಹ ಕೆತ್ತನೆ ಮಾಡುವ ಕಾರ್ಯ ಇಎಲ್‌ವಿ ಪ್ರಾಜೆಕ್ಟ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಭಾಸ್ಕರ್ ಅವರು ನಮಗೆ ಒಪ್ಪಿಸಿದ್ದು, ದೇವಾಲಯದ ಗರ್ಭಗುಡಿ ಹಾಗೂ ಬಾಗಿಲಿನ ಅಳತೆ ವೀಕ್ಷಣೆಗೆ ಆಗಮಿಸಿದ್ದೇವೆ ಎಂದು ತಿಳಿಸಿದರು.

ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಬಿಡುವಿಲ್ಲದಂತಾಗಿದೆ. ಅನೇಕ ಬಾರಿ ಇ.ಎಲ್.ವಿ ಪ್ರಾಜೆಕ್ಟ್ಸ್ ತಂಡದವರು ಸಂಪರ್ಕಿಸಿದ್ದರು. ಬರಲು ಸಾಧ್ಯವಾಗುತ್ತಿರಲಿಲ್ಲ. ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಒಳಗೆ ರಾಧಾಕೃಷ್ಣನ ವಿಗ್ರಹ ಕೆತ್ತನೆ ಮಾಡಬೇಕಿದೆ, ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ವಿಗ್ರಹ ಕೆತ್ತನೆಗೆ ಚಿತ್ರ ರಚಿಸಿ ಬಳಿಕ ವಿಗ್ರಹ ಕೆತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.

ನಂತರ ಇ.ಎಲ್.ವಿ ಪ್ರಾಜೆಕ್ಟ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಭಾಸ್ಕರ್ ಅವರು ಮಾತನಾಡಿ, ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಶಿಲ್ಪಿ ಅರುಣ್ ಯೋಗಿರಾಜ್ ಅವರ ಬಗ್ಗೆ ತಿಳಿದು ಅವರನ್ನು ಸಂಪರ್ಕಿಸಿ ನೂತನ ದೇಗುಲದಲ್ಲಿ ರಾಧಾಕೃಷ್ಣನ ವಿಗ್ರಹ ಕೆತ್ತನೆಯ ಮಹತ್ಕಾರ್ಯವನ್ನು ಅವರಿಗೆ ಒಪ್ಪಿಸುವ ಮಹಾದಾಸೆ ಇತ್ತು. ಕೊನೆಗೂ ಈಗ ನೆರವೇರಿತು ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸ್ಥಳೀಯರಾದ ಎಲ್.ರಾಜೇಶ್ ಅವರು ಸೇರಿದಂತೆ ಸ್ಥಳೀಯ ಅಂಚೆ ಕಚೇರಿ ಸಿಬ್ಬಂದಿ ಹಾಗೂ ಇಎಲ್‌ವಿ ಪ್ರಾಜೆಕ್ಟ್ಸ್ ತಂಡದವರು ಸನ್ಮಾನಿಸಿ ಗೌರವಿಸಿದರು.