ಶಿವಮೊಗ್ಗದಲ್ಲಿ ಕೆ.ಎಸ್‌.ಈಶ್ವರಪ್ಪರಿಂದ ಬಿರುಸಿನ ಪ್ರಚಾರ

| Published : Apr 25 2024, 01:00 AM IST

ಶಿವಮೊಗ್ಗದಲ್ಲಿ ಕೆ.ಎಸ್‌.ಈಶ್ವರಪ್ಪರಿಂದ ಬಿರುಸಿನ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದಲ್ಲಿ ವಿವಿಧ ಕಾರ್‌, ಬೈಕ್‌ ಶೋರೂಂಗಳಿಗೆ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭೇಟಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಸಾಗರ/ ಆನವಟ್ಟಿ

ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದ ವಿವಿಧ ಭಾಗಗಳಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದರು.

ನಗರದ ಮಹಂತಾ ಶೋ ರೂಮ್ ಹಾಗೂ ದ್ಚಿಚಕ್ರ ವಾಹನಗಳ ಶೋರೂಂ ಕಾರ್ತಿಕ್, ಆರ್ಯ ಟಿವಿಎಸ್ ಪ್ರಭು ಮೋಟಾರ್ಸ್ ಶೋ ರೂಂ, ಮಾರುತಿ ಶೋರೂಂ, ರಾಹುಲ್ ಹುಂಡೈ ಶೋರೂಂಗಳಿಗೆ ತೆರಳಿ ಸಿಬ್ಬಂದಿ ಬಳಿ ಮತಯಾಚನೆ ಮಾಡಿದರು.

ಶುಭ ಹಾರೈಸಿದ ಕಾರ್ಮಿಕರು: ಶಿವಮೊಗ್ಗ ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ ಕಾರ್ಮಿಕರು ಕೆ.ಎಸ್.ಈಶ್ವರಪ್ಪ ರವರಿಗೆ ಬಿಳಿ ಕಮಲ ನೀಡಿ ಶುಭ ಹಾರೈಸಿದರು.ಮತ ಯಾಚನೆ ನಿಮಿತ್ತ ಪರ್ಫೆಕ್ಟ್ ಅಲಾಯ್ ಕಾರ್ಖಾನೆಗೆ ಭೇಟಿ ನೀಡಿದ ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಕಾರ್ಖಾನೆ ಕಾರ್ಮಿಕ ರನ್ನು ಭೇಟಿ ಮಾಡಿ ಹಿಂದುತ್ವ ಸಿದ್ಧಾಂತದ ಆಧಾರದ ಮೇಲೆ ಪಕ್ಷ ಶುದ್ಧೀಕರಣ ಮಾಡುವ ಉದ್ದೇಶದಿಂದ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ದ್ದೇನೆ. ನನಗೆ ಜೋಡಿ ಕಬ್ಬಿನ ಜಲ್ಲೆ ಜೊತೆ ಇರುವ ರೈತನ ಚಿಹ್ನೆ ದೊರಕಿದೆ. ಇಲ್ಲಿಯವರೆಗೂ ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ ಎಂಬ ಭಾವನೆ ಇದೆ. ಆದರೆ, ಈ ಬಾರಿ ನನ್ನ ಗುರುತು ಕಮಲ ಇಲ್ಲ, ಯಾವುದೇ ಗೊಂದಲ ಮಾಡಕೊಳ್ಳದೆ ರೈತನ ಚಿಹ್ನೆಗೆ ಮತ ಹಾಕಿ ಎಂದು ಮನವಿ ಮಾಡಿದರು.ಪರ್ಫೆಕ್ಟ್ ಅಲಾಯ್ ಕಾಂಪೊನೆಂಟ್ ನಿರ್ದೇಶಕ ಬಿ.ಸಿ.ನಂಜುಂಡ ಶೆಟ್ಟಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ನಾವು ಇಲ್ಲಿಯವರೆಗೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇವೆ. ಆದರೆ, ಈ ಬಾರಿ ಕೆ.ಎಸ್.ಈಶ್ವರಪ್ಪರವರಿಗೆ ಬೆಂಬಲ ನೀಡಲಿದ್ದೇವೆ. ನೀವು ಸಹ ನಿಮ್ಮ ಅಕ್ಕಪಕ್ಕದ ಮನೆ ಸ್ನೇಹಿತರ ಬಳಿ ತೆರಳಿ ಈಶ್ವರಪ್ಪ ರವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳಿ ಎಂದರು.

