ಸಿಇಟಿ ಸುಸೂತ್ರ: ಪರೀಕ್ಷೆಗೆ 80% ವಿದ್ಯಾರ್ಥಿಗಳು ಹಾಜರು

| Published : Apr 19 2024, 01:13 AM IST / Updated: Apr 19 2024, 08:42 AM IST

ಸಾರಾಂಶ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಶೇ.80ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗ್ಗೆ ಜೀವಶಾಸ್ತ್ರ ಪರೀಕ್ಷೆ, ಮಧ್ಯಾಹ್ನ ಗಣಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.

 ಬೆಂಗಳೂರು:  ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಶೇ.80ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗ್ಗೆ ಜೀವಶಾಸ್ತ್ರ ಪರೀಕ್ಷೆ, ಮಧ್ಯಾಹ್ನ ಗಣಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.

ಒಟ್ಟು 3,49,637 ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದು, ಅದರಲ್ಲಿ ಶೇ. 80ರಷ್ಟು ಮಂದಿ ಹಾಜರಾಗಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಮಲ್ಲೇಶ್ವರ‌ದ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ರಮ್ಯಾ ಅವರು ಪರೀಕ್ಷಾ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಒದಗಿಸಿರುವ ಮೂಲಸೌಲಭ್ಯಗಳ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡರು.ಪಠ್ಯ ಹೊರತಾದ ಪ್ರಶ್ನೆ- ಪರಿಶೀಲನೆ:

ಜೀವವಿಜ್ಞಾನ ಮತ್ತು ಗಣಿತ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯ ವ್ಯಾಪ್ತಿಯ ಹೊರಗಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ಶನಿವಾರ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು. ಅದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ವಿಷಯ ತಜ್ಞರ ತಂಡ ಪರಿಶೀಲಿಸಿ ನೀಡುವ ಸಲಹೆ ಬಗ್ಗೆ ಕೆಇಎ ಸ್ಪಷ್ಟ ತೀರ್ಮಾನ ಮಾಡಲಿದೆ ಎಂದು ಹೇಳಿದರು.

ಇಂದು ಎರಡು ಪತ್ರಿಕೆಗೆ ಪರೀಕ್ಷೆ:  ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳ ಪರೀಕ್ಷೆ ಶುಕ್ರವಾರ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಇಎ ತಿಳಿಸಿದೆ.