ಈ ಸಂಧರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮೋಹನ್, ಕುಮಾರಸ್ವಾಮಿ, ಮಾರುತಿ ಶೋರೂಮ್ ಮಾಲೀಕ ರವೀಂದ್ರನ್ ಉಪಸ್ಥಿತರಿದ್ದರು.

ಖಾಸಗಿ ಬಸ್‌ ನಿಲ್ದಾಣದಲ್ಲಿ ಮತಯಾಚನೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಮತಯಾಚನೆ ನಡೆಸಿದರು.

ಆದಿಚುಂಚನಗಿರಿ ಮಠಕ್ಕೆ ಭೇಟಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪರವರು ನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ವೀರಶೈವ ಲಿಂಗಾಯತ ಮುಖಂಡ ಮಹಾಲಿಂಗ ಶಾಸ್ತ್ರೀ ಮಾಜಿ ಉಪ ಮೇಯರ್ ಲಕ್ಷ್ಮಿ ಶಂಕರ್ ನಾಯ್ಕ್ ಉಪಸ್ಥಿತರಿದ್ದರು.

‘ನನ್ನ ಪರ ಪ್ರಚಾರಕ್ಕೆ ಒಂದು ದಿನ ರಜೆ ಕೊಡಿ’ಬುಧವಾರ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ನಗರದ ಅನೇಕ ವಾಹನಗಳ ಶೋರೂಂಗೆ ಭೇಟಿ ಸಂದರ್ಭ ಎಲ್ಲಾ ಶೋರೂಮ್‌ಗಳ ಮಾಲೀಕರ ಬಳಿ ತೆರಳಿ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿ ಭಾನುವಾರ ಹೊರತುಪಡಿಸಿ ಒಂದು ದಿನದ ರಜೆ ನೀಡಬೇಕು ಎಂದು ಮನವಿ ಮಾಡಿದರು. ಈಶ್ವರಪ್ಪರವರ ಮನವಿ ಸ್ಪಂದಿಸಿದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ, ಆರ್ಯ ಟಿ.ವಿ.ಎಸ್. ಕಾರ್ತಿಕ್ ಹೀರೋ ಶೋರೂಮ್, ಪ್ರಭು ಮೋಟಾರ್ಸ್, ಮಂಹತಾ ಶೋರೂಮ್, ರಾಹುಲ್ ಹುಂಡೈ, ಆದಿಶಕ್ತಿ ಕಾರ್ಸ್, ಮಾರುತಿ ಶೋರೂಂಗಳ ಮಾಲೀಕರು ನಿಮ್ಮ ಪ್ರಚಾರ ಮಾಡಲು ಕಾರ್ಮಿಕ ಹಾಗು ಸಿಬ್ಬಂದಿಗಳಿಗೆ ಒಂದು ದಿನದ ರಜೆ ಕೊಡುವುದಾಗಿ ಹೇಳಿದರು. ಈ ಸದರ್ಭದಲ್ಲಿ ಪರ್ಫೆಕ್ಟ್ ಅಲಾಯ್ ಕಾಂಪೋನೆಂಟ್ ನಿರ್ದೇಶಕರಾದ ವಸಂತ್ ದಿವೇಕರ್, ಬಿ.ಸಿ.ನಂಜುಂಡ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮಹಾಲಿಂಗ ಶಾಸ್ತ್ರಿ ಉಪಸ್ಥಿತರಿದ್ದರು.ರಾಘವೇಂದ್ರಗೆ ಸ್ವಾಮೀಜಿಗಳ ಶಾಪ!

ಸಾಧು ಸಂತರು ಎಂದರೆ ನನಗೆ ದೇವರ ಸಮಾನ. ನಾನು ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನಿಸಿದ ನಂತರ ಕ್ಷೇತ್ರದ ಎಲ್ಲ ಮಠಗಳಿಗೆ ತೆರಳಿ ಸಾಧು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೆ. ಆ ಸಂದರ್ಭದಲ್ಲಿ ರಾಘವೇಂದ್ರ ಹಾಗೂ ಅವರ ಸ್ನೇಹಿತರು ಆಶೀರ್ವಾದ ಮಾಡಿದ ಸ್ವಾಮೀಜಿಗಳಿಗೆ ನೋವು ಉಂಟು ಮಾಡುವ ಹೇಳಿಕೆ ನೀಡಿದ್ದರು. ಸ್ವಾಮೀಜಿಗಳ ನೋವಿನ ಶಾಪ ಅವರಿಗಿದೆ ಎಂದು ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.

ಬಲವಂತದ ಆಶೀರ್ವಾದ ಹಾಗೂ ಪ್ರೀತಿಯಿಂದ ಮಾಡುವ ಆಶೀರ್ವಾದಕ್ಕೂ ವ್ಯತ್ಯಾಸ ಇದೆ. ಪರಮಪೂಜ್ಯ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದ್ದೆ. ಅವರು ಬಹಳ ಹೊತ್ತು ನನ್ನ ಜೊತೆ ಮಾತನಾಡಿ, ಹಿಂದುತ್ವವಾದಿ ಧರ್ಮ ಉಳಿಸಲು ಸ್ಪರ್ಧೆ ಮಾಡಿದ್ದೀರಾ, ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು ಎಂದು ತಿಳಿಸಿದರು.

ರಾಘವೇಂದ್ರ ಹಣವನ್ನು ಹಂಚಿದರೂ ಗೆಲುವು ಮಾತ್ರ ನನ್ನದೇ: ಈಶ್ವರಪ್ಪ

ಸಾಗರ: ನನಗೆ ಅತ್ಯಂತ ಸಂತೋಷ ಕೊಡುವ ರೈತನ ಚಿಹ್ನೆ ಸಿಕ್ಕಿದ್ದು, ಚುನಾವಣೆಯಲ್ಲಿ ಅತಿ ಹೆಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ನಾಮಪತ್ರ ವಾಪಾಸ್ ಪಡೆಯುತ್ತಾರೆಂದು ಅಪ್ಪ- ಮಕ್ಕಳು ಹೇಳುತ್ತಾ ಬಂದಿದ್ದರು. ಈಗ ಚಿಹ್ನೆಯೂ ಸಿಕ್ಕಿರುವುದರಿಂದ ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ಮಾಡುತ್ತಾರೆ, ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಮೂಡಿದೆ ಎಂದು ಹೇಳಿದರು.ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ತೀವ್ರ ಆಕ್ರೋಶವಿದೆ. ಜನರ ಆಕ್ರೋಶ ವ್ಯರ್ಥವಾಗಬಾರದು. ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಭಾರತೀಯ ಜನತಾ ಪಕ್ಷ ಶುದ್ದೀಕರಣವಾಗಬೇಕು ಎನ್ನುವ ಸಂಕಲ್ಪ ಇರಿಸಿಕೊಂಡು ಹೋರಾಟ ಮಾಡುತ್ತಿರುವ ನನಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಜನರು ಸ್ವಯಂಪ್ರೇರಿತವಾಗಿ ನನ್ನ ಚಿಹ್ನೆಯನ್ನು ತಮ್ಮ ವಾಟ್ಸಪ್‌, ಸ್ಟೇಟಸ್‍ಗಳಲ್ಲಿ ಹಾಕಿಕೊಂಡು ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಜನರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಮತಪರಿವರ್ತನೆ ಮಾಡುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸದ್ಯ ನಾನೇ ಬಲಾಢ್ಯ ಅಭ್ಯರ್ಥಿ. ಹಣ ಹಂಚಿದರೂ ಬಿ.ವೈ.ರಾಘವೇಂದ್ರ ಗೆಲ್ಲುವುದಿಲ್ಲ. ಜನ ರಾಘವೇಂದ್ರನ ಹತ್ತಿರ ದುಡ್ಡು ತೆಗೆದುಕೊಳ್ಳುತ್ತಾರೆ. ಈಶ್ವರಪ್ಪನಿಗೆ ಓಟು ಹಾಕುತ್ತಾರೆ. ಈ ಚುನಾವಣೆಯಲ್ಲಿ ಹಣಬಲ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಎಸ್.ವಿ.ಕೃಷ್ಣಮೂರ್ತಿ, ಎಸ್.ಎಲ್.ಮಂಜುನಾಥ್, ಸತೀಶ್ ಗೌಡ ಅದರಂತೆ, ಗೌರೀಶ್ ಇನ್ನಿತರರು ಹಾಜರಿದ್ದರು.ಈ ಚುನಾವಣೆ ಹಣ - ಧರ್ಮದ ನಡುವಿನ ಹೋರಾಟ: ಈಶ್ವರಪ್ಪಆನವಟ್ಟಿ: ಹೊಂದಾಣಿಕೆ ರಾಜಕೀಯದಿಂದಾಗಿ ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್‍ನವರು ಡಮ್ಮಿ ಅಭ್ಯರ್ಥಿಯಾಗಿ ಗೀತಾ ಅವರಿಗೆ ಟಿಕೆಟ್‍ ನೀಡಿದೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‍. ಈಶ್ವರಪ್ಪ ವ್ಯಂಗ್ಯವಾಡಿದರು.ಮಂಗಳವಾರ ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪ್ಪಟ ಹಿಂದುವಾದಿಗಳನ್ನು ಅಪ್ಪ-ಮಕ್ಕಳು ಪಕ್ಷದಿಂದ ದೂರವಿಟ್ಟಿದ್ದಾರೆ. ನಾಗರಾಜಗೌಡ, ಮಾಲತೇಶ್ ಗೋಣಿ ಅವರ ಭವಿಷ್ಯವನ್ನು ತನ್ನ ಮಗನ ಭವಿಷ್ಯಕ್ಕಾಗಿ ಹಾಳು ಮಾಡಿದ್ದಾರೆ. ಮುಂದೆ ಒಬ್ಬ ಮಗ ಮುಖ್ಯಮಂತ್ರಿ ಮತ್ತು ಇನ್ನೊಬ್ಬ ಮಗ ಕೇಂದ್ರಮಂತ್ರಿ ಮಾಡುವ ಆಶಾಭಾವನೆಯಿಂದ ಬಿಜೆಪಿಯಲ್ಲಿರುವ ನಿಷ್ಠಾವಂತ ಹಿಂದೂವಾದಿಗಳನ್ನು ಪಕ್ಷದಿಂದ ದೂರವಿಡುವ ಹುನ್ನಾರ ಮಾಡಿದ್ದಾರೆ. ಎಲ್ಲೋ ಇದ್ದ ಭಾರತಿ ಶೆಟ್ಟಿ ಅವರನ್ನು ಕರೆತಂದು ಎಂಎಲ್‍ಸಿ ಮಾಡಿದರು. ಶೋಭಾ ಅವರನ್ನು ಸಂಸದೆ ಮಾಡಿದರು. ಯಡಿಯೂರಪ್ಪ ಇಲ್ಲಿವರೆಗೂ ತನಗೆ ಬೇಕಾದವರನ್ನು ಮಾತ್ರ ಬೆಳೆಸಿದ್ದಾರೆ. ಈ ಕುಟುಂಬ ರಾಜಕಾರಣ ಅಂತ್ಯ ವಾಗ ಬೇಕು. ಬಿಜೆಪಿ ಶುದ್ಧೀಕರಣವಾಗಬೇಕು. ಅದಕ್ಕಾಗಿ ನಾನು ನೇರ ಸ್ಪರ್ಧೆ ಮಾಡಿದ್ದೇನೆ ಎಂದರು.

ಕಳೆದ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಸೋಲುವ ಹಂತದಲ್ಲಿ ಇದ್ದರು. ಆದರೆ, ಗ್ರಾಮಗಳಲ್ಲಿ ಹಣದ ಹೊಳೆ ಹರಿಸಿದರು. ಅಷ್ಟು ಹಣ ಸುರಿದರೂ 60 ಸಾವಿರ ಅಂತರ ಲೀಡ್‍ ಈಗ 10 ಸಾವಿರಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರಲ್ಲದೆ, ಎಲ್ಲಾ ಜಾತಿ, ಧರ್ಮದಲ್ಲೂ ಹಿಂದುತ್ವ ಬೆಂಬಲಿಸುವವರು ಇದ್ದಾರೆ. ಅವರೇ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಹಿರಂಗ ಸಭೆ: ಏಪ್ರಿಲ್ 28ರಂದು ಆನವಟ್ಟಿಯಲ್ಲಿ ಬೃಹತ್‍ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ನನ್ನ ಗುರುತು ಕಬ್ಬಿನ ಜಲ್ಲೆ ಜೊತೆ ರೈತ. ನನಗೆ ಮತ ನೀಡಿ ಗೆಲ್ಲಿಸುವ ಮೂಲಕ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